ADVERTISEMENT

ದೋಷ ರಹಿತ ಮತದಾರರ ಪಟ್ಟಿ ತಯಾರಿಸಿ

ಮತದಾರರ ಪಟ್ಟಿ ಪರಿಷ್ಕರಣೆ ಕುರಿತ ಭಿತ್ತಿಪತ್ರ ಬಿಡುಗಡೆ ಮಾಡಿದ ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2019, 20:04 IST
Last Updated 1 ಸೆಪ್ಟೆಂಬರ್ 2019, 20:04 IST
ಮತದಾರರ ಪಟ್ಟಿ ಪರಿಷ್ಕರಣೆ ಕುರಿತ ಭಿತ್ತಿಪತ್ರವನ್ನು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್ ಭಾನುವಾರ ಬಿಡುಗಡೆ ಮಾಡಿದರು.
ಮತದಾರರ ಪಟ್ಟಿ ಪರಿಷ್ಕರಣೆ ಕುರಿತ ಭಿತ್ತಿಪತ್ರವನ್ನು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್ ಭಾನುವಾರ ಬಿಡುಗಡೆ ಮಾಡಿದರು.   

ತುಮಕೂರು: ಜಿಲ್ಲೆಯಾದ್ಯಂತ ಮತದಾರ ಪಟ್ಟಿ ಪರಿಷ್ಕರಣೆ ಕಾರ್ಯ ಆರಂಭವಾಗಿದೆ. ಕಂದಾಯ ಇಲಾಖೆಯ ಅಧಿಕಾರಿಗಳು ಅತ್ಯಂತ ಮುತ್ತುವರ್ಜಿ ವಹಿಸಿ, ದೋಷರಹಿತ ಮತದಾರರ ಪಟ್ಟಿ ತಯಾರು ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಭಾನುವಾರ 2020ನೇ ಸಾಲಿನ ಮತದಾರರ ಪಟ್ಟಿ ಪರಿಷ್ಕರಣೆ ಕುರಿತ ಭಿತ್ತಿಪತ್ರ (ಪೋಸ್ಟರ್) ಬಿಡುಗಡೆ ಮಾಡಿ ಮಾತನಾಡಿದರು.

ಆರ್ಹರು ಮತದಾನದಿಂದ ವಂಚಿತರಾಗದಂತೆ ಪ್ರತಿಯೊಬ್ಬರು ಎಚ್ಚರಿಕೆ ವಹಿಸಬೇಕು. ಬೂತ್ ಮಟ್ಟದ ಅಧಿಕಾರಿಗಳು(ಬಿಎಲ್‌ಓ) ಕಳುಹಿಸುವ ಪ್ರತಿ ವರದಿಯನ್ನು ಕೂಲಂಕಷವಾಗಿ ಪರಿಶೀಲಿಸಬೇಕು. ನಂತರ ಪಟ್ಟಿ ತಯಾರಿಸುವಂತೆ ಕಂದಾಯ ನಿರೀಕ್ಷಕರು ಮತ್ತು ಗ್ರಾಮಲೆಕ್ಕಿಗರಿಗೆ ಎಚ್ಚರಿಕೆ ನೀಡಿದರು.

ADVERTISEMENT

ಜಿಲ್ಲೆಯಾದ್ಯಂತ ಅ.30ರವರೆಗೆ ಮತದಾರರ ಪಟ್ಟಿಯ ಸಮಗ್ರ ವಿಶೇಷ ಪರಿಷ್ಕರಣೆ ನಡೆಯುತ್ತಿದೆ. ಈ ವೇಳೆ ಜಿಲ್ಲೆಯ ಪ್ರತಿ ಮತದಾರರ ಮನೆಗೂ ಮತಗಟ್ಟೆ ಅಧಿಕಾರಿಗಳು (ಬಿಎಲ್‌ಒ) ಹೋಗಿ, ಹಾಲಿ ಇರುವ ಮತದಾರರ ಪಟ್ಟಿ ಸರಿಯಿದೆಯೇ, ಇಲ್ಲವೇ ಎಂಬುದನ್ನು ಪರಿಶೀಲಿಸಬೇಕು ಎಂದು ಹೇಳಿದರು.

ಒಂದು ವೇಳೆ ಬೇರೆ ಕಡೆಗೆ ಮನೆ ಬದಲಾಗಿದ್ದರೆ ಅಕ್ಕಪಕ್ಕದ ಮನೆಯವರ ಎದುರು ಅವರಿದ್ದ ಮನೆಗೆ ನೋಟಿಸ್ ಅಂಟಿಸಿ, ಅದನ್ನು ವಿಡಿಯೊ ಮಾಡಿ ವರದಿ ಸಲ್ಲಿಸಬೇಕು. ಈ ಎಲ್ಲ ಪ್ರಕ್ರಿಯೆಗಳ ನಂತರವೇ ಮತದಾರರ ಪಟ್ಟಿಯಿಂದ ಹೆಸರು ಕೈಬಿಡುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಸಮಗ್ರ ಮತದಾರರ ವಿಶೇಷ ಪರಿಷ್ಕರಣೆ ಸಂದರ್ಭದಲ್ಲಿ ಆಕ್ಟೋಬರ್ 01ಕ್ಕೆ 18 ವರ್ಷ ತುಂಬುವ ಪ್ರತಿ ವ್ಯಕ್ತಿಯೂ ಮತದಾರರ ಪಟ್ಟಿಗೆ ತಮ್ಮ ಹೆಸರು ನೊಂದಾಯಿಸಿಕೊಳ್ಳಲು ಅವಕಾಶವಿದೆ ಎಂದರು.

ಜಿಲ್ಲಾಧಿಕಾರಿಗಳ ಕಚೇರಿಯ ಜೊತೆಗೆ, ಸಾಮಾನ್ಯ ಸೇವಾ ಕೇಂದ್ರ, ಕರ್ನಾಟಕ ಒನ್, ಅಟಲ್ ಜನಸ್ನೇಹಿ ಕೇಂದ್ರ, ಮತಗಟ್ಟೆ ಅಧಿಕಾರಿ, ಬಾಪೂಜಿ ಸೇವಾ ಕೇಂದ್ರಗಳಲ್ಲಿ ನಿಗದಿತತ ಅರ್ಜಿ ನಮೂನೆ ಪಡೆದು ಪರಿಷ್ಕರಣೆ ಮಾಡಬಹುದಾಗಿದೆ’ ಎಂದು ಹೇಳಿದರು.

ತಹಶೀಲ್ದಾರ್ ಯೋಗಾನಂದ್, ಚುನಾವಣಾ ತಹಶೀಲ್ದಾರ್ ನಾಗಭೂಷಣ್, ನರಸಿಂಹರಾಜು, ಶಿರಸ್ತೇದಾರ ಜಯಪ್ರಕಾಶ್, ಆರ್.ಐ ಶಿವಣ್ಣ, ಗ್ರಾಮಲೆಕ್ಕಿಗರಾದ ಮುರಳೀಧರ್, ಶ್ರೀನಿವಾಸ್, ಸ್ವಿಪ್ ಸಮಿತಿ ಸದಸ್ಯರಾದ ಚಂದ್ರಶೇಖರ್, ಶ್ರೀನಿವಾಸ್, ಮೂರ್ತಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.