ಶಿರಾ: ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ವಿರೋಧಿಸಿ ಮೇ 31ರಂದು ಕಾಮಗಾರಿ ನಡೆಯುತ್ತಿರುವ ಮೂಲನಾಲೆ 70ನೇ ಕಿಲೋಮೀಟರ್ ಸುಂಕಪುರ, ಡಿ ರಾಂಪುರ ಬಳಿ ಪ್ರತಿಭಟನೆ ನಡೆಸುವುದಾಗಿ ರೈತಸಂಘದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ನಾದೂರು ಕೆಂಚಪ್ಪ ಹೇಳಿದರು.
ಪ್ರತಿಭಟನೆಯಲ್ಲಿ ರೈತ ಸಂಘಟನೆಗಳು, ಮಠಾಧೀಶರು, ರಾಜಕೀಯ ಪಕ್ಷದ ಮುಖಂಡರು, ಶಾಸಕರು, ಮಾಜಿ ಶಾಸಕ, ಸಚಿವರು ಸೇರಿದಂತೆ ಜನಪರ ಕಾಳಜಿ ಇರುವ ಪ್ರತಿಯೊಬ್ಬರು ಭಾಗವಹಿಸುವಂತೆ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.
ರಾಜ್ಯ ಸರ್ಕಾರ ಅವೈಜ್ಞಾನಿಕವಾಗಿ ಕಾಮಗಾರಿ ನಡೆಸುತ್ತಿದೆ. ಇದರಿಂದ ತುಮಕೂರು ಜಿಲ್ಲೆಯ ಏಳು ತಾಲ್ಲೂಕಿನ ರೈತರು ಹಾಗೂ 23 ಕುಡಿಯುವ ನೀರಿನ ಯೋಜನೆಗಳಿಗೆ ತೊಂದರೆಯಾಗುವುದು. ಕಳೆದ ಒಂದು ವರ್ಷದಿಂದ ಅನೇಕ ಹೋರಾಟಗಳನ್ನು ನಡೆಸುತ್ತ ಬಂದಿದ್ದರೂ ಸರ್ಕಾರ ಸ್ಪಂದಿಸಿಲ್ಲ. ಬದಲಾಗಿ ಪೊಲೀಸರನ್ನು ಬಳಸಿಕೊಂಡು ಹೋರಾಟಗಾರರನ್ನು ಬಂಧಿಸಿ ಗುತ್ತಿಗೆದಾರರಿಗೆ ಅಕ್ರಮವಾಗಿ ಕೆಲಸ ಮಾಡಲು ಜಿಲ್ಲಾಡಳಿತ ಮತ್ತು ಸರ್ಕಾರ ಅವಕಾಶ ಮಾಡಿಕೊಟ್ಟಿದೆ ಎಂದು ಆರೋಪಿಸಿದರು.
ಜಿಲ್ಲೆಯ ಜನರ ಹಿತ ಬಲಿಕೊಟ್ಟು ಆಡಳಿತ ಪಕ್ಷದ ಶಾಸಕರು ಹಾಗೂ ಸಚಿವರು ಮೌನ ವಹಿಸಿದ್ದಾರೆ ಈ ನಡೆ ಖಂಡನೀಯ. ಈಗಲಾದರೂ ಸಹ ಸರ್ಕಾರ ಎಚ್ಚೆತ್ತು ಕಾಮಗಾರಿ ನಿಲ್ಲಿಸುವಂತೆ ಒತ್ತಾಯಿಸಿದರು.
ಎಸ್.ಜಯಣ್ಣ ಗೋಣಿಹಳ್ಳಿ, ಶಿವಣ್ಣ, ರಾಮಣ್ಣ ವೀರಾಪುರ, ಗುರುಮೂರ್ತಿ, ರಾಮಣ್ಣ ಗೋಣಿಹಳ್ಳಿ ಗೋಷ್ಠಿಯಲ್ಲಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.