ADVERTISEMENT

ತಾಯಿ, ಶಿಶು ಮರಣ ತಗ್ಗಿಸಲು ಯೋಜನೆ: ಸಚಿವ ಡಾ.ಕೆ.ಸುಧಾಕರ್

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2021, 3:55 IST
Last Updated 26 ಸೆಪ್ಟೆಂಬರ್ 2021, 3:55 IST
ತುಮಕೂರು ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೈದ್ಯಕೀಯ ಸಿಬ್ಬಂದಿ
ತುಮಕೂರು ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೈದ್ಯಕೀಯ ಸಿಬ್ಬಂದಿ   

ತುಮಕೂರು: ರಾಜ್ಯದಲ್ಲಿ ತಾಯಿ ಹಾಗೂ ಶಿಶು ಮರಣ ತಗ್ಗಿಸಲು ಕಾರ್ಯಕ್ರಮಗಳನ್ನು ರೂಪಿಸಿದ್ದು, ಆರೋಗ್ಯ ಕ್ಷೇತ್ರದ ಸೌಲಭ್ಯ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ. ಮುಂದಿನ ಐದು ವರ್ಷಗಳಲ್ಲಿ 125 ತಾಯಿ, ಮಗು ಆಸ್ಪತ್ರೆಗಳನ್ನು ತೆರೆಯಲಾಗುವುದು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಶನಿವಾರ ತಾಯಿ– ಮಗು ಆಸ್ಪತ್ರೆ, ಕ್ಯಾನ್ಸರ್ ಚಿಕಿತ್ಸಾ ಕೇಂದ್ರದ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಹಿಳೆ ಸಾವು: ದೇಶದಲ್ಲಿ ಹೆರಿಗೆ ಸಮಯದಲ್ಲಿ ತಾಯಿ ಮರಣ ಪ್ರಮಾಣ ಒಂದು ಲಕ್ಷಕ್ಕೆ 122 ಇದೆ. ರಾಜ್ಯದಲ್ಲಿ ಈ ಸಂಖ್ಯೆ 97 ಇದೆ. 2022ರ ವೇಳೆಗೆ ಸಾವಿನ ಪ್ರಮಾಣವನ್ನು ಒಂದು ಲಕ್ಷಕ್ಕೆ 100ಕ್ಕೆ ಇಳಿಸಲು ಕೇಂದ್ರ ಗುರಿ ಹಾಕಿಕೊಂಡಿದೆ. ವಿಶ್ವ ಆರೋಗ್ಯ ಸಂಸ್ಥೆಯ ನಿರ್ದೇಶನದಂತೆ ಈ ಪ್ರಮಾಣವನ್ನು 70ಕ್ಕೆ ಇಳಿಸಬೇಕಾಗಿದೆ ಎಂದು ಹೇಳಿದರು.

ADVERTISEMENT

ಶಿಶು ಮರಣ: ಅದೇ ರೀತಿಯಲ್ಲಿ ಶಿಶು ಮರಣ ಪ್ರಮಾಣವನ್ನು ತಗ್ಗಿಸಬೇಕಿದೆ. ದೇಶದಲ್ಲಿ ಒಂದು ಸಾವಿರ ಶಿಶುಗಳು ಜನಿಸಿದರೆ, ಅದರಲ್ಲಿ 35 ಸಾವನ್ನಪ್ಪುತ್ತಿವೆ. ರಾಜ್ಯದಲ್ಲಿ ಈ ಪ್ರಮಾಣ 24 ಇದೆ. ಮುಂದಿನ ದಿನಗಳಲ್ಲಿ 10ಕ್ಕೆ ಇಳಿಸುವ ಗುರಿ ಹಾಕಿಕೊಳ್ಳಲಾಗಿದೆ ಎಂದು ತಿಳಿಸಿದರು.

ಆರೋಗ್ಯ ಕ್ಷೇತ್ರದ ಸುಧಾರಣೆಗೆ ಒತ್ತು ನೀಡಲಾಗಿದ್ದು, ವೈದ್ಯರ ಕೊರತೆ ನೀಗಿಸಲಾಗಿದೆ. ಕಳೆದ ಏಳು ತಿಂಗಳಲ್ಲಿ 4 ಸಾವಿರ ವೈದ್ಯರನ್ನು ನೇಮಕ ಮಾಡಿಕೊಳ್ಳಲಾಗಿದೆ. ಜಿಲ್ಲೆಯ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು ಕಾರ್ಯ ನಿರ್ವಹಿಸುತ್ತಿದ್ದಾರೆ. ಆರೋಗ್ಯ ಹಾಗೂ ಶಿಕ್ಷಣಕ್ಕೆ ಒತ್ತು ನೀಡಿದರೆ ದೇಶ ಅಭಿವೃದ್ಧಿಯತ್ತ ಸಾಗುತ್ತದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.