ತಿಪಟೂರು ತಾಲ್ಲೂಕಿನ ನೊಣವಿನಕೆರೆ ಪಿಎಂಶ್ರೀ- ಕೆಪಿಎಸ್ ಪ್ರಾಥಮಿಕ ಶಾಲೆ
ತಿಪಟೂರು: ತಾಲ್ಲೂಕಿನ ನೊಣವಿನಕೆರೆ (ಮಕ್ಷಿಕಾಪುರಿ) ಪಿಎಂಶ್ರೀ– ಕೆಪಿಎಸ್ ಶಾಲೆಗೆ ಸುತ್ತಲಿನ 47 ಗ್ರಾಮಗಳಿಂದ ಸ್ವತಃ ಪೋಷಕರೇ 18 ವಾಹನಗಳ ವ್ಯವಸ್ಥೆ ಮಾಡಿಕೊಂಡು ಮಕ್ಕಳನ್ನು ಕಳುಹಿಸುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ದಾಖಲಾತಿ ಹೆಚ್ಚಿಸಿಕೊಂಡು ಮಾದರಿ ಶಾಲೆ ಎನಿಸಿಕೊಂಡಿದೆ.
ಈ ಶಾಲೆ 1895ರಲ್ಲಿ ಪ್ರಾಥಮಿಕ ಶಾಲೆಯಾಗಿ ಪ್ರಾರಂಭವಾಯಿತು. 1963ರಲ್ಲಿ ಸರ್ಕಾರಿ ಮಾದರಿ ಬಾಲಕರ ಪ್ರಾಥಮಿಕ ಶಾಲೆಯಾಗಿ, 1994ರಲ್ಲಿ ಸರ್ಕಾರಿ ಕನ್ನಡ ಮಾದರಿ ಪ್ರಾಥಮಿಕ ಶಾಲೆಯಾಯಿತು. 2018-19ರಲ್ಲಿ ಕೆಪಿಎಸ್ ಶಾಲೆಯಾಗಿ, ಈಗ 2022-23ರಲ್ಲಿ ಪಿಎಂಶ್ರೀ ಶಾಲೆಯಾಗಿ ಪರಿವರ್ತನೆಗೊಂಡಿದೆ.
ಸದ್ಯ ಶಾಲೆಯಲ್ಲಿ 750 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಗುಣಮಟ್ಟದ ಶಿಕ್ಷಣ, ಆಹಾರದೊಂದಿಗೆ ಮಕ್ಕಳು ಇಂಗ್ಲಿಷ್‌ನಲ್ಲಿಯೇ ಮಾತನಾಡುವ ಛಾತಿ ಹೊಂದಿದ್ದಾರೆ.
ಕಲೆ, ಪ್ರತಿಭೆ ಪ್ರದರ್ಶನ, ಜನಪದ ಕಲೆ, ಪಾರಂಪರಿಕ ವಸ್ತು, ಸಾಂಪ್ರದಾಯಿಕ ಕೃಷಿ ಉಪಕರಣ, ರಂಗೋಲಿ, ಗ್ರಾಮೀಣ ಆಟ, ವಿಜ್ಞಾನ ಹಾಗೂ ತಂತ್ರಜ್ಞಾನ ಬಳಕೆಯ ಮಾದರಿ ಒಳಗೊಂಡಿರುವುದು ಶಾಲೆಗೆ ಮಕ್ಕಳ ದಾಖಲಿಸಲು ಪ್ರೇರಣೆಯಾಗಿದೆ.
ಮಕ್ಕಳಿಗೆ ಪ್ರತಿದಿನ ಪ್ರಾರ್ಥನೆ ಅವಧಿಯಲ್ಲಿ ತರಗತಿಗೆ ಒಂದರಂತೆ ಕಲಿಕಾ ಚಟುವಟಿಕೆಗಳನ್ನು ನೀಡಲಾಗುತ್ತಿದೆ. ‘ಒಗಟು ಬಿಡಿಸೋಣ ಬನ್ನಿ’, ‘ಮಕ್ಕಳ ಕವನ ವಾಚನ’, ‘ಕಗ್ಗ ಹೇಳೋಣ’, ‘ವಾರದ ವ್ಯಕ್ತಿ’, ‘ಪಟ್ ಅಂತ ಹೇಳಿ ಪೆನ್ನು ಗೆಲ್ಲಿ’, ‘ಕುತೂಹಲಕ್ಕೊಂದು ನನ್ನ ಪ್ರಶ್ನೆ’, ‘ಜ್ಞಾನ ಪ್ರಯೋಗ ಕಿರಣ’, ‘ಮನೆ ಮದ್ದು ಆರೋಗ್ಯ’, ‘ಮುದ್ದುರಾಮನ ಪದ್ಯ ವಾಚನ’, ‘ವಿನೋದ ಪ್ರಶ್ನೆಗಳು’, ‘ಕನ್ನಡ ಮತ್ತು ಇಂಗ್ಲೀಷ್ ದಿನಪತ್ರಿಕೆ ಓದು’, ‘ಪುಸ್ತಕ ಪರಿಚಯ’, ‘ಇಂಗ್ಲಿಷ್ ಕಲಿಯೋಣ ಬನ್ನಿ, ಮುಂತಾದ ಸಭಾ ಕಂಪನ ಹೋಗಲಾಡಿಸಲು ಹತ್ತು ಹಲವು ಚಟುವಟಿಕೆಗಳನ್ನು ನಿರಂತರವಾಗಿ ನೆಡಸಲಾಗುತ್ತಿದೆ. ಇವುಗಳಿಗೆ ಸೂಕ್ತ ಬಹುಮಾನಗಳನ್ನು ನೀಡಿ ಪ್ರೇರೇಪಿಸಲಾಗುತ್ತಿದೆ.
ಶಾಲಾ ಸಂಸತ್ತು, ಭಾಷಾ ಸಂಘಗಳು, ಇಕೋ ಹಾಗೂ ವಿಜ್ಞಾನ ಕ್ಲಬ್, ಕಲಾ, ಸಾಂಸ್ಕೃತಿಕ ಸಂಘ, ಮೀನಾ ಸಂಘ,(ಆಪ್ತ ಸಮಾಲೋಚನಾ ಸಂಘ), ಮಕ್ಕಳ ಹಕ್ಕುಗಳ ಸಂಘ, ಶಾಲಾ ಪೊಲೀಸ್ ಪಡೆಯ ಗುಂಪುಗಳನ್ನು ರಚಿಸಿ ವಿದ್ಯಾರ್ಥಿಗಳು ಚಟುವಟಿಕೆಯಿಂದ ಇರಲು ಅವಕಾಶ ಕಲ್ಪಿಸಿದ್ದಾರೆ.
ಶಾಲೆಯಲ್ಲಿ ಒಟ್ಟು 27 ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದು, ಹಿರಿಯ ವಿದ್ಯಾರ್ಥಿಗಳ ಸಂಘ, ಅರ್ಹತಾ ಫೌಂಡೇಷನ್, ಪೋಷಕರ ಸಹಾಯದಿಂದ ಆರು ಶಿಕ್ಷಕರನ್ನು ನಿಯೋಜಿಸಲಾಗಿದೆ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗಾಗಿ ಪ್ರತ್ಯೇಕವಾಗಿ ಶಿಕ್ಷಕರನ್ನು ನಿಯೋಜಿಸಲಾಗಿದೆ.
ದಾಖಲಾತಿ ಬಯಸುವ ಎಲ್ಲ ಮಕ್ಕಳಿಗೂ ಅವಕಾಶ ನೀಡಲು ಸಾದ್ಯವಾಗುತ್ತಿಲ್ಲ. ಇಲಾಖೆಯ ನಿಯಾವಳಿ ಹಾಗೂ ಭೌತಿಕ ಲಭ್ಯತೆ ಆಧರಿಸಿ ಅವಕಾಶ ಕಲ್ಪಿಸಲಾಗುತ್ತಿದೆ. 16 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದು, ಸರ್ಕಾರಿ ಶಾಲೆಯ ಉಳಿವು ಮತ್ತು ಅಭಿವೃದ್ಧಿಗಾಗಿ ಪೂರಕ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ಪೋಷಕರು, ಹಿರಿಯ ವಿದ್ಯಾರ್ಥಿಗಳ ಸಹಕಾರದಿಂದ ಶಾಲೆ ಪ್ರಗತಿ ಕಾಣಲು ಸಾದ್ಯ.
ಸುರೇಶ ಎಸ್.ಆರ್., ಮುಖ್ಯಶಿಕ್ಷಕ
ಈ ಶಾಲೆಯ ಮುಖ್ಯ ಶಿಕ್ಷಕರು ಹತ್ತು ವರ್ಷಗಳ ಹಿಂದೆಯೇ ಮುಂದಾಲೋಚಿಸಿ ಎಲ್‌ಕೆಜಿ, ಯುಕೆಜಿ ಹಾಗೂ ಇಂಗ್ಲಿಷ್ ಮಾಧ್ಯಮ ಪ್ರಾರಂಭಿಸಿದ್ದಾರೆ. ಪೋಷಕರ ಸಹಕಾರದಿಂದ ಶಿಕ್ಷಕರನ್ನ ನೇಮಿಸಿಕೊಂಡಿದ್ದಾರೆ. ಶಾಲೆ ಪಕ್ಕದಲ್ಲಿಯೇ ಪಾಳು ಬಿದ್ದಿದ್ದ ಪದವಿ ಕಾಲೇಜಿನ ಕಟ್ಟಡವನ್ನು ದುರಸ್ತಿ ಮಾಡಿಸಿ, ಸದ್ಬಳಕೆ ಮಾಡಿಕೊಂಡಿದ್ದಾರೆ. 2009-10ರಲ್ಲಿ 168 ಮಕ್ಕಳಿದ್ದ ಶಾಲೆಯಲ್ಲಿ, ಸದ್ಯ 750 ವಿದ್ಯಾರ್ಥಿಗಳ ಕಲಿಯುತ್ತಿದ್ದಾರೆ. ಈ ಶಾಲೆಗೆ ಮಕ್ಕಳನ್ನು ದಾಖಲಿಸುವುದೇ ಪೋಷಕರಿಗೆ ಹೆಮ್ಮೆ ಎನಿಸಿದೆ.
ದಸ್ತಗೀರ್, ಪೋಷಕ
ಗ್ರಾಮದ ಸರ್ಕಾರಿ ಶಾಲೆ ಮುಂಚೂಣಿಯಲ್ಲಿದೆ. ಇಲ್ಲಿನ ಶಿಕ್ಷಕರ ಶ್ರಮ, ತ್ಯಾಗ, ಶ್ರದ್ಧೆಯಿಂದ ಮಕ್ಕಳಲ್ಲಿ ಜ್ಞಾನದ ಹಂಬಲ ಹೆಚ್ಚಾಗುವಂತೆ ಮಾಡಿದ್ದಾರೆ. ಮುಖ್ಯಶಿಕ್ಷಕರ ಕೂಡುಗೆ ಅಪಾರ. ಶಾಲೆಯಲ್ಲಿ ನಿರೀಕ್ಷೆಗೆ ಮೀರಿದ ಮಕ್ಕಳಿದ್ದು ಸರ್ಕಾರ ಹಲವು ಮೂಲ ಸೌಕರ್ಯಗಳನ್ನು ನೀಡುವುದರ ಮೂಲಕ ಉತ್ತೇಜನ ನೀಡಬೇಕಿದೆ.
ದೊಡ್ಡರಂಗಪ್ಪ, ಎಸ್‌ಡಿಎಂಸಿ ಉಪಾಧ್ಯಕ್ಷ
ಶಾಲೆಯಲ್ಲಿ ಪಾಠಗಳ ಜೊತೆ ಸ್ಪರ್ಧಾತ್ಮಕ ಚಟುವಟಿಕೆಗಳಲ್ಲಿ ಭಾಗಿಯಾಗುವ ಅಂಶ ಹಾಗೂ ನಾಯಕತ್ವ ಗುಣಗಳನ್ನು ವೃದ್ಧಿಸಿಕೊಳ್ಳುವ ಮೂಲಕ ಇತರೆ ವಿಷಯಗಳ ಕಲಿಕೆಯೂ ನಡೆಯುತ್ತದೆಅಮೂಲ್ಯ, 7ನೇ ತರಗತಿ
ಶಾಲೆಯಲ್ಲಿ ಪ್ರತಿನಿತ್ಯ ಹೊಸತನ ಕಾಣುತ್ತಿದ್ದೇವೆ, ಶಿಕ್ಷಕರು ನಮಗೆ ಅರ್ಥವಾಗುವ ರೀತಿಯಲ್ಲಿ ತರಗತಿಗಳನ್ನು ನಡೆಸುತ್ತಿದ್ದು, ಖಾಸಗಿ ಶಾಲೆ ಮಕ್ಕಳಿಗಿಂತ ಜವಾಬ್ದಾರಿ, ಶಿಸ್ತುಬದ್ಧವಾಗಿ ನೋಡಿಕೊಳ್ಳುತ್ತಿದ್ದಾರೆ.ತೇಜಸ್, 7ನೇ ತರಗತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.