ADVERTISEMENT

ಭರವಸೆ ಮರೆತ ಪ್ರಧಾನಿ: ಸಿಪಿಐ ಟೀಕೆ

ಸುಳ್ಳನ್ನು ನಿಜ ಮಾಡಬೇಡಿ: ಗಿರೀಶ್‌ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2023, 14:42 IST
Last Updated 3 ಫೆಬ್ರುವರಿ 2023, 14:42 IST
ಗಿರೀಶ್
ಗಿರೀಶ್   

ತುಮಕೂರು: ‘ಕಾರ್ಮಿಕರು, ನೌಕರರು ಸೇರಿದಂತೆ ಸಾರ್ವಜನಿಕರು ಕೂಡಿಟ್ಟ ಹಣವನ್ನು ಒಬ್ಬರಿಗೆ ಕೊಟ್ಟು ದೇಶವನ್ನು ದಿವಾಳಿ ಮಾಡಲಾಗುತ್ತಿದೆ’ ಎಂದು ಸಿಪಿಐ ಜಿಲ್ಲಾ ಕಾರ್ಯದರ್ಶಿ ಗಿರೀಶ್‌ ಇಲ್ಲಿ ಶುಕ್ರವಾರ ಆಕ್ರೋಶ ವ್ಯಕ್ತಪಡಿಸಿದರು.

ಎಲ್‌ಐಸಿಯ ಸಾರ್ವಜನಿಕರ ಹಣವನ್ನು ಅದಾನಿ ಒಡೆತನದ ಕಂಪನಿಯಲ್ಲಿ ಹೂಡಿಕೆ ಮಾಡಲಾಗಿದೆ. ಉದ್ಯಮಿಯೊಬ್ಬ ಕುಸಿತ ಕಂಡರೆ ಇಡೀ ದೇಶದ ಜನರಿಗೆ ಸಂಕಷ್ಟವಾಗುತ್ತಿದೆ. ಕೇಂದ್ರ ಸರ್ಕಾರ ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಣ ಮಾಡುವ ಕೆಲಸ ನಿಲ್ಲಿಸಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಇದೇ 6ರಂದು ಪ್ರಧಾನಿ ನರೇಂದ್ರ ಮೋದಿ ಜಿಲ್ಲೆಗೆ ಭೇಟಿ ನೀಡುತ್ತಿದ್ದು, ಕಳೆದ ಸಲ ತುಮಕೂರಿಗೆ ಬಂದ ಸಮಯದಲ್ಲಿ ಅವರು ನೀಡಿದ ಎಲ್ಲ ಭರವಸೆಗಳನ್ನು ಈಡೇರಿಸಿದ್ದಾರೆಯೇ? ಫುಡ್‌ ಪಾರ್ಕ್‌ನಲ್ಲಿ ಜಿಲ್ಲೆಯ 10 ಸಾವಿರ ಯುವಕರಿಗೆ ಉದ್ಯೋಗ ನೀಡಲಾಗುವುದು ಎಂದು ಆಶ್ವಾಸನೆ ನೀಡಿದ್ದರು. ಪ್ರಸ್ತುತ ಎಷ್ಟು ಮಂದಿ ಕೆಲಸ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.

ADVERTISEMENT

2018ರಲ್ಲಿಯೇ ಹೆಲಿಕಾಫ್ಟರ್‌ ಹಾರಾಡಲಿದೆ ಎಂದು ಮೋದಿ ಹೇಳಿದ್ದರು, ಘಟಕ ಉದ್ಘಾಟನೆ ವಿಳಂಬವಾಗಲು ಕಾರಣಗಳೇನು? ಎಚ್‌ಎಎಲ್‌ನಲ್ಲಿ 4 ಸಾವಿರ ಜನರಿಗೆ ಉದ್ಯೋಗಾವಕಾಶ ಕಲ್ಪಿಸಬೇಕು. ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸುವುದನ್ನು ನಿಲ್ಲಿಸಬೇಕು. ಕೋಮುವಾದ, ದ್ವೇಷ ಭಾಷಣ ನಿಲ್ಲಿಸಿ, ಶಾಂತಿ ವಾತಾವರಣ ನಿರ್ಮಾಣ ಮಾಡಬೇಕು. ವಿದ್ಯುತ್ ಖಾಸಗೀಕರಣ, ಎಪಿಎಂಸಿ ಕಾಯ್ದೆ, ಭೂ ಸುಧಾರಣಾ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ಅಲ್ಪಸಂಖ್ಯಾತರ ಅನುದಾನವನ್ನು ಶೇ 72ರಷ್ಟು ಕಡಿತಗೊಳಿಸಲಾಗಿದೆ. ಕಾರ್ಮಿಕರ ವೇತನದ ಬಗ್ಗೆ ಎಲ್ಲಿಯೂ ಪ್ರಸ್ತಾಪವಿಲ್ಲ. ದುಡಿಯುವ ಕಾರ್ಮಿಕರಿಗೆ ₹31,500 ಕನಿಷ್ಠ ವೇತನ ನೀಡಬೇಕು ಎಂದು ಒತ್ತಾಯಿಸಿದರು.

ಸಿಪಿಐ ಪದಾಧಿಕಾರಿಗಳಾದ ಸಿ.ಚಂದ್ರಶೇಖರ್, ಆರ್.ಗೋವಿಂದರಾಜು, ಅಶ್ವತ್ಥನಾರಾಯಣ, ಬಾಬು, ರುದ್ರಪ್ಪ, ರವಿಪ್ರಸಾದ್, ವೆಂಕಟೇಶ್, ಗಂಗರಾಜ್, ಸಿದ್ದರಾಮಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.