ADVERTISEMENT

ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷೆ

ಕೊಠಡಿಗಳಿಗೆ ಸೋಂಕು ನಿವಾರಕ ಸಿಂಪಡಣೆ; ಒಂದು ಗಂಟೆ ಮುಂಚಿತವಾಗಿ ಹಾಜರಾಗಲು ಸೂಚನೆ

​ಪ್ರಜಾವಾಣಿ ವಾರ್ತೆ
Published 17 ಜೂನ್ 2020, 16:56 IST
Last Updated 17 ಜೂನ್ 2020, 16:56 IST
ಎಂಪ್ರೆಸ್ ಕಾಲೇಜಿನಲ್ಲಿ ಉಪನ್ಯಾಸಕರು ನೋಂದಣಿ ಸಂಖ್ಯೆಗಳನ್ನು ನಮೂದಿಸಿದರು
ಎಂಪ್ರೆಸ್ ಕಾಲೇಜಿನಲ್ಲಿ ಉಪನ್ಯಾಸಕರು ನೋಂದಣಿ ಸಂಖ್ಯೆಗಳನ್ನು ನಮೂದಿಸಿದರು   

ತುಮಕೂರು: ದ್ವಿತೀಯ ಪಿಯುಸಿ ಇಂಗ್ಲಿಷ್ ವಿಷಯ ಪರೀಕ್ಷೆಯು ಗುರುವಾರ ನಡೆಯಲಿದ್ದು, ಬುಧವಾರ ‍ಪರೀಕ್ಷಾ ಕೇಂದ್ರಗಳಲ್ಲಿ ಉಪನ್ಯಾಸಕರು ಹಾಗೂ ಪದವಿಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಗಳು ಲಘುಬಗೆಯ ಚಟುವಟಿಕೆಯಲ್ಲಿ ತೊಡಗಿದ್ದರು.

ಈಗಾಗಲೇ ಸರ್ಕಾರ ಸೂಚಿಸಿರುವ ಮಾರ್ಗಸೂಚಿಯಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ 34 ಪರೀಕ್ಷಾ ಕೇಂದ್ರಗಳಲ್ಲಿ 25,997 ವಿದ್ಯಾರ್ಥಿಗಳು ಪರೀಕ್ಷೆ ಬರೆಯುವರು. ಪರೀಕ್ಷಾ ಕೇಂದ್ರಗಳ ಕೊಠಡಿಗಳಲ್ಲಿ ನೋಂದಣಿ ಸಂಖ್ಯೆ ಹಾಕಲಾಯಿತು. ಪ್ರತಿ ಕೇಂದ್ರ, ಡೆಸ್ಕ್‌ಗಳಿಗೆ ಸೋಂಕು ನಿವಾರಕ ಔಷಧಿ ಸಿಂಪಡಿಸಲಾಗಿದೆ.

ಹೊರ ಜಿಲ್ಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 678 ವಿದ್ಯಾರ್ಥಿಗಳು ಜಿಲ್ಲೆಯಲ್ಲಿ ಪರೀಕ್ಷೆ ಬರೆಯಲು ಹೆಸರು ನೋಂದಾಯಿಸಿಕೊಂಡಿದ್ದಾರೆ. ಅಲ್ಲದೆ ಜಿಲ್ಲೆಯ 326 ವಿದ್ಯಾರ್ಥಿಗಳು ಹೊರ ಜಿಲ್ಲೆಗಳಲ್ಲಿ ಪರೀಕ್ಷೆ ಬರೆಯುವರು. 20ರಿಂದ 26 ವಿದ್ಯಾರ್ಥಿಗಳಿಗೆ ಒಂದು ಕೊಠಡಿಯಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ. ಇದರಿಂದಾಗಿ ಹಿಂದಿಗಿಂತಲೂ ಹೆಚ್ಚಿನ ಕೊಠಡಿಗಳಲ್ಲಿ ಪರೀಕ್ಷೆ ನಡೆಯಲಿದೆ.

ADVERTISEMENT

ವಿದ್ಯಾರ್ಥಿಗಳು ಒಂದು ಗಂಟೆ ಮುಂಚಿತವಾಗಿ ಹಾಜರಾಗಲು ಸೂಚಿಸಲಾಗಿದೆ. ಆರೋಗ್ಯ ತಪಾಸಣೆ ನಡೆಸಲಾಗುತ್ತದೆ. ಸ್ಯಾನಿಟೈಸ್ ಮಾಡಿ, ಪ್ರತಿಯೊಬ್ಬರಿಗೂ ಮಾಸ್ಕ್ ವಿತರಿಸಲಾಗುತ್ತದೆ. ಪರೀಕ್ಷೆ ಬರೆಯುವ ಪ್ರತಿ ವಿದ್ಯಾರ್ಥಿಯ ದೂರವಾಣಿ ಸಂಖ್ಯೆ ಪಡೆದುಕೊಳ್ಳಲಾಗುತ್ತದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ನಗರದ ಪ್ರಮುಖ ಪರೀಕ್ಷಾ ಕೇಂದ್ರವಾದ ಎಂಪ್ರೆಸ್ ಪದವಿ ಪೂರ್ವ ಕಾಲೇಜಿನಲ್ಲಿ 1,306 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಕಾಲೇಜಿನ 62 ಕೊಠಡಿಗಳಲ್ಲಿ ಪರೀಕ್ಷೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.