ADVERTISEMENT

ಪ್ರಾಥಮಿಕ ಶಾಲಾ ಶಿಕ್ಷಕರ ಕ್ರೀಡಾಕೂಟ: ರಾಜಣ್ಣ, ಭವ್ಯಾ ವೇಗದ ಓಟಗಾರರು

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2024, 16:12 IST
Last Updated 31 ಆಗಸ್ಟ್ 2024, 16:12 IST
ತುಮಕೂರಿನಲ್ಲಿ ಶನಿವಾರ ನಡೆದ ಶಿಕ್ಷಕರ ಕ್ರೀಡಾಕೂಟದಲ್ಲಿ ಗುಂಡು ಎಸೆದ ಶಿಕ್ಷಕಿ
ತುಮಕೂರಿನಲ್ಲಿ ಶನಿವಾರ ನಡೆದ ಶಿಕ್ಷಕರ ಕ್ರೀಡಾಕೂಟದಲ್ಲಿ ಗುಂಡು ಎಸೆದ ಶಿಕ್ಷಕಿ   

ತುಮಕೂರು: ನಗರದ ಜೂನಿಯರ್‌ ಕಾಲೇಜು ಮೈದಾನದಲ್ಲಿ ಶನಿವಾರ ನಡೆದ ಪ್ರಾಥಮಿಕ ಶಾಲಾ ಶಿಕ್ಷಕರ ಕ್ರೀಡಾಕೂಟದಲ್ಲಿ 100 ಮೀಟರ್‌ ಓಟದ ಸ್ಪರ್ಧೆಯ ಪುರುಷ ವಿಭಾಗದಲ್ಲಿ ರಾಜಣ್ಣ, ಮಹಿಳೆಯರ ವಿಭಾಗದಲ್ಲಿ ರೇಣುಕಾ ವೇಗದ ಓಟಗಾರರಾಗಿ ಹೊರಹೊಮ್ಮಿದರು.

ಶಾಲಾ ಶಿಕ್ಷಣ ಇಲಾಖೆ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಶಿಕ್ಷಕರ ದಿನಾಚರಣೆ ಪ್ರಯುಕ್ತ ಪ್ರಾಥಮಿಕ ಶಾಲಾ ಶಿಕ್ಷಕರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆ ಏರ್ಪಡಿಸಲಾಗಿತ್ತು. ಮಕ್ಕಳಿಗೆ ಬೋಧನೆ, ತರಗತಿ ನಿರ್ವಹಣೆಯಲ್ಲಿ ನಿರತರಾಗಿದ್ದವರು ನಾ ಮುಂದು, ತಾ ಮುಂದೆ ಎಂಬಂತೆ ಸ್ಪರ್ಧೆಗೆ ಇಳಿದಿದ್ದರು.

ಫಲಿತಾಂಶ: 100 ಮೀಟರ್‌ ಓಟದಲ್ಲಿ ಜಿ.ಹನುಂತರಾಯಪ್ಪ, ರತ್ನಮ್ಮ ದ್ವಿತೀಯ ಸ್ಥಾನ ಪಡೆದರು.

ADVERTISEMENT

ಪುರುಷರ ವಿಭಾಗ: 200 ಮೀಟರ್‌ ಓಟ (ಕ್ರಮವಾಗಿ ಪ್ರಥಮ, ದ್ವಿತೀಯ ಸ್ಥಾನ ಪಡೆದರು) 45 ವರ್ಷ ಒಳಗಿನವರು– ಚಂದ್ರಶೇಖರ್‌, ಮಂಜುನಾಥ್‌. 45 ವರ್ಷ ಮೇಲ್ಪಟ್ಟವರು– ಹನುಮಂತರಾಯ, ರಾಮಚಂದ್ರಯ್ಯ. ಗುಂಡು ಎಸೆತ– ಎಂ.ಬಿ.ಪ್ರವೀಣ್‌, ಫೈರೋಜ್‌. ಚಕ್ರ ಎಸೆತ– ಶ್ರೀನಿವಾಸ್‌, ಮಂಜುನಾಥ್‌.

ವಾಲಿಬಾಲ್‌ ಫೈನಲ್‌ ಪಂದ್ಯದಲ್ಲಿ ವಿವೇಕ್‌ ಮತ್ತು ತಂಡವು ಮಂಜಣ್ಣ ಹಾಗೂ ತಂಡವನ್ನು ಸೋಲಿಸಿ ಗೆಲುವಿನ ದಡ ಸೇರಿತು. ಕಬಡ್ಡಿಯಲ್ಲಿ ಮಲ್ಲಿಕಾರ್ಜುನಯ್ಯ ತಂಡಕ್ಕೆ ಮೆಹಬೂಬ್‌ ತಂದವರು ಸೋಲಿನ ರುಚಿ ತೋರಿಸಿದರು.

ಮಹಿಳೆಯರ ವಿಭಾಗ: 45 ವರ್ಷ ಒಳಗಿನವರು: 200 ಮೀಟರ್‌– ರತ್ನಮ್ಮ, ಲೀಲಾರಾಣಿ. 45 ವರ್ಷ ಮೇಲ್ಪಟ್ಟವರು: 100 ಮೀಟರ್‌ ಓಟ– ಭವ್ಯಾ, ಕಮಲಾ. 200 ಮೀಟರ್‌– ಜಯಲಕ್ಷ್ಮಮ್ಮ, ಸೋನಿಯಾ. ಗುಂಡು ಎಸೆತ– ನಾಗರತ್ನ, ರೇಖಾ. ಮ್ಯೂಸಿಕಲ್‌ ಚೇರ್‌– ಮಂಗಳಗೌರಮ್ಮ. ಥ್ರೋಬಾಲ್‌ ಸ್ಪರ್ಧೆಯಲ್ಲಿ ಜಯಲಕ್ಷ್ಮಮ್ಮ ತಂಡ ಮೊದಲ ಸ್ಥಾನ ಪಡೆದರೆ, ಸೋನಿಯಾ ಅವರ ತಂಡ ಎರಡನೇ ಬಹುಮಾನಕ್ಕೆ ತೃಪ್ತಿ ಪಡಬೇಕಾಯಿತು.

ಚಾಲನೆ: ಕ್ರೀಡಾಕೂಟಕ್ಕೆ ಶಾಸಕ ಜಿ.ಬಿ.ಜ್ಯೋತಿಗಣೇಶ್‌ ಚಾಲನೆ ನೀಡಿ ಮಾತನಾಡಿ, ‘ಸರ್ಕಾರಿ ಶಾಲೆಗಳಲ್ಲಿ ಬಡವರ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ಅವರಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಕಿಂಚಿತ್ತೂ ಲೋಪವಾಗದಂತೆ ನೋಡಿಕೊಳ್ಳಬೇಕು. ಇದನ್ನು ಪ್ರತಿಯೊಬ್ಬ ಶಿಕ್ಷಕರು ಅರ್ಥೈಸಿಕೊಳ್ಳಬೇಕು’ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಹನುಮಂತಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಪಿ.ಜಿ.ತಿಮ್ಮೇಗೌಡ, ಶಿಕ್ಷಕರಾದ ಪಿ.ಎಸ್.ಅನುಸೂಯದೇವಿ, ಬಿ.ಆರ್.ಅನ್ನಪೂರ್ಣ, ಪಿ.ಎನ್.ದಿನೇಶ್, ಸಿ.ಶಿವಕುಮಾರ್‌ ಇತರರು ಪಾಲ್ಗೊಂಡಿದ್ದರು.

ತುಮಕೂರಿನಲ್ಲಿ ಶನಿವಾರ ಅಯೋಜಿಸಿದ್ದ ಶಿಕ್ಷಕರ ಕ್ರೀಡಾಕೂಟದಲ್ಲಿ ಚಕ್ರ ಎಸೆತ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಶಿಕ್ಷಕರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.