ADVERTISEMENT

ಅಕಾಲಿಕ ಜೋರು ಮಳೆ

​ಪ್ರಜಾವಾಣಿ ವಾರ್ತೆ
Published 7 ಜನವರಿ 2021, 4:34 IST
Last Updated 7 ಜನವರಿ 2021, 4:34 IST
ತುಮಕೂರಿನಲ್ಲಿ ಜೋರು ಮಳೆ ಬಿತ್ತು
ತುಮಕೂರಿನಲ್ಲಿ ಜೋರು ಮಳೆ ಬಿತ್ತು   

ತುಮಕೂರು: ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬುಧವಾರ ಅಕಾಲಿಕ ಮಳೆ ಜೋರಾಗಿ ಬಿತ್ತು. ಸಂಜೆ 4.30 ಗಂಟೆಗೆ ಆರಂಭವಾದ ಮಳೆ ಸತತವಾಗಿ ಒಂದು ಗಂಟೆ ಕಾಲ ಸುರಿಯಿತು.ಇದ್ದಕಿದ್ದಂತೆ ಬಂದ ಮಳೆಯಿಂದ ಜನರು ಸಂಕಷ್ಟಕ್ಕೆ ಸಿಲುಕಿದರು.

ಕಳೆದ ಎರಡು ದಿನಗಳಿಂದ ಮೋಡ ಕವಿದ ವಾತಾವರಣ ಇತ್ತು. ಬುಧವಾರ ಬೆಳಿಗ್ಗೆಯಿಂದಲೇ ಮೋಡ ಕವಿದು ಮಳೆ ಬರುವ ವಾತಾವರಣ ನಿರ್ಮಾಣವಾಗಿತ್ತು. ಸಂಜೆ ಸುರಿದ ಜೋರು ಮಳೆ ಜನಜೀವನವನ್ನು ಅಸ್ತವ್ಯಸ್ತಗೊಳಿಸಿತು.

ಈಗ ಒಕ್ಕಣೆ ಮಾಡುವ ಸಮಯ. ಜಿಲ್ಲೆಯ ಸಾಕಷ್ಟು ಕಡೆಗಳಲ್ಲಿ ರಾಗಿ ಕೊಯ್ದು ಬಣವೆ ಹಾಕುತ್ತಿದ್ದಾರೆ. ಕೆಲವು ಕಡೆಗಳಲ್ಲಿ ಕಣ ನಿರ್ಮಿಸಿದ್ದಾರೆ. ಭತ್ತ, ಉರುಳಿ ಹಾಗೂ ಇತರ ಧಾನ್ಯಗಳ ಒಕ್ಕಣೆಯೂ ನಡೆದಿದೆ. ಇಂತಹ ಸಂದರ್ಭದಲ್ಲಿ ಮಳೆ ಬಂದು ಬೆಳೆ ಹಾಳು ಮಾಡಿದೆ. ಸಿದ್ಧವಾಗಿದ್ದ ಕಣ ಹಾಳಾಗಿದೆ ಎಂದು ರೈತರು ಅಳಲು ತೋಡಿಕೊಂಡರು.

ADVERTISEMENT

‘ಇದು ಒಕ್ಕಣೆಗೆ ಸರಿಯಾದ ಸಮಯ. ಮಳೆ ಬರುತ್ತದೆ ಎಂದು ಯಾರೂ ಸಿದ್ಧತೆ ಮಾಡಿಕೊಂಡಿರುವುದಿಲ್ಲ. ಅಕಾಲಿಕವಾಗಿ ಸುರಿದು ಕೊಯ್ಲು ಮಾಡಿದ್ದ ಬೆಳೆ ಹಾಳುಮಾಡಿತು. ಬೇಕೆಂದಾಗ ಬೀಳಲ್ಲ. ಬೇಡವಾದಾಗ ಬರುತ್ತದೆ. ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ’ ಎಂದು ಗೂಳೂರಿನ ರೈತರೊಬ್ಬರು ಪ್ರತಿಕ್ರಿಯಿಸಿದರು.

ಕುಣಿಗಲ್, ಗುಬ್ಬಿ, ತೋವಿನಕೆರೆ, ಕೋರ ಸೇರಿದಂತೆ ಇತರೆಡೆ ಜೋರು ಮಳೆಯಾಗಿದೆ. ಜಿಲ್ಲೆಯ ಪಾವಗಡ, ಮಧುಗಿರಿ, ಶಿರಾ ಭಾಗದಲ್ಲಿ ತುಂತುರು ಮಳೆಯಾದ ಬಗ್ಗೆ ವರದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.