ADVERTISEMENT

ಕಳವು ಪ್ರಕರಣ ದಾಖಲಿಸಿಕೊಳ್ಳದ ಪಿಎಸ್‌ಐ ಅಮಾನತು

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2020, 13:52 IST
Last Updated 1 ಫೆಬ್ರುವರಿ 2020, 13:52 IST
ಸಾಂದರ್ಭಿತ ಚಿತ್ರ
ಸಾಂದರ್ಭಿತ ಚಿತ್ರ   

ತುಮಕೂರು: ದೂರು ಸ್ವೀಕರಿಸಿ ಪ್ರಕರಣ ದಾಖಲಿಸಿಕೊಳ್ಳದ ಹಿನ್ನೆಲೆಯಲ್ಲಿ ಇಲ್ಲಿನ ಜಯನಗರ ಪೊಲೀಸ್ ಠಾಣೆ ಪಿಎಸ್‌ಐ ಎಚ್.ಮುತ್ತುರಾಜ್ ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ ಕೆಲಸದಿಂದ ಅಮಾನತುಗೊಳಿಸಿದ್ದಾರೆ.

ನಗರದ ಬನಶಂಕರಿಯಲ್ಲಿ ಚಿನ್ನ ಮತ್ತು ಬೆಳ್ಳಿ ಆಭರಣ ಮಾರಾಟ ಮಳಿಗೆ ಹೊಂದಿರುವ ಟಿ.ಪಿ.ನಾಗರಾಜ್ ಅವರನ್ನು 2019ರ ನವೆಂಬರ್ 17ರಂದು ಇಬ್ಬರು ದುಷ್ಕರ್ಮಿಗಳು ವಂಚಿಸಿ ₹ 25ರಿಂದ 30 ಲಕ್ಷ ಮೌಲ್ಯದ ಆಭರಣಗಳನ್ನು ಕಳ್ಳತನ ಮಾಡಿದ್ದರು.

ಅಂದೇ ನಾಗರಾಜ್ ದೂರು ನೀಡಲು ಮುಂದಾದರೂ ಮುತ್ತುರಾಜ್ ದೂರು ಸ್ವೀಕರಿಸಿಲ್ಲ. ‘ದೂರು ದಾಖಲಿಸುವುದು ಬೇಡ, ಚಿನ್ನಾಭರಣ ಹುಡುಕಿಕೊಡುವೆ’ ಎಂದು ಭರವಸೆ ನೀಡಿ ಕಳುಹಿಸಿದ್ದರು.

ADVERTISEMENT

ಇತ್ತೀಚೆಗೆ ಬೆಂಗಳೂರಿನ ಎಚ್‌ಎಸ್‌ಆರ್ ಬಡಾವಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದಾಗ ತುಮಕೂರಿನಲ್ಲಿಯೂ ಕಳ್ಳತನ ನಡೆಸಿರುವುದಾಗಿ ವಿಚಾರಣೆ ವೇಳೆ ಮಾಹಿತಿ ನೀಡಿದ್ದರು.

ಈ ವಿಷಯವನ್ನು ಅಲ್ಲಿನ ಪೊಲೀಸರು ವಂಶಿಕೃಷ್ಣ ಅವರ ಗಮನಕ್ಕೆ ತಂದಿದ್ದಾರೆ. ಎಸ್‌ಪಿ ಅವರು ಮತ್ತಷ್ಟು ವಿಚಾರಣೆ ನಡೆಸಿದಾಗ ಮುತ್ತುರಾಜ್ ದೂರು ಸ್ವೀಕರಿಸದಿರುವುದು ತಿಳಿದು ಬಂದಿದೆ. ಈ ಬಗ್ಗೆ ವಿಚಾರಣೆ ನಡೆಸುವಂತ ಡಿವೈಎಸ್‌ಪಿ ತಿಪ್ಪೇಸ್ವಾಮಿ ಅವರಿಗೆ ಎಸ್‌ಪಿ ಸೂಚಿಸಿದ್ದಾರೆ.

ಈ ಕುರಿತು ಮಾತನಾಡಿದಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ(ಎಸ್‌ಪಿ) ಡಾ.ಕೆ.ವಂಶಿಕೃಷ್ಣ,ಇಷ್ಟು ಗಂಭೀರ ಪ್ರಕರಣವಾಗಿದ್ದರೂ ಪಿಎಸ್‌ಐ ಏಕೆ ಪ್ರಕರಣ ದಾಖಲಿಸಿಕೊಳ್ಳಲಿಲ್ಲ ಎನ್ನುವ ವಿಚಾರ ಕುತೂಹಲಕ್ಕೆ ಕಾರಣವಾಗಿದೆ. ಈ ಬಗ್ಗೆ ತನಿಖೆ ನಡೆಸುವಂತೆ ಡಿವೈಎಸ್‌ಪಿ ತಿಪ್ಪೇಸ್ವಾಮಿ ಹಾಗೂ ಸಿಪಿಐ ಪಾರ್ವತಮ್ಮ ಅವರಿಗೆ ಎಸ್‌ಪಿ ಸೂಚಿಸಿದ್ದಾರೆ.ಅಮಾನತಿನಲ್ಲಿರುವ ಮುತ್ತುರಾಜ್ ಕೇಂದ್ರಸ್ಥಾನವನ್ನು ಬಿಟ್ಟು ಹೋಗಬಾರದು. ಒಂದು ವೇಳೆ ಬಿಟ್ಟು ಹೋಗಬೇಕಾದರೆ ವಿಳಾಸವನ್ನು ತಿಲಕ್ ಪಾರ್ಕ್ ಸಿಪಿಐ ಅವರಿಗೆ ನೀಡಿ ಅನುಮತಿ ಪಡೆಯಬೇಕು ಎಂದು ಆದೇಶಿಸಿದ್ದಾರೆ.

‘ಪೊಲೀಸರು ಸಾರ್ವಜನಿಕರ ಕೆಲಸಗಳನ್ನು ಸಮರ್ಪಕವಾಗಿ ಮಾಡಿಕೊಡಬೇಕು. ನಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ಜನಸ್ನೇಹಿಯಾಗಿ ಇಲಾಖೆ ಕೆಲಸ ಮಾಡಬೇಕು’ ಎಂದು ವಂಶಿಕೃಷ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

‘ಇಷ್ಟೊಂದು ಮೊತ್ತದ ಕಳ್ಳತನ ನಡೆದಿದೆ. ಇದು ಗಂಭೀರ ಪ್ರಕರಣ. ಹೀಗಿದ್ದರೂ ಪ್ರಕರಣ ದಾಖಲಿಸಿಕೊಳ್ಳದಿರುವುದು ಅಕ್ಷಮ್ಯ’.ಆರೋಪಿಗಳು ಬೆಂಗಳೂರಿನಲ್ಲಿ ಸಿಕ್ಕರು ಎನ್ನುವುದು ಎರಡನೇ ಮಾತು. ಆದರೆ ಇಂತಹ ಗಂಭೀರವಾದ ಅಪರಾಧವಿದ್ದರೂ ಪ್ರಕರಣ ದಾಖಲಿಸದಿರುವುದು ಅಕ್ಷಮ್ಯ. ಇದು ಜಿಲ್ಲೆಯ ಎಲ್ಲ ಪೊಲೀಸರಿಗೂ ಎಚ್ಚರಿಕೆ ಆಗಬೇಕು ಎಂದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.