ADVERTISEMENT

ವಿದ್ಯುತ್ ಖಾಸಗೀಕರಣ: ಬೀದಿಗಿಳಿದ ರೈತರು

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2021, 4:05 IST
Last Updated 11 ಆಗಸ್ಟ್ 2021, 4:05 IST
ವಿದ್ಯುತ್ ತಿದ್ದುಪಡಿ ಮಸೂದೆಯನ್ನು ವಿರೋಧಿಸಿ ತುಮಕೂರಿನಲ್ಲಿ ರೈತ ಸಂಘದ ನೇತೃತ್ವದಲ್ಲಿ ರೈತರು ಪ್ರತಿಭಟನಾ ಮೆರವಣಿಗೆ ನಡೆಸಿದರು
ವಿದ್ಯುತ್ ತಿದ್ದುಪಡಿ ಮಸೂದೆಯನ್ನು ವಿರೋಧಿಸಿ ತುಮಕೂರಿನಲ್ಲಿ ರೈತ ಸಂಘದ ನೇತೃತ್ವದಲ್ಲಿ ರೈತರು ಪ್ರತಿಭಟನಾ ಮೆರವಣಿಗೆ ನಡೆಸಿದರು   

ತುಮಕೂರು: ಕೇಂದ್ರ ಸರ್ಕಾರ ವಿದ್ಯುತ್ ತಿದ್ದುಪಡಿ ಮಸೂದೆ ಮಂಡಿಸುವುದನ್ನು ವಿರೋಧಿಸಿ ರಾಜ್ಯ ರೈತ ಸಂಘಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆನಡೆಸಿದರು.

ಈ ಸಂದರ್ಭದಲ್ಲಿ ವಿದ್ಯುತ್ ಮೀಟರ್‌ಗಳನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು. ವಿದ್ಯುತ್ ಕ್ಷೇತ್ರದ ಖಾಸಗೀಕರಣವನ್ನು ತೀವ್ರವಾಗಿ ವಿರೋಧಿಸಿದರು. ಕೇಂದ್ರ, ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು. ವಿದ್ಯುತ್ ಸೇರಿದಂತೆ ಹಲವು ಸೇವಾ ವಲಯಗಳನ್ನು ಖಾಸಗೀಕರಣ ಮಾಡಲಾಗುತ್ತಿದೆ ಎಂದುಟೀಕಿಸಿದರು.

ಕೇಂದ್ರ ಸರ್ಕಾರವು ಜನ ವಿರೋಧಿ, ಕಾರ್ಪೊರೇಟ್ ಕಂಪನಿಗಳ ಪರವಾದ ಕಾನೂನು ಜಾರಿಗೆ ತರುತ್ತಿದೆ. ರೈತರು, ಸಾರ್ವಜನಿಕರು, ಕಾರ್ಮಿಕರ ವಿರೋಧಿ ಕಾನೂನುಗಳು ರೂಪುಗೊಂಡಿವೆ. ದುಡಿಯುವ ಜನರನ್ನು ಕಾರ್ಪೊರೇಟ್ ಕಂಪನಿಗಳ ಗುಲಾಮರನ್ನಾಗಿಸುವ ಹುನ್ನಾರ ನಡೆದಿದೆ. ಅದರ ಮುಂದುವರಿದ ಭಾಗವಾಗಿ ವಿದ್ಯುತ್ ಕ್ಷೇತ್ರವನ್ನೂ ಖಾಸಗೀಕರಣ ಮಾಡಲಾಗುತ್ತಿದೆ. ಇದರ ವಿರುದ್ಧ ದೇಶದಾದ್ಯಂತ ರೈತರು ಪ್ರತಿಭಟನೆಗೆ ಇಳಿದಿದ್ದಾರೆ. ಒಂದು ವೇಳೆ ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಸಿದರೆ ಅವುಗಳನ್ನು ಕಿತ್ತು ಬೆಂಕಿಗೆ ಹಾಕುವುದಾಗಿಎಚ್ಚರಿಸಿದರು.

ADVERTISEMENT

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಆನಂದಪಟೇಲ್ ‘ದೇಶದ ಶೇ 70ರಷ್ಟು ಜನರು ಕೃಷಿಯನ್ನೇ ನಂಬಿ ಬದುಕುತ್ತಿದ್ದಾರೆ. ಹವಾಮಾನ ವೈಪರಿತ್ಯ, ಬರ, ನೆರೆ, ರಸಗೊಬ್ಬರ, ಬಿತ್ತನೆ ಬೀಜಗಳ ಬೆಲೆ ಹೆಚ್ಚಳ– ಎಲ್ಲವನ್ನು ಸಹಿಸಿಕೊಂಡು ಕೃಷಿಮಾಡಿ ಅನ್ನ ನೀಡುತ್ತಿದ್ದಾರೆ. ಇಂತಹ ಸ್ವಾವಲಂಬಿ ಕ್ಷೇತ್ರವನ್ನು ಖಾಸಗಿ ಕಂಪನಿಗಳ ಕಪಿಮುಷ್ಠಿಗೆ ನೀಡಲು ಹೊರಟಿರುವುದು ಸರಿಯಲ್ಲ’ ಎಂದು ಹೇಳಿದರು.

ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಧನಂಜಯ್ಯ ಆರಾಧ್ಯ, ‘ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿಗಳಿಂದಾಗಿ ರೈತರ ಆದಾಯದಲ್ಲಿ ಗಣನೀಯ ಕುಸಿತ ಕಂಡಿದೆ. ಕೃಷಿರಾಜ್ಯ ವಲಯದಲ್ಲಿದ್ದರೂ, ಕೇಂದ್ರವು ಬಲ ಪ್ರಯೋಗದ ಮೂಲಕ ಕಾಯ್ದೆಗಳನ್ನು ಬಲವಂತವಾಗಿ ಹೇರುವ ಕೆಲಸ ಮಾಡುತ್ತಿದೆ. ಇಂತಹ ನೀತಿಗಳು ಒಕ್ಕೂಟ ವ್ಯವಸ್ಥೆಯಲ್ಲಿ ಒಳ್ಳೆಯ ಬೆಳವಣಿಗೆಯಲ್ಲ. ರೈತರ ನೀರಾವರಿ ಪಂಪ್‍ಸೆಟ್‍ಗಳಿಗೆಮೀಟರ್ ಅಳವಡಿಸುವ ಪ್ರಸ್ತಾವ ಕೈಬಿಡಬೇಕು’ ಎಂದುಆಗ್ರಹಿಸಿದರು.

ಸಂಘದ ಕೊರಟಗೆರೆ ತಾಲ್ಲೂಕು ಅಧ್ಯಕ್ಷ ಕೋಡ್ಲಹಳ್ಳಿ ಸಿದ್ದರಾಜು, ಕುಣಿಗಲ್ ಅನಿಲ್‍ಕುಮಾರ್, ತಿಪಟೂರು ಪುಟ್ಟರಾಜು, ಶಿರಾ ಸಣ್ಣದ್ಯಾಮೇಗೌಡ, ಮುಖಂಡರಾದ ಗಂಗರಾಜು, ಕೀರ್ತಿ, ಬಸ್ತಿಹಳ್ಳಿ ರಾಜಣ್ಣ, ರುದ್ರೇಶಗೌಡ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.