ADVERTISEMENT

ನ್ಯಾಯಾಂಗ ನಿಂದನೆ ಕೈಬಿಡಲು ಆಗ್ರಹ

ಪ್ರಶಾಂತ್ ಭೂಷಣ್ ವಿರುದ್ಧ ದಾಖಲಿಸಿರುವ ನ್ಯಾಯಾಂಗ ನಿಂದನೆ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2020, 16:03 IST
Last Updated 26 ಆಗಸ್ಟ್ 2020, 16:03 IST
ಸಾರ್ವಜನಿಕ ಸಭೆಯಲ್ಲಿ ಸಿ.ಯತಿರಾಜು ಮಾತನಾಡಿದರು
ಸಾರ್ವಜನಿಕ ಸಭೆಯಲ್ಲಿ ಸಿ.ಯತಿರಾಜು ಮಾತನಾಡಿದರು   

ತುಮಕೂರು: ಸುಪ್ರೀಂಕೋರ್ಟ್ ಹಿರಿಯ ವಕೀಲ ಹಾಗೂ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಭೂಷಣ್ ವಿರುದ್ಧ ದಾಖಲಿಸಿರುವ ನ್ಯಾಯಾಂಗ ನಿಂದನೆ ಪ್ರಕರಣ ಕೈಬಿಡಬೇಕು ಎಂದು ಆಗ್ರಹಿಸಿ ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ವಿವಿಧ ಸಂಘಟನೆಗಳ ಪದಾಧಿಕಾರಿಗಳು ಸಾರ್ವಜನಿಕ ಸಭೆ ಹಮ್ಮಿಕೊಂಡಿದ್ದರು.

‘ಪ್ರಶಾಂತ್ ಭೂಷಣ್ ಮೇಲಿನ ನ್ಯಾಯಾಂಗ ನಿಂದನೆ ಪ್ರಕರಣ ವಾಪಸ್ ಪಡೆಯಿರಿ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯಿರಿ’ ಎಂದು ಮುಖಂಡರು ಆಗ್ರಹಿಸಿದರು.

‘ದೇಶದಲ್ಲಿ ಕೊರೊನಾ ನೆಪಮಾಡಿಕೊಂಡು ಜನಪರ ಕಾಯ್ದೆಗಳನ್ನು ತಿದ್ದುಪಡಿಮಾಡಿ ಕೃಷಿ, ರೈತರು, ಕಾರ್ಮಿಕರನ್ನು ದಿವಾಳಿ ಮಾಡುವ ಕೆಲಸ ನಡೆಯುತ್ತಿದೆ. ಇಂತಹ ಸಾಂಕ್ರಾಮಿಕ ರೋಗ ನ್ಯಾಯಾಂಗಕ್ಕೂ ಹಬ್ಬುತ್ತಿದೆ. ಪ್ರಶಾಂತ್ ಭೂಷಣ್ ಅಭಿಪ್ರಾಯವನ್ನು ತಪ್ಪು ವ್ಯಾಖ್ಯಾನ ಮಾಡಿ ನ್ಯಾಯಾಂಗ ನಿಂದನೆಗೆ ಗುರಿಪಡಿಸುವುದು ಸರಿಯಲ್ಲ. ಪ್ರಜಾಸತ್ತಾತ್ಮಕ ಟೀಕೆಗಳನ್ನು ಸಹಿಸಿಕೊಳ್ಳಬೇಕು’ ಎಂದು ಮುಖಂಡ ಸಿ.ಯತಿರಾಜು ಹೇಳಿದರು.

ADVERTISEMENT

ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎ.ಗೋವಿಂದರಾಜು, ‘ಸುಪ್ರೀಂಕೋರ್ಟ್ ಪೂರ್ವಾಗ್ರಹಪೀಡಿತವಾಗಿ ಪ್ರಶಾಂತ್ ಭೂಷಣ್ ಮೇಲೆ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿದೆ’ ಎಂದರು.

ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಸೈಯದ್ ಮುಜೀಬ್, ‘ಕೊಲೆಗಡುಕರು, ಬಂಡವಾಳಶಾಹಿಗಳು ನ್ಯಾಯಾಂಗ ನಿಂದನೆ ಮಾಡುತ್ತಲೇ ಇದ್ದಾರೆ. ಇಂತಹ ಪ್ರಕರಣಗಳಲ್ಲೂ ಗೌರವಾನ್ವಿತ ನ್ಯಾಯಾಲಯ ಕ್ರಮಕೈಗೊಳ್ಳಬೇಕು’ ಎಂದು ಕೋರಿದರು.

ಜನಸಂಗ್ರಾಮ ಪರಿಷತ್ ಮುಖಂಡ ಪಂಡಿತ್ ಜವಾಹರ್, ಪಿಕೆಎಸ್ ಜಿಲ್ಲಾ ಸಂಚಾಲಕ ಎಸ್.ಎನ್.ಸ್ವಾಮಿ, ಎಐಟಿಯುಸಿ ಪ್ರಧಾನಕಾರ್ಯದರ್ಶಿ ಗಿರೀಶ್, ಕೊಳೆಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಎ.ನರಸಿಂಹಮೂರ್ತಿ, ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಪಿ.ಎನ್.ರಾಮಯ್ಯ, ಎಐಯುಟಿಯುಸಿ ಮಂಜುಳಾ, ನಾವು ಭಾರತೀಯರು ಸಂಘಟನೆಯ ತಾಜುದ್ದೀನ್ ಷರೀಫ್, ಸಮುದಾಯದ ಜಿಲ್ಲಾ ಕಾರ್ಯದರ್ಶಿ ಕೆ.ಈ.ಸಿದ್ದಯ್ಯ, ಪ್ರಾಂತ ರೈತ ಸಂಘದ ಸಂಚಾಲಕ ಬಿ.ಉಮೇಶ್ ಮಾತನಾಡಿದರು.

ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ಸಿ.ಅಜ್ಜಪ್ಪ, ಎಐಎಂಎಸ್‍ಎಸ್ ಜಿಲ್ಲಾ ಘಟಕದ ಅಧ್ಯಕ್ಷೆ ಕಲ್ಯಾಣಿ, ಎಐಡಿಎಸ್‍ಒ ಅಶ್ವಿನಿ, ಆವಿಷ್ಕಾರದ ಮುತ್ತುರಾಜು, ಅರುಣ್, ರವೀಶ್, ಸಾಹಿತಿ ಮಿರ್ಜಾ ಬಷೀರ್, ಕಾರ್ಮಿಕ ಮುಖಂಡ ಸಂದೀಪ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.