ADVERTISEMENT

ರೈತನ ಸಂಕಷ್ಟಕ್ಕೆ ಸ್ಪಂದಿಸಿದ ಪಿಎಸ್‌ಐ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2020, 3:40 IST
Last Updated 29 ಆಗಸ್ಟ್ 2020, 3:40 IST
ಕುಣಿಗಲ್ ತಾಲ್ಲೂಕಿನ ಹೇರೂರು ಗ್ರಾಮದಲ್ಲಿ ಮತ್ತೆ ಅಡಿಕೆ ಸಸಿಗಳನ್ನು ನೆಡಲು ಸಿದ್ಧತೆ ಮಾಡಿಕೊಂಡ ರೈತ ನಾಗರಾಜು
ಕುಣಿಗಲ್ ತಾಲ್ಲೂಕಿನ ಹೇರೂರು ಗ್ರಾಮದಲ್ಲಿ ಮತ್ತೆ ಅಡಿಕೆ ಸಸಿಗಳನ್ನು ನೆಡಲು ಸಿದ್ಧತೆ ಮಾಡಿಕೊಂಡ ರೈತ ನಾಗರಾಜು   

ಕುಣಿಗಲ್: ಜಮೀನು ವಿವಾದದ ಕಾರಣ ಬೆಳೆದಿದ್ದ ಅಡಕೆ, ಬಾಳೆಗಿಡಗಳನ್ನು ಕಳೆದುಕೊಂಡು ತೋಟಗಾರಿಕೆಯೇ ಬೇಡವೆಂದು ಆತ್ಮಹತ್ಯೆಗೆ ಮುಂದಾಗಿದ್ದ ರೈತನಿಗೆ ಹುಣಸೂರಿನ ಪ್ರಗತಿಪರ ರೈತ ಶ್ರೀರಾಮ ಮತ್ತು ಕುಣಿಗಲ್ ಪಿಎಸ್ಐ ವಿಕಾಸ್ ಗೌಡ ಆತ್ಮಸ್ಥೈರ್ಯ ತುಂಬಿ 500 ಅಡಕೆ ಸಸಿಗಳನ್ನು ನೀಡಿ ಮತ್ತೆ ತೋಟಗಾರಿಕೆಯತ್ತ ಮನಸು ಹರಿಯುವಂತೆ ಮಾಡಿದ್ದಾರೆ.

ತಾಲ್ಲೂಕಿನ ಹೇರೂರು ಗ್ರಾಮದಲ್ಲಿ ಟೀ ಅಂಗಡಿ ನಡೆಸುತ್ತಲೇ ನಾಗರಾಜು ಅವರು 2.31 ಎಕರೆಯಲ್ಲಿ ಬೆಳೆಸಿದ್ದ ಅಡಕೆ, ತೆಂಗು, ಬಾಳೆಗಿಡಗಳನ್ನು ಸಂಬಂಧಿಗಳೇ ಕಡಿದು ಹಾಕಿದ್ದರು. ಈ ಪ್ರಕರಣ ಠಾಣೆ ಮೆಟ್ಟಿಲೇರಿತ್ತು.

ಐದು ವರ್ಷಗಳ ಸಸಿಗಳು ನಾಶವಾಗಿದ್ದು ಕಂಡು ಅವರಿಗೆ ಬೇಸರ ಮೂಡಿತು. 2012ರಿಂದಲೂ ಜಮೀನು ವಿವಾದದ ಬಗ್ಗೆ ನ್ಯಾಯಾಲಯಗಳಿಗೆ ಅಲೆದು ಸಾಕಾಗಿದ್ದರೂ ಅಡಿಕೆ, ತೆಂಗು, ಬಾಳೆ ಬೆಳೆಸಿದ್ದರು. ಫಲ ಕಾಣುವ ಮೊದಲೇ ಮಣ್ಣುಪಾಲಾಗಿದ್ದವು. ಇದರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದರು. ಪಿಎಸ್ಐ ವಿಕಾಸ್ ಗೌಡ ಅವರ ಮಾತುಗಳು ಆತ್ಮಸ್ಥೈರ್ಯ ತುಂಬಿದವು. ಈಗ ಮತ್ತೆ ಅಡಕೆ ಸಸಿಗಳನ್ನು ಬೆಳೆಯುವ ತೀರ್ಮಾನಕ್ಕೆ ಬಂದಿದ್ದಾರೆ.

ADVERTISEMENT

ರೈತನ ಮಗನಾದ ಪಿಎಸ್ಐ ವಿಕಾಸ್, ಪ್ರೊಬೇಷನರಿ ಅವಧಿಯಲ್ಲಿ ಕಾರ್ಯನಿರ್ವಹಿಸಿದ್ದ ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಪ್ರಗತಿಪರ ರೈತ ಶ್ರೀರಾಮ ಅವರ ಸಂಪರ್ಕ ಬೆಳೆಸಿ ಈ ಬಗ್ಗೆ ಚರ್ಚಿಸಿದರು. ಅವರು 500 ಅಡಿಕೆ ಸಸಿಗಳನ್ನು ನೀಡಲು ಸಿದ್ಧರಾದರು. ನಂತರ ವಿಕಾಸ್ ಅವರು ಸಸಿಗಳನ್ನು ತಂದು ನಾಗರಾಜು ಅವರಿಗೆ ನೀಡಿ, ಅಗತ್ಯ ಗೊಬ್ಬರದ ವ್ಯವಸ್ಥೆ ಮಾಡಿದ್ದಾರೆ. ‘ನಾಳೆಯಿಂದಲೇ ಜಮೀನು ಹದ ಮಾಡಿ ಸಸಿ ನೆಡಲಾಗುವುದು’ ಎಂದು ನಾಗರಾಜು ತಿಳಿಸಿದ್ದಾರೆ.

‘ರೈತನ ಕಷ್ಟ ರೈತನೇ ಬಲ್ಲ. ನನ್ನ ಕಷ್ಟವನ್ನು ನೋಡಲಾಗದೆ, ಪ್ರಗತಿಪರ ರೈತ ಹುಣಸೂರಿನ ಶ್ರೀರಾಮ, ಪಿಎಸ್ಐ ವಿಕಾಸ್ ಗೌಡ ಸಹಾಯಹಸ್ತ ನೀಡಿದ್ದಾರೆ. ಯಾವ ರೈತನಿಗೂ ಬೆಳೆದು ನಿಂತ ಬೆಳೆಗಳ ನಾಶ ತಡೆದು ಕೊಳ್ಳುವ ಶಕ್ತಿ ಇರುವುದಿಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.