ADVERTISEMENT

ಹಲೋ...ಹೇಳಿ ನಾನ್ ಡಿ.ಸಿ ಮಾತನಾಡ್ತಿದ್ದಿನಿ

ಪ್ರಜಾವಾಣಿ ‘ಫೋನ್‌ ಇನ್‌’ನಲ್ಲಿ ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ ಕುಮಾರ್; ತಿಂಗಳಲ್ಲಿ ಐದು ಒತ್ತುವರಿ ಪ್ರಕರಣ ಇತ್ಯರ್ಥ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2020, 14:57 IST
Last Updated 18 ಫೆಬ್ರುವರಿ 2020, 14:57 IST
ಡಾ.ಕೆ. ರಾಕೇಶ್ ಕುಮಾರ್
ಡಾ.ಕೆ. ರಾಕೇಶ್ ಕುಮಾರ್   

ತುಮಕೂರು: ಸಾ...ರ್ ನಮಗೆ ಸಂಬಳ ಆಗದೆ ಏಳು ತಿಂಗಳಾಯಿತು. ನಮ್ಮೂರ್‍ನಾಗೆ ಹೆಣ ಹೂಳಕ್ಕೆ ಜಾಗ ಇಲ್ಲ. ಪೊಲೀಸ್‌ನವರು ದುಡ್ಡ್ ಕೊಟ್ಟೋವರ ಕಂಪ್ಲೆಂಟ್ ಮಾತ್ರ ತೊಗೋತಾರೆ. ದೊಡ್ಡ ಮನುಷ್ಯರು ಕೆರೆ–ರಸ್ತೆ ಒತ್ತುವರಿ ಮಾಡ್ಕೊಂಡವ್ರೆ. ಆಸ್ಪತ್ರೆಲಿ ಡಾಕ್ಟರೇ ಇರೋದಿಲ್ಲ. ಕುಡಿಯೋಕ್ಕೆ ನೀರೇ ಸಿಗಕ್ಕಿಲ್ಲ, ಸಮಸ್ಯೆ ಪರಿಹರಿಸಿ...

ಇದು ‘ಪ್ರಜಾವಾಣಿ’ ನಡೆಸಿದ ‘ಫೋನ್‌ ಇನ್‌’ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ ಕುಮಾರ್ ಅವರ ಬಳಿ ನಾಗರಿಕರು ಹೇಳಿಕೊಂಡ ಸಮಸ್ಯೆಗಳಿವು.

ಜಿಲ್ಲೆಯ ವಿವಿಧ ಭಾಗಗಳ ನಾಗರಿಕರು ಎಡೆಬಿಡದೆ ಕರೆ ಮಾಡಿ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು. ಕಾರ್ಯಕ್ರಮಕ್ಕೆ 1 ಗಂಟೆ ಸಮಯ ನಿಗದಿಯಾಗಿತ್ತು. ನಿರಂತರವಾಗಿ ಕರೆಗಳು ಬರುತ್ತಿದ್ದ ಕಾರಣ ಅರ್ಧಗಂಟೆ ಹೆಚ್ಚುವರಿಯಾಗಿ ಜಿಲ್ಲಾಧಿಕಾರಿ ಅವರು ತಾಳ್ಮೆಯಿಂದ ಜನರ ಸಮಸ್ಯೆ ಆಲಿಸಿದರು.

ADVERTISEMENT

ಅನೇಕರು ಸಾರ್ವಜನಿಕ ಸಮಸ್ಯೆಗಳಲ್ಲದೆ ವೈಯಕ್ತಿಕ ಸಮಸ್ಯೆಗಳನ್ನೂ ಹೇಳಿಕೊಂಡರು. ಕೆಲವರ ಸಮಸ್ಯೆಗಳಿಗೆ ಕಾನೂನು ರೀತಿಯಲ್ಲಿ ಮಾರ್ಗದರ್ಶನ ನೀಡಿದರು. ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸುವ ಅಭಯ ನೀಡಿದರು.

‘ಫೋನ್‌ ಇನ್‌’ನಲ್ಲಿ ಪ್ರಮುಖವಾಗಿ ಕೆರೆ, ರಸ್ತೆ, ಸ್ಮಶಾನ, ಗೋಮಾಳ ಒತ್ತುವರಿಯ ಬಗ್ಗೆ ಅನೇಕರು ಮಾಹಿತಿ ನೀಡಿದರು. ಒತ್ತುವರಿ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಧಿಕಾರಿ ಪ್ರತಿ ತಿಂಗಳು ಜಿಲ್ಲೆಯಲ್ಲಿ 5 ಒತ್ತುವರಿ ಪ್ರಕರಣಗಳನ್ನು ಇತ್ಯರ್ಥಪಡಿಸುವ ಕುರಿತು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗುವುದು ಎಂದರು.

‘ಫೋನ್‌ ಇನ್‌’ನ ಆಯ್ಕೆ ಪ್ರಶ್ನೆಗಳು ಮತ್ತು ಜಿಲ್ಲಾಧಿಕಾರಿ ಅವರ ಉತ್ತರಗಳನ್ನು ಇಲ್ಲಿ ಪ್ರಕಟಿಸಲಾಗಿದೆ.

*ಮೋಹನ್‌ ಕುಮಾರ್, ಗೌರಿಪುರ, ಗುಬ್ಬಿ ತಾ.

ಪ್ರಶ್ನೆ: ಗೌರಿಪುರ ಭಾಗದಲ್ಲಿ 65 ಎಕರೆ ಗೋಮಾಳವಿದ್ದು ಅದನ್ನು ಕೆರೆಯಾಗಿ ಪರಿವರ್ತಿಸಿ ಜನ–ಜಾನುವಾರುಗಳಿಗೆ ಅನುಕೂಲ ಮಾಡಿಕೊಡಿ.

ಡಿಸಿ: ಗೋಮಾಳ ಜಾಗವನ್ನು ಕೆರೆಯಾಗಿ ಪರಿವರ್ತಿಸಲು ಬರುವುದಿಲ್ಲ. ಬೇರೆ ಜಾಗ ಅಭಿವೃದ್ಧಿಪಡಿಸುವ ಕುರಿತು ಪರಿಶೀಲಿಸುವೆ.

*ಕಾಶಿನಾಥ್, ಮದ್ದಕ್ಕನಹಳ್ಳಿ, ಶಿರಾ ತಾ.

ಪ್ರಶ್ನೆ: ಗ್ರಾಮದ ಸ.ನಂ 13, 14ರಲ್ಲಿ ನಿಯಮ ಉಲ್ಲಂಘಿಸಿ ಕಲ್ಲು ಗಣಿಗಾರಿಕೆ ನಡೆಯುತ್ತಿದೆ.

ಡಿಸಿ: ಮೊದಲು ಕ್ವಾರಿಯ ಯೋಜನೆ ಸಿದ್ದಪಡಿಸಿ, ಪರಿಸರ ಇಲಾಖೆಯಿಂದ ಅನುಮತಿ ಪಡೆದ ನಂತರವೇ ಗಣಿಗಾರಿಕೆಗೆ ಅವಕಾಶ ನೀಡಲಾಗುವುದು. ಇಲ್ಲಿ ನಿಯಮಗಳನ್ನು ಉಲ್ಲಂಘಿಸಿ ಗಣಿಗಾರಿಕೆ ನಡೆಯುತ್ತಿದ್ದರೆ ಪರಿಶೀಲಿಸಿ ಕ್ರಮವಹಿಸುತ್ತೇವೆ.

*ಮಣಿರಾಜು, ಅಗ್ರಹಾರ, ಶಿರಾ ತಾ.

ಪ್ರಶ್ನೆ: ಶಿರಾ ತಾಲ್ಲೂಕು, ಹುಲಿಕುಂಟೆ ಹೋಬಳಿ ಅಗ್ರಹಾರದಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದೆ.

ಡಿಸಿ: ಸ್ಥಳಕ್ಕೆ ಅಧಿಕಾರಿಗಳನ್ನು ಕಳುಹಿಸಿ ಕ್ರಮಕೈಗೊಳ್ಳುವಂತೆ ಸೂಚಿಸುತ್ತೇನೆ.

* ಶಿವಕುಮಾರ್, ಮಧುಗಿರಿ ತಾ.

ಪ್ರಶ್ನೆ: ಮಧುಗಿರಿ ತಾಲ್ಲೂಕು ಜನಕಲೋಟ ಗ್ರಾಮದ ಸ.ನಂ 49/7, 49/1ರಲ್ಲಿ ಸರ್ಕಾರಿ ಜಾಗ ಒತ್ತುವರಿ ಆಗಿದೆ.

ಡಿಸಿ: ಈ ಬಗ್ಗೆ ತಹಶೀಲ್ದಾರ್ ಗಮನಕ್ಕೆ ತರಲಾಗುವುದು. ಉಪವಿಭಾಗಾಧಿಕಾರಿ ಮೂಲಕ ಕ್ರಮಕ್ಕೆ ಸೂಚಿಸುವೆ.

*ತಿಪ್ಪೇಸ್ವಾಮಿ, ಶಿರಾ.

ಪ್ರಶ್ನೆ: ಶಿರಾ ತಾಲ್ಲೂಕು ಬೇವಿನಹಳ್ಳಿಯಲ್ಲಿ ಪ್ರಭಾವಿ ಕುಟುಂಬವೊಂದು ರಸ್ತೆ ಒತ್ತುವರಿ ಮಾಡಿಕೊಂಡು ಮನೆಕಟ್ಟಿಕೊಂಡಿದೆ. ಇದರಿಂದ 20 ಮನೆಗಳಿಗೆ ಸಮಸ್ಯೆ ಆಗುತ್ತಿದೆ.

ಡಿಸಿ: ತಾ.ಪಂ ಕಾರ್ಯನಿರ್ವಹಣಾಧಿಕಾರಿಗೆ ಸ್ಥಳಕ್ಕೆ ಭೇಟಿ ನೀಡುವಂತೆ ನಿರ್ದೇಶನ ನೀಡುತ್ತೇನೆ. ಜನ
ರಿಗೆ ತೊಂದರೆ ಮಾಡಿ ಒತ್ತುವರಿ ಮಾಡಿಕೊಂಡಿದ್ದರೆ ತೆರವುಗೊಳಿಸಲಾಗುವುದು.

* ಸಂಜೀವಯ್ಯ, ಶೆಟ್ಟಿಹಳ್ಳಿ ಗೇಟ್, ತುಮಕೂರು.

ಪ್ರಶ್ನೆ: ಇಲ್ಲಿನ ಸರ್ಕಾರಿ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯದಲ್ಲಿ ಅಡುಗೆ ಸಹಾಯಕರಿಗೆ 7 ತಿಂಗಳಿನಿಂದ ಸಂಬಳ ಬಂದಿಲ್ಲ.

ಡಿಸಿ: ಈ ವಿಚಾರವನ್ನು ಕೆಲವರು ಗಮನಕ್ಕೆ ತಂದಿದ್ದಾರೆ. ಜಿಲ್ಲಾ ಪಂಚಾಯಿತಿ ಸಿಇಒ ಅವರ ಜತೆ ಮಾತನಾಡುತ್ತೇನೆ. ಆದಷ್ಟು ಬೇಗ ಸಂಬಳ ದೊರೆಯುವಂತೆ ಕ್ರಮ ವಹಿಸುತ್ತೇನೆ.

* ಸವಿತಾ, ಅದಲಗೆರೆ, ಗುಬ್ಬಿ ತಾ.

ಪ್ರಶ್ನೆ: ಅದಲಗೆರೆಯಲ್ಲಿ ಚರಂಡಿ ಸಮಸ್ಯೆಯಿಂದ ಮನೆ ಬಾಗಿಲಲ್ಲೆ ನೀರು ನಿಲ್ಲುತ್ತಿದೆ. ಪಿಡಿಒ ಅವರ ಗಮನಕ್ಕೆ ತಂದರೆ ಅನುದಾನ ಇದೆ, ಕೆಲಸಗಾರರು ಇಲ್ಲ ಎನ್ನುತ್ತಿದ್ದಾರೆ.

ಡಿಸಿ: 14ನೇ ಹಣಕಾಸು ಯೋಜನೆಯಡಿ ಚರಂಡಿ ಸ್ವಚ್ಛತೆಗೆ ತಿಳಿಸಲಾಗುವುದು. ಕಂದಾಯ ಸಚಿವರ ನಿರ್ದೇಶನದಂತೆ ಪ್ರತಿ ತಿಂಗಳು ಗ್ರಾಮ ವಾಸ್ತವ್ಯ ಮಾಡಿ ಸ್ಥಳೀಯ ಸಮಸ್ಯೆಗಳನ್ನು ಆಲಿಸಲಾಗುವುದು. ನಿಮ್ಮ ಊರಿಗೂ ಬರುತ್ತೇನೆ.

*ಹೆಸರುಬೇಡ, ಯಳನಾಡು, ಚಿ.ನಾ.ಹಳ್ಳಿ ತಾ

ಪ್ರಶ್ನೆ: ಯಳನಾಡು ಪಡಿತರ ಅಂಗಡಿಯಲ್ಲಿ ಹೆಬ್ಬೆಟ್ಟು (ಬಯೊಮೆಟ್ರಿಕ್‌) ನೀಡಲು ₹ 50 ಪಡೆಯುತ್ತಿದ್ದಾರೆ. ತಿಂಗಳಿಗೆ ಕೇವಲ 2 ದಿನ ಮಾತ್ರ ಪಡಿತರ ನೀಡುತ್ತಿದ್ದಾರೆ.

ಡಿಸಿ: ಹಣ ನೀಡಬೇಕಾಗಿಲ್ಲ. ಕೇಳಿದರೆ ನೀವು ಕೊಡಬೇಡಿ. ಆಹಾರ ಇಲಾಖೆಯ ಅಧಿಕಾರಿಗಳಿಗೆ ಈ ಬಗ್ಗೆ ತಿಳಿಸುವೆ.

* ಶಿವರಾಜು, ಚೌಡನಕುಪ್ಪೆ, ಕುಣಿಗಲ್ ತಾ.

ಪ್ರಶ್ನೆ: ಹುಲಿಯೂರು ದುರ್ಗ ನಾಡಕಚೇರಿಯಲ್ಲಿ ರಶೀದಿ ನೀಡದೆ ಹಣ ಪಡೆಯುತ್ತಿದ್ದಾರೆ. ಸರ್ವರ್ ಸಮಸ್ಯೆ ಎಂದು ಹೇಳಿ ಎರಡೆರಡು ಬಾರಿ ಹಣ ಕಟ್ಟಿಸಿಕೊಳ್ಳುತ್ತಿದ್ದಾರೆ.

ಡಿಸಿ: ಈ ಬಗ್ಗೆ ಪರಿಶೀಲಿಸುತ್ತೇನೆ. ರಶೀದಿ ಏಕೆ ನೀಡುತ್ತಿಲ್ಲ ಎಂದು ಕೇಳುತ್ತೇನೆ. ಹೆಚ್ಚುವರಿ ಹಣ ಪಡೆದಿದ್ದರೆ ಮರುಸಂದಾಯ ಮಾಡಿಸುತ್ತೇನೆ.

* ಅಣ್ಣಪ್ಪ, ನಿಟ್ಟೂರು ಗುಬ್ಬಿ ತಾ

ಪ್ರಶ್ನೆ: ನಿಟ್ಟೂರು ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದು, 6 ತಿಂಗಳಿನಿಂದ ಸಂಬಳ ಬಂದಿಲ್ಲ.

ಡಿಸಿ: ಸಂಬಳ ಏಕೆ ತಡವಾಗಿದೆ ಎಂದು ವಿಚಾರಿಸಿ, ತಕ್ಷಣ ಸಂಬಳ ನೀಡಲು ವ್ಯವಸ್ಥೆ ಮಾಡುತ್ತೇನೆ.

* ನರಸೇಗೌಡ, ಬೆಳ್ಳಾವಿ ತಾಲ್ಲೂಕು.

ಪ್ರಶ್ನೆ: ಸರ್ಕಾರಿ ಕಚೇರಿಗಳಲ್ಲಿ ರೈತರನ್ನು ಗೌರವದಿಂದ ಕಾಣುತ್ತಿಲ್ಲ.

ಡಿಸಿ: ಕೇವಲ ರೈತರು ಮಾತ್ರವಲ್ಲ, ಸರ್ಕಾರಿ ಕಚೇರಿಗಳಿಗೆ ಬರುವ ಎಲ್ಲ ಸಾರ್ವಜನಿಕರನ್ನು ಗೌರವದಿಂದ ಕಾಣಬೇಕು, ಅವರ ಸಮಸ್ಯೆ ಆಲಿಸಬೇಕು. ಮತ್ತೊಮ್ಮೆ ಎಲ್ಲ ಅಧಿಕಾರಿಗಳಿಗೂ ಈ ಬಗ್ಗೆ ಕಠಿಣವಾಗಿ ನಿರ್ದೇಶನ ನೀಡಲಾಗುವುದು.

* ಚಂದ್ರಶೇಖರ್, ಉಪ್ಪಾರಹಳ್ಳಿ, ತುಮಕೂರು

ಪ್ರಶ್ನೆ: ತುಮಕೂರಿನ ಉಪ್ಪಾರಹಳ್ಳಿಯಲ್ಲಿ 20 ವರ್ಷದಿಂದ ಮಕ್ಕಳು ರೈಲು ಹಳಿ ದಾಟಿ ಶಾಲೆ, ಕಾಲೇಜಿಗೆ ಹೋಗಿ ಬರುತ್ತಿದ್ದಾರೆ.

ಡಿಸಿ: ಈ ಬಗ್ಗೆ ನಮ್ಮ ಬಳಿ ಪ್ರಸ್ತಾಪ ಬಂದಿದೆ. ಸ್ಮಾರ್ಟ್‌ಸಿಟಿ ಯೋಜನೆಯಡಿ ಕಾರ್ಯಯೋಜನೆ ಸಿದ್ದಪಡಿಸಲಾಗುವುದು.

* ಮಹೇಶ್, ರಂಗಾಪುರ.

ಪ್ರಶ್ನೆ: ರಂಗಾಪುರದ ಸ.ನಂ.11/3ರಲ್ಲಿ ಹೈ ಟೆನ್ಷನ್‌ ಮಾರ್ಗ ಹಾದು ಹೋಗಿದೆ. ಮನೆ ಕಟ್ಟಿಕೊಳ್ಳಲು ಸಮಸ್ಯೆ ಆಗುತ್ತಿದೆ.

ಡಿಸಿ: ಬಪರ್‌ ಜೋನ್‌ನಲ್ಲಿ ಮನೆಕಟ್ಟಿಕೊಳ್ಳಲು ಅವಕಾಶ ಇಲ್ಲ. ಈ ಬಗ್ಗೆ ಪರಿಶೀಲಿಸುತ್ತೇನೆ.

* ಜಗದೀಶ್, ಚೇಳೂರು, ಗುಬ್ಬಿ ತಾ.

ಪ್ರಶ್ನೆ: ಚೇಳೂರಿನಲ್ಲಿ ಶಾಲೆ, ಆಸ್ಪತ್ರೆ ಕಾಣದಂತೆ ಅಂಗಡಿಗಳು ನಿರ್ಮಾಣವಾಗಿವೆ. ಶಾಲೆ, ಆಸ್ಪತ್ರೆ ಆವರಣದಲ್ಲಿ ಬೀಡಿ, ಸಿಗರೇಟು ಮಾರಾಟ ಮಾಡಲಾಗುತ್ತಿದೆ.

ಡಿಸಿ: ಕೋಟ್ಪಾ ಕಾಯ್ದೆಯಡಿ ಪ್ರಕರಣ ದಾಖಲಿಸಲು ಸೂಚಿಸಲಾಗುವುದು. ಪಂಚಾಯಿತಿ ಅಧಿಕಾರಿಗಳಿಗೆ ವ್ಯಾಪಾರ ಪರವಾನಗಿ ನೀಡದಂತೆ ತಿಳಿಸುವೆ.

* ರಂಗನಾಥ್, ಮಿಡಿಗೇಶಿ ಮಧುಗಿರಿ ತಾ.

ಪ್ರಶ್ನೆ: ಮಿಡಿಗೇಶಿಯ ಅಣ್ಣಯ್ಯನ ಕೆರೆ ನೀರನ್ನು ಕಳೆದ 5 ವರ್ಷದಿಂದ ಅಕ್ಕಪಕ್ಕದವರು ಜಮೀನುಗಳಿಗೆ ಬಳಸಿಕೊಳ್ಳುತ್ತಿದ್ದಾರೆ.

ಡಿಸಿ: ಅಕ್ರಮವಾಗಿ ಕೆರೆ ನೀರನ್ನು ಜಮೀನುಗಳಿಗೆ ಬಳಸಲು ಅವಕಾಶ ಇಲ್ಲ. ಇದೇ ವರ್ತನೆ ಮುಂದುವರಿದರೆ ಕಚೇರಿಗೆ ಬಂದು ಮಾಹಿತಿ ನೀಡಿ.

* ರಂಗನಾಥ, ಕುಚ್ಚಂಗಿಪಾಳ್ಯ

ಪ್ರಶ್ನೆ: ಕೋರ ಪೊಲೀಸ್ ಠಾಣೆಯ ಎಎಸ್‌ಐ ಸಾಮಾನ್ಯ ಜನರಿಂದ ದೂರು ಸ್ವೀಕರಿಸುತ್ತಿಲ್ಲ. ಬೇರೆಡೆ ಹೋಗಿ ದೂರು ನೀಡಲು ಹೇಳುತ್ತಾರೆ.

ಡಿಸಿ: ಯಾರೇ ದೂರುಕೊಟ್ಟರೂ ಕಡ್ಡಾಯವಾಗಿ ಸ್ವೀಕರಿಸಬೇಕು. ಈ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ಗಮನಕ್ಕೆ ತರುತ್ತೇನೆ.

*ಕೊಟ್ಟ ಗೋವಿಂದಪ್ಪ, ಶಿರಾ ತಾ.

ಪ್ರಶ್ನೆ: ಕೊಟ್ಟ ಕ್ರಾಸ್‌ನಲ್ಲಿ ವಾಹನಗಳು ಸಿಕ್ಕಾಪಟ್ಟೆ ವೇಗವಾಗಿ ಸಾಗುತ್ತವೆ. ಈಗಾಗಲೇ ಈ ಭಾಗದಲ್ಲಿ ಏಳೆಂಟು ಅಪಘಾತಗಳು ಸಂಭವಿಸಿವೆ.

ಡಿಸಿ: ವೇಗನಿಯಂತ್ರಕ ಅಳವಡಿಸುವ ಕುರಿತು ಸಂಬಂಧಪಟ್ಟವರೊಂದಿಗೆ ಚರ್ಚಿಸುತ್ತೇನೆ.

*ಶಿವಕುಮಾರ, ಕುಣಿಗಲ್ ತಾ.

ಪ್ರಶ್ನೆ: ಗೋವಿಂದಯ್ಯನ ಪಾಳ್ಯದಲ್ಲಿ ಸರ್ಕಾರಿ ಜಾಗವನ್ನು ಪಕ್ಕದ ಜಮೀನಿನವರು ಉಳುಮೆ ಮಾಡಿಕೊಳ್ಳುತ್ತಿದ್ದಾರೆ.

ಡಿಸಿ: ಹಿರಿಯ ಅಧಿಕಾರಿಗಳಿಂದ ಪರಿಶೀಲಿಸಲಾಗುವುದು. ಗ್ರಾಮ ಲೆಕ್ಕಾಧಿಕಾರಿ ತಪ್ಪು ಮಾಡಿದ್ದರೆ ಕ್ರಮ ಕೈಗೊಳ್ಳುತ್ತೇನೆ.

* ನಾಗರಾಜ್, ಕುರುಬರಹಳ್ಳಿ, ತುರುವೇಕೆರೆ ತಾ.

ಪ್ರಶ್ನೆ: ಕುರುಬರಹಳ್ಳಿಯಲ್ಲಿ ಪುರಾತನ ಕಾಲದ ನಾಗರಕಟ್ಟೆಯಿದ್ದು, ಹಾಲಿನ ಡೇರಿಯವರು ಈ ಜಾಗದಲ್ಲಿ ಕಟ್ಟಡ ನಿರ್ಮಿಸುತ್ತಿದ್ದಾರೆ.

ಡಿಸಿ: ಈ ಜಾಗದ ಕುರಿತು ಕಂದಾಯ ಇಲಾಖೆಯ ದಾಖಲೆಗಳಲ್ಲಿ ಏನಿದೆ ಎಂಬುದನ್ನು ತಿಳಿದುಕೊಳ್ಳುತ್ತೇನೆ. ಒತ್ತುವರಿ ಆಗಿದ್ದರೆ ತೆರವುಗೊಳಿಸಲಾಗುವುದು.

* ಜಹಾಂಗೀರ್, ಪಟ್ಟನಾಯಕನಹಳ್ಳಿ, ಶಿರಾ ತಾ.

ಪ್ರಶ್ನೆ: ಪಟ್ಟನಾಯಕನಹಳ್ಳಿಯಲ್ಲಿ ಹೆಸರಿಗಷ್ಟೇ ಪ್ರಾಥಮಿಕ ಆರೋಗ್ಯ ಕೇಂದ್ರ ಇದೆ. ಅಲ್ಲಿ ವೈದ್ಯರೇ ಇಲ್ಲ. ಖಾಸಗಿ ಆಸ್ಪತ್ರೆಗಳಿಗೆ ಹೋದರೆ ಹಣ ಸುಲಿಗೆ ಮಾಡುತ್ತಿದ್ದಾರೆ.

ಡಿಸಿ: ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಮಾತನಾಡಿ ಸಮಸ್ಯೆ ಪರಿಹರಿಸಲಾಗುವುದು.

* ಶಿವಕುಮಾರ್, ಬೆಂಗಳೂರು.

ಪ್ರಶ್ನೆ: ಕೆಸ್ತೂರು ಹೋಬಳಿಯಲ್ಲಿರುವ ನನ್ನ ಜಮೀನಿನ ಮೇಲೆ ಪವರ್ ಗ್ರೀಡ್‌ನವರು ಕಾರಿಡಾರ್ ಲೈನ್ ಎಳೆದಿದ್ದಾರೆ. ರೈತರಿಗೆ ಸರಿಯಾಗಿ ಪರಿಹಾರ ನೀಡಿಲ್ಲ.

ಡಿಸಿ: ಸಂಬಂಧಪಟ್ಟ ಅಧಿಕಾರಿಗಳ ಜತೆ ಚರ್ಚಿಸುವೆ.

ಪ್ರಶ್ನೆ ಕೇಳಿದವರು: ಶ್ರೀನಿವಾಸ ಮೂರ್ತಿ, ರಾಜಗೋಪಾಲರೆಡ್ಡಿ ಕೊಡುಗೇನಹಳ್ಳಿ, ನವೀನ್ ಮಜ್ಜವಳ್ಳಿ, ಅಮರನಾಥ ಪಾವಗಡ, ಸಿದ್ದಲಿಂಗಮೂರ್ತಿ ಹೆಗ್ಗೆರೆ, ರಾಜಪ್ಪ, ಧನಂಜಯ ಗೌರಿಪುರ, ಉಮೇಶ್, ಮಂಜುನಾಥ್.

**

ಡಿಸಿ ಹುಡುಕಿಬಂದ ಮಹಿಳೆ

‘ಫೋನ್‌ ಇನ್‌’ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಬರುತ್ತಾರೆ ಎಂಬ ಮಾಹಿತಿ ಪಡೆದ ಮುನಿಯಮ್ಮ ಜಿಲ್ಲಾಧಿಕಾರಿ ಅವರನ್ನು ಕಾಣಲು ‘ಪ್ರಜಾವಾಣಿ’ ಕಚೇರಿಗೆ ಬಂದರು.

ಸ್ವಾಮಿ ನಾನು 21 ತಿಂಗಳು ಒಂದು ಸಂಸ್ಥೆಯಲ್ಲಿ ಕೆಲಸ ನಿರ್ವಹಿಸಿದೆ. ಅವರು ಐದು ತಿಂಗಳ ಪಿ.ಎಫ್‌.ಹಣ ನೀಡಿದ್ದಾರೆ. ಉಳಿದ ಹಣ ನೀಡಿಲ್ಲ ಎಂದು ಅಳಲು ತೋಡಿಕೊಂಡರು. ದಾಖಲೆ ಪರಿಶೀಲಿಸಿದ ಜಿಲ್ಲಾಧಿಕಾರಿ ಮುನಿಯಮ್ಮ ಬಳಿ ಇದ್ದ ದಾಖಲೆಗಳ ನಕಲು ಪ್ರತಿಗಳನ್ನು ಪಡೆದುಕೊಂಡರು. ಕಾರ್ಮಿಕರ ಭವಿಷ್ಯ ನಿಧಿ ಇಲಾಖೆ ಅಧಿಕಾರಿಗಳ ಜತೆ ಮಾತನಾಡಿ ಸಮಸ್ಯೆ ಪರಿಹರಿಸಿಕೊಡುವೆ ಎಂದರು.

**

ಹೊಸ ಘಟಕಕ್ಕೆ ಸೂಚಿಸುವೆ

* ದಾಸೇಗೌಡ, ದೊಡ್ಡಹೊಸಹಳ್ಳಿ,ಮಧುಗಿರಿ ತಾ.

ಸರ್‌, ನಮ್ಮ ಊರಲ್ಲಿನ ಶುದ್ಧ ಕುಡಿಯುವ ನೀರಿನ ಘಟಕ 6 ತಿಂಗಳಿನಿಂದ ಕೆಟ್ಟುನಿಂತಿದೆ. ಪಕ್ಕದ ಊರಿಗೆ ಹೋಗಿ ನೀರು ತರುವ ಸ್ಥಿತಿ ಇದೆ. ಬೇಗ ರಿಪೇರಿ ಮಾಡಿಸಿ ಸರ್‌ ಎಂದು ರಾಕೇಶ್ ಕುಮಾರ್ ಅವರನ್ನು ಕೋರಿದರು.

ಡಿಸಿ: ಗ್ರಾಮಾಂತರ ಪ್ರದೇಶದಲ್ಲಿನ ಶುದ್ಧ ಕುಡಿಯುವ ನೀರಿನ ಹಳೆಯ ಘಟಕಗಳ ನಿರ್ವಹಣೆಯ ಕುರಿತು ಕೆಲವು ಗೊಂದಲಗಳಿವೆ. ನಿಮ್ಮ ಊರಿನ ಸಮಸ್ಯೆಯನ್ನು ಬೇಗ ಪರಿಹರಿಸಲು ಕ್ರಮ ವಹಿಸುತ್ತೇನೆ. ಹಳೇ ಘಟಕ ರಿಪೇರಿ ಆಗದಿದ್ದರೆ, ಹೊಸ ಘಟಕ ನಿರ್ಮಾಣಕ್ಕೆ ಸೂಚಿಸುತ್ತೇನೆ.

**

ಸಚಿವ ದೇವೇಗೌಡರ ಯೋಜನೆ ಇನ್ನೂ ಜಾರಿಯಾಗಿಲ್ಲ!

ಪಾವಗಡ ತಾಲ್ಲೂಕಿನ ಬೂದುಬೆಟ್ಟದ ಚನ್ನರೆಡ್ಡಿ ಕರೆ ಮಾಡಿ, ಎಚ್‌.ಡಿ.ದೇವೇಗೌಡರು ನೀರಾವರಿ ಸಚಿವರಾಗಿದ್ದಾಗ ಊರಿನ ನೀರಿನ ಸಮಸ್ಯೆ ಬಗೆಹರಿಸಲು ಊರಿನ ಸಮೀಪವೇ ಚಿಕ್ಕ ಕೆರೆ ನಿರ್ಮಿಸಲು ಸೂಚಿಸಿದ್ದರು. ಎಸ್‌.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ಯೋಜನೆ ಸಿದ್ಧಪಡಿಸಲಾಗಿತ್ತು. ಆದರೆ, ಈವರೆಗೂ ಕೆರೆಯ ನಿರ್ಮಾಣ ಆಗಿಲ್ಲ. ನೀವಾದರೂ ಗಮನ ಹರಿಸಿ ಎಂದು ಕೋರಿದರು.

ಆಗ ಜಿಲ್ಲಾಧಿಕಾರಿ ಈ ಯೋಜನೆಯ ಮಾಹಿತಿಯನ್ನು ಪಾವಗಡ ತಹಶೀಲ್ದಾರ್‌ ಬಳಿ ಹಂಚಿಕೊಳ್ಳಿ, ಅದನ್ನು ಮುಂದೆ ಏನು ಮಾಡಬಹುದು ಎಂದು ನಾನು ನೋಡುತ್ತೇನೆ ಎಂದರು.

ಆಗ ಚನ್ನರೆಡ್ಡಿ, ‘ನಾನೀಗ ತುಮಕೂರಿನಲ್ಲಿಯೇ ಇದ್ದೇನೆ ಸರ್’ ಎಂದು ಪ್ರತಿಕ್ರಿಯಿಸಿದರು. ಅದಕ್ಕೆ ಡಿ.ಸಿ. ಅವರು, ‘ನನ್ನ ಕಚೇರಿಗೆ ಇಂದು ಅಥವಾ ನಾಳೆ ಸಂಜೆ 5.30ರ ಹೊತ್ತಿಗೆ ಬಂದು, ಯೋಜನೆಯ ಮಾಹಿತಿ ನೀಡಿ’ ಎಂದು ಉತ್ತರಿಸಿದರು.

**

ಪೊಲೀಸರನ್ನೇ ಹೆದರಿಸಿದರು ಸ್ವಾಮಿ

ಪಾವಗಡದ ಓಬಳಾಪುರದ ಗಿರೀಶ್‌, ‘ಸ್ವಾಮಿ, ನಾವು ನಮ್ಮ ಜಾಗದಲ್ಲೇ 15–20 ವರ್ಷದಿಂದ ಸಣ್ಣ ವ್ಯಾಪಾರ ನಡೆಸಿಕೊಂಡು ಬರುತ್ತಿದ್ದೇವೆ. ಈಗ ಅಲ್ಲೊಂದು ಸಣ್ಣ ಹೋಟೆಲ್‌ ಕಟ್ಟಿಕೊಳ್ಳಲು ಕೆಲವು ಸಮುದಾಯದವರು ಅಡ್ಡಗಾಲು ಹಾಕುತ್ತಿದ್ದಾರೆ. ದೂರು ನೀಡಿ, ಪೊಲೀಸರನ್ನು ಸ್ಥಳಕ್ಕೆ ಕರೆಸಿದ್ದೆವು. ಆದರೆ, ಕಿಡಿಗೇಡಿಗಳು ಪೊಲೀಸರನ್ನು ಸಹ ಹೆದರಿಸಿ ಕಳುಹಿಸಿದರು. ನಮಗೆ ನ್ಯಾಯ ಕೊಡಿಸಿ ಸ್ವಾಮಿ ಎಂದು ಕೇಳಿಕೊಂಡರು.

ಡಿ.ಸಿ. ಪ್ರತಿಕ್ರಿಯಿಸಿ, ಈ ಕುರಿತು ಎಸ್‌ಪಿ ಅವರ ಬಳಿ ಮಾತನಾಡುತ್ತೇನೆ. ನಿಮ್ಮ ಬಳಿ ಅಧಿಕೃತ ವಾಣಿಜ್ಯ ಪರವಾನಗಿ ಇದ್ದರೂ, ವ್ಯಾಪಾರಕ್ಕೆ ಅಡ್ಡಿಪಡಿಸುತ್ತಿದ್ದರೆ, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುತ್ತೇವೆ ಎಂದರು.

**

ಜನರ ನಾಡಿಮಿಡಿತ ತಿಳಿಯಲು ಫೋನ್‌–ಇನ್‌ ಸಹಕಾರಿ

ಜಿಲ್ಲೆಯ ಜನರ ಸಮಸ್ಯೆಗಳನ್ನು ಆಲಿಸಲು, ಅವರ ನಾಡಿಮಿಡಿತ ಅರ್ಥ ಮಾಡಿಕೊಳ್ಳಲು ‘ಪ್ರಜಾವಾಣಿ ಫೋನ್‌–ಇನ್‌ ಕಾರ್ಯಕ್ರಮ’ ಸಹಕಾರಿ ಆಯಿತು ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ಪ್ರಶಂಸೆ ವ್ಯಕ್ತಪಡಿಸಿದರು. ಇಂತಹ ಕಾರ್ಯಕ್ರಮಗಳನ್ನು ನೀವು ಆಗಾಗ ಆಯೋಜಿಸುತ್ತಲೇ ಇರಿ. ನಾನು ಖಂಡಿತ ಬರುತ್ತೇನೆ. ಸಮಸ್ಯೆ ಆಲಿಸಿ, ಅವುಗಳನ್ನು ಬಗೆಹರಿಸುವ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.

**

10 ಸಾವಿರ ಜನರು ವೀಕ್ಷಣೆ

ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ ಕುಮಾರ್‌ ಅವರೊಂದಿಗೆ ನಡೆದ ‘ಫೋನ್‌ ಇನ್‌’ ಕಾರ್ಯಕ್ರಮದ ಆನ್‌ಲೈನ್‌ ಲೈವ್‌ ಸ್ಟ್ರೀಮಿಂಗ್‌ (https://www.facebook.com/Prajavani.Tumkur) ಮಾಡಲಾಗಿತ್ತು. ಸಂಜೆ 6 ರೊಳಗೆ 33,059 ಜನರನ್ನು ಈ ಲೈವ್ ತಲುಪಿದ್ದು, 10,438 ಜನರು ವೀಕ್ಷಿಸಿದರು. 275 ಮಂದಿ ಮೆಚ್ಚುಗೆ ವ್ಯಕ್ತಪಡಿಸಿದರೆ, 71 ಮಂದಿ ಹಂಚಿಕೊಂಡರು.

**

ಪ್ರಜಾವಾಣಿ ತಂಡ: ಡಿ.ಎಂ.ಕುರ್ಕೆ ಪ್ರಶಾಂತ್, ಪೀರ್‌ಪಾಷ, ಅಭಿಲಾಷ ಬಿ.ಸಿ, ವಿಠಲ, ಅನಿಲ್ ಕುಮಾರ್ ಜಿ., ಸೋಮಶೇಖರ್ ಎಸ್., ವಿನಯ್.

ಚಿತ್ರಗಳು: ಎಸ್‌.ಚನ್ನದೇವರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.