ADVERTISEMENT

ಖಾಸಗಿ ಆಸ್ಪತ್ರೆಗಳೊಂದಿಗೆ ಶಾಮೀಲಾದರೆ ಶಿಸ್ತು ಕ್ರಮ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2025, 6:04 IST
Last Updated 26 ನವೆಂಬರ್ 2025, 6:04 IST
ಪಾವಗಡದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಎಚ್.ವಿ ವೆಂಕಟೇಶ್ ಅಧಿಕಾರಿಗಳಿಂದ ಮಾಹಿತಿ ಪಡೆದರು
ಪಾವಗಡದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಎಚ್.ವಿ ವೆಂಕಟೇಶ್ ಅಧಿಕಾರಿಗಳಿಂದ ಮಾಹಿತಿ ಪಡೆದರು   

ಪಾವಗಡ: ಖಾಸಗಿ ಆಸ್ಪತ್ರೆಗಳೊಂದಿಗೆ ಶಾಮೀಲಾಗುವ ಸರ್ಕಾರಿ ವೈದ್ಯ, ಸಿಬ್ಬಂದಿ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಶಾಸಕ ಎಚ್‌.ವಿ ವೆಂಕಟೇಶ್‌ ಎಚ್ಚರಿಸಿದರು.

ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

ಸರ್ಕಾರಿ ಆಸ್ಪತ್ರೆಯ ಕೆಲವರು ಖಾಸಗಿ ಆಸ್ಪತ್ರೆಗಳೊಂದಿಗೆ ಶಾಮೀಲಾಗಿ ಸಹಜ ಹೆರಿಗೆ ಆಗುವಂತಿದ್ದರೂ ಶಸ್ತ್ರಚಿಕಿತ್ಸೆ ಮಾಡುವಂತೆ ಸೂಚಿಸಿ ಕಮಿಷನ್ ಪಡೆಯುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಕೂಡಲೆ ಈ ಚಾಳಿ ನಿಲ್ಲಿಸಿ ಆಸ್ಪತ್ರೆಗೆ ಬಂದ ಬಡವರಿಗೆ ಸೂಕ್ತ ವೈದ್ಯಕೀಯ ಸೇವೆ ನೀಡಬೇಕು. ಖಾಸಗಿ ಆಸ್ಪತ್ರೆಗಳಲ್ಲಿ ದರಪಟ್ಟಿ ಅಳವಡಿಸುವಂತೆ ಸೂಚಿಸಬೇಕು ಎಂದು ತಾಲ್ಲೂಕು ವೈದ್ಯಾಧಿಕಾರಿಗೆ ಸೂಚಿಸಿದರು.

ADVERTISEMENT

ಅಧಿಕಾರಿಗಳು ತಮ್ಮ ಇಲಾಖೆಗಳ ವ್ಯಾಪ್ತಿಯಲ್ಲಿರುವ ಸಮಸ್ಯೆಗಳ ಕುರಿತು ಸಮಗ್ರ ಮಾಹಿತಿ ನೀಡಿದರೆ, ಸರ್ಕಾರದ ಜೊತೆ ಮಾತನಾಡಿ ಅಗತ್ಯ ಅನುದಾನ ತಂದು ಅಭಿವೃದ್ಧಿ ಮಾಡಲು ಅನುಕೂಲವಾಗುತ್ತದೆ ಎಂದರು.

ಕೆಟಿ ಹಳ್ಳಿ, ತಿರುಮಣಿ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಹಾವು, ನಾಯಿ ಕಡಿತಕ್ಕೆ ಔಷಧಿ ಕಾಯ್ದಿರಿಸಿಲ್ಲ ಎಂಬ ಮಾಹಿತಿ ಇದೆ. ಈ ಕೂಡಲೆ ಔಷಧಿ ತರಿಸಬೇಕು. ಆಸ್ಪತ್ರೆಗೆ ಬರುವ ಜನತೆಯೊಂದಿಗೆ ಸೌಜನ್ಯದಿಂದ ವರ್ತಿಸಬೇಕು ಎಂದು ಸೂಚಿಸಿದರು.

ತಹಶೀಲ್ದಾರ್ ವೈ.ರವಿ, ಕಾರ್ಯನಿರ್ವಹಣಾ ಅಧಿಕಾರಿ ಬಿ.ಕೆ ಉತ್ತಮ್, ಈಶ್ವರಪ್ಪ, ಮುಖ್ಯಾಧಿಕಾರಿ ಜಾಫರ್ ಷರೀಪ್, ಕುಮಾರ್, ಮೈಕೆಲ್, ಸುನಿತಾ, ವರಕೇರಪ್ಪ, ಬಸವಲಿಂಗಪ್ಪ ಪಾಟೀಲ್, ಪಾಪಣ್ಣ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.