ಕೊಡಿಗೇನಹಳ್ಳಿ: ಕೊಡಿಗೇನಹಳ್ಳಿಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆರಂಭಿಸಲು ಸೋಮವಾರ ಕಾಲೇಜು ಶಿಕ್ಷಣ ಇಲಾಖೆಯ ಬೆಂಗಳೂರು ಪ್ರಾದೇಶಿಕ ಜಂಟಿ ನಿರ್ದೇಶಕ ರಾಮಕೃಷ್ಣರೆಡ್ಡಿ ತಂಡದಿಂದ ಸ್ಥಳ ಪರಿಶೀಲನೆ ನಡೆಯಿತು.
ಕೊಡಿಗೇನಹಳ್ಳಿಯಲ್ಲಿ ಕಾಲೇಜಿಲ್ಲದೆ ಇಲ್ಲಿನ ವಿದ್ಯಾರ್ಥಿಗಳು ದೂರದ ಪಟ್ಟಣಗಳಿಗೆ ಅಲೆದಾಡುತ್ತಿದ್ದಾರೆ ಎಂದು ಈಚೆಗೆ ‘ಪ್ರಜಾವಾಣಿ’ಯಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು.
ಇದಕ್ಕೆ ಸ್ಪಂದಿಸಿದ ಸಹಕಾರ ಸಚಿವ ಕೆ.ಎನ್.ರಾಜಣ್ಣ, ‘ನಾನು ಇಲ್ಲಿ ಪ್ರಥಮ ದರ್ಜೆ ಕಾಲೇಜು ಇದೆ ಎಂದು ತಿಳಿದಿದ್ದೆ. ‘ಪ್ರಜಾವಾಣಿ’ ಪತ್ರಿಕೆಯಲ್ಲಿ ಕಾಲೇಜು ಇಲ್ಲದೆ ಇಲ್ಲಿನ ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕಾಗಿ ದೂರದ ಪಟ್ಟಣದತ್ತ ಹೋಗಿ ಬರುತ್ತಿರುವ ವಿಚಾರ ತಿಳಿದು ಬೇಸರವಾಯಿತು. ಹಾಗಾಗಿ ಮುಂದಿನ ವರ್ಷವೇ ಕೊಡಿಗೇನಹಳ್ಳಿಯಲ್ಲಿ ಕಾಲೇಜು ಆರಂಭಿಸುತ್ತೇನೆ’ ಎಂದು ಹೇಳಿ ಶಿಕ್ಷಣಮಂತ್ರಿಗೂಪತ್ರ ಬರೆದಿದ್ದರು.
ಬೆಂಗಳೂರು ಪ್ರಾದೇಶಿಕ ಜಂಟಿ ನಿರ್ದೇಶಕ ರಾಮಕೃಷ್ಣರೆಡ್ಡಿ ಮಾತನಾಡಿ, ‘ಶಿಕ್ಷಣ ಸಚಿವರ ಆದೇಶದಂತೆ ಸ್ಥಳ ಪರಿಶೀಲನೆ ನಡೆಸಿದ್ದೇವೆ. ಶಾಲೆಯಲ್ಲಿನ ಕೊಠಡಿ ಮತ್ತು ಮೂಲಸೌಕರ್ಯಗಳ ಜತೆಗೆ ಈ ವರ್ಷವೇ ಕಾಲೇಜು ಆರಂಭಿಸುವುದಕ್ಕೆ ಸರ್ಕಾರಕ್ಕೆ ವರದಿ ನೀಡುತ್ತೇವೆ. ನಂತರ ಕಾಲೇಜಿಗೆ ಸ್ವಂತ ಕಟ್ಟಡ ಮತ್ತು ಮೂಲಸೌಲಭ್ಯದ ಬಗ್ಗೆ ಸಹಕಾರ ಸಚಿವರು ನೋಡಿಕೊಳ್ಳುತ್ತಾರೆ’ ಎಂದರು.
ಶಿಕ್ಷಣ ಇಲಾಖೆ ವಿಶೇಷಾಧಿಕಾರಿಕೆ.ಸಿ. ಬಸವರಾಜು, ಶ್ರೀಕಾಂತ್, ಶಿವಪ್ರಸಾದ್, ಮಧುಗಿರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಬಾಳಪ್ಪ, ಸಹಾಯಕ ಪ್ರಾಧ್ಯಾಪಕ ಮುರಳಿಧರ್, ಬಿ.ಮಂಜುನಾಥ್, ಮುಖ್ಯ ಶಿಕ್ಷಕಿ ಯಶೋದಮ್ಮ, ಪ್ರೂಟ್ ಕೃಷ್ಣ, ಶ್ರೀನಿವಾಸ್, ರಾಜಪ್ಪ, ಶ್ರೀನಿವಾಸಮೂರ್ತಿ, ಕೆವಿ.ವೆಂಕಟೇಶ್, ತೆರಿಯೂರು ಚಂದ್ರಶೇಖರ್, ಕಸಿನಾಯಕನಹಳ್ಳಿ ಸುನಿಲ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.