ADVERTISEMENT

ಕೊರಟಗೆರೆ: ಹಲವು ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2022, 10:01 IST
Last Updated 9 ನವೆಂಬರ್ 2022, 10:01 IST
ಕೊರಟಗೆರೆಯಲ್ಲಿ ಮಾನ ಹಕ್ಕುಗಳ ಸಂರಕ್ಷಣಾ ಸಮಿತಿ ಸದಸ್ಯರು ವಿವಿಧ ಬೇಡಿಕೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು
ಕೊರಟಗೆರೆಯಲ್ಲಿ ಮಾನ ಹಕ್ಕುಗಳ ಸಂರಕ್ಷಣಾ ಸಮಿತಿ ಸದಸ್ಯರು ವಿವಿಧ ಬೇಡಿಕೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು   

ಕೊರಟಗೆರೆ: ತಾಲ್ಲೂಕಿನ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮಾನವ ಹಕ್ಕುಗಳ ಸಂರಕ್ಷಣಾ ಸಮಿತಿಯಿಂದ ಪ್ರತಿಭಟನಾ ಮೆರವಣಿಗೆ ನಡೆಸಿ ತಹಶೀಲ್ದಾರ್ ಕಚೇರಿಗೆ ಮನವಿ ಸಲ್ಲಿಸಲಾಯಿತು.

ಪಟ್ಟಣದ ಬಸ್ ನಿಲ್ದಾಣದಲ್ಲಿ ಸಮಾವೇಶಗೊಂಡ ಸಮಿತಿ ಸದಸ್ಯರು ಮುಖ್ಯ ರಸ್ತೆಯಲ್ಲಿ ಮೆರವಣಿಗೆ ನಡೆಸಿದರು.

ರಾಜ್ಯ ಮಾನವ ಹಕ್ಕುಗಳ ಸಂರಕ್ಷಣಾ ಸಮಿತಿ ಜಿಲ್ಲಾಧ್ಯಕ್ಷ ರಾಮಣ್ಣ ಮಾತನಾಡಿ, ‘ಸರ್ಕಾರಿ ಜಮೀನುಗಳನ್ನು ಸುಮಾರು 30 ರಿಂದ 40 ವರ್ಷಗಳಿಂದ ಒತ್ತುವರಿ ಮಾಡಿ ಸಾಗುವಳಿ ಮಾಡುತ್ತಿರುವ ಬಡ ಭೂ ರಹಿತರಿಗೆ ಅವರ ಸ್ವಾಧೀನ ಅನುಭವದಂತೆ ಸಾಗುವಳಿಮಂಜೂರಾತಿ ಪತ್ರ ನೀಡಬೇಕು. ಗ್ರಾಮೀಣ ಪ್ರದೇಶದ ವಸತಿ ಹೀನರ ಶೋಷಿತ ಸಮುದಾಯಗಳಿಗೆ ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಿಗೆ ಹಾಗೂ ಅಂಗವಿಕಲರನ್ನು ಗುರುತಿಸಿ ಸರ್ಕಾರದ ವತಿಯಿಂದಲೇ ಭೂಮಿ ಖರೀದಿಸಿ ವಸತಿ ಕಲ್ಪಿಸುವುದರೊಂದಿಗೆ ಮನೆ ಕಟ್ಟಿಸಿ ಕೊಡಬೇಕು’ ಎಂದರು.

ADVERTISEMENT

ನಿರುದ್ಯೋಗಿಗಳಿಗೆ ಜೀವನ ನಿರ್ವಹಣೆಗಾಗಿ ಪ್ರತಿ ತಾಲ್ಲೂಕಿನಲ್ಲಿ ಕೈಗಾರಿಕೆ ಸ್ಥಾಪಿಸಿ ನಿರುದ್ಯೋಗ ಸಮಸ್ಯೆ ಬಗೆಹರಿಸಬೇಕು. ಸರ್ಕಾರಿ ಇಲಾಖೆಗಳಲ್ಲಿ ವರ್ಷಗಳಿಂದ ಇರುವ ಅಧಿಕಾರಿಗಳನ್ನು ವರ್ಗಾವಣೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದರು.

ರಾಜ್ಯ ಮಾನವ ಹಕ್ಕುಗಳ ಹೋರಾಟ ಸಮಿತಿಯ ಕಾರ್ಯಾಧ್ಯಕ್ಷ ಕೇಶವಮೂರ್ತಿ ಮಾತನಾಡಿ, ‘ಪ್ರತಿಯೊಂದು ಗ್ರಾಮಗಳಲ್ಲಿ ಸಾರ್ವಜನಿಕರಿಗೆ ರುದ್ರಭೂಮಿ ಮಂಜುರಾತಿ ಮಾಡಿ, ಮೂಲ ಸೌಲಭ್ಯ ಕಲ್ಪಿಸಬೇಕು’ ಎಂದರು.

ಸಂಘಟನಾ ರಾಜ್ಯ ಅಧ್ಯಕ್ಷ ಸತ್ಯಪ್ಪ, ಮಧುಗಿರಿ ಒಕ್ಕೂಟದ ರಾಜ್ಯಾಧ್ಯಕ್ಷ ಎಸ್.ಎಸ್ ಯೋಗಿ, ವೈ. ಕೃಷ್ಣಪ್ಪ, ಬಾಲಕೃಷ್ಣ, ದೊಡ್ಡಯ್ಯ, ಗಂಗಣ್ಣ, ರಾಜಣ್ಣ, ಅರಸಪುರ ರಮೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.