ADVERTISEMENT

ಚಿಕ್ಕನಾಯಕನಹಳ್ಳಿ: ಸೊಂಡೇನಹಳ್ಳಿಯಲ್ಲಿ ಕ್ವಿಟ್‌ ಇಂಡಿಯಾ ಚಳವಳಿ ಸ್ಮರಣೆ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2023, 13:42 IST
Last Updated 11 ಆಗಸ್ಟ್ 2023, 13:42 IST
ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಸೊಂಡೇನಹಳ್ಳಿ ಶಾಲೆಯಲ್ಲಿ ಕ್ವಿಟ್‌ ಇಂಡಿಯಾ ಚಳವಳಿ ಸ್ಮರಣೆ ಕಾರ್ಯಕ್ರಮ ನಡೆಯಿತು
ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಸೊಂಡೇನಹಳ್ಳಿ ಶಾಲೆಯಲ್ಲಿ ಕ್ವಿಟ್‌ ಇಂಡಿಯಾ ಚಳವಳಿ ಸ್ಮರಣೆ ಕಾರ್ಯಕ್ರಮ ನಡೆಯಿತು   

ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ಸೊಂಡೇನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಕರ್ನಾಟಕ ಸರ್ವೋದಯ ಮಂಡಲದಿಂದ ‘ಕ್ವಿಟ್‌ ಇಂಡಿಯಾ ಚಳವಳಿ ಒಂದು ನೆನಪು’ ಕಾರ್ಯಕ್ರಮ ನಡೆಯಿತು.

ಮಂಡಲದ ಜಿಲ್ಲಾ ಕಾರ್ಯದರ್ಶಿ ಸಿ.ಡಿ. ಚಂದ್ರಶೇಖರ್‌ ಮಾತನಾಡಿ, ಕ್ವಿಟ್‌ ಇಂಡಿಯಾ ಚಳವಳಿ ನಂತರ ದೇಶದಲ್ಲಿ ದೊಡ್ಡ ದಂಗೆ ಶುರುವಾಯಿತು. ತದ ನಂತರದ ಸ್ವಾತಂತ್ರ್ಯ ಸಂಗ್ರಾಮದ ಕಿಚ್ಚು ಹೆಚ್ಚಾಯಿತು. ಇದರ ಭಾಗವಾಗಿ ಕರ್ನಾಟಕದ ಈಸೂರು, ವಿಧುರಾಶ್ವತ್ಥದಲ್ಲಿ ದಂಗೆ ನಡೆದು ಬ್ರಿಟಿಷರ ಗುಂಡಿಗೆ ಹಲವರು ಬಲಿಯಾದರು. ಇದಕ್ಕೆ ಪ್ರತಿಯಾಗಿ ಬ್ರಿಟಿಷರ ವಿರುದ್ಧವೂ ಪ್ರತಿ ದಾಳಿ ನಡೆದವು ಎಂದು ತಿಳಿಸಿದರು.

ಸಿಪಾಯಿದಂಗೆ, ಉಪ್ಪಿನ ಸತ್ಯಾಗ್ರಹ, ಕರ ನಿರಾಕರಣೆ ಚಳವಳಿ ಮತ್ತಿತರ ಹಲವು ಹೋರಾಟಗಳ ನಂತರವೂ ಬ್ರಿಟಿಷರು ದೇಶ ತೊರೆಯದೆ ಇದ್ದುದರಿಂದ ಮಹಾತ್ಮಾಗಾಂಧಿ ನೇತೃತ್ವದಲ್ಲಿ ಮುಂಬೈನಲ್ಲಿ 50 ಜನರ ಸಭೆ ನಡೆದು, ಅಲ್ಲಿ ಕೈಗೊಂಡ ತೀರ್ಮಾನದಂತೆ ‘ಬ್ರಿಟೀಷರೇ ಭಾರತ ಬಿಟ್ಟು ತೊಲಗಿ’ ಚಳವಳಿ ಆರಂಭವಾಯಿತು ಎಂದು ನೆನಪಿಸಿದರು.

ADVERTISEMENT

‘ಕ್ವಿಟ್‌ ಇಂಡಿಯಾ ಚಳವಳಿ ಕುರಿತು ಉಪನ್ಯಾಸ ನೀಡಿದ ನಿವೃತ್ತ ಶಿಕ್ಷಕ ಪುಟ್ಟಕೆಂಪರಂಗಯ್ಯ, ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ, ನಮ್ಮ ದೇಶದ ಇತಿಹಾಸ ತಿಳಿದುಕೊಳ್ಳಲಾಗಿಲ್ಲ. ಇದಕ್ಕೆ ಶಿಕ್ಷಣದಿಂದ ದೂರ ಉಳಿದಿದ್ದೆ ಕಾರಣ. ಪ್ರತಿಯೊಬ್ಬರೂ ಶಿಕ್ಷಣ ಪಡೆದು ಚರಿತ್ರೆ ತಿಳಿದುಕೊಳ್ಳಬೇಕು. ಆಗ ನಮ್ಮ ಪೂರ್ವಿಕರು ನಮಗಾಗಿ ಪಟ್ಟ ಶ್ರಮ ಎಂಥಹುದ್ದು ಎನ್ನುವುದು ತಿಳಿಯುತ್ತದೆ’ ಎಂದರು.

ಗೋಡೆಕೆರೆ ಗ್ರಾಮ ಪಂಚಾಯಿತಿ ಆಧ್ಯಕ್ಷೆ ಎ.ಸಿ. ಸವಿತಾ ಕಾರ್ಯಕ್ರಮ ಉದ್ಘಾಟಿಸಿದರು. ಮಂಡಲದ ತಾಲ್ಲೂಕು ಅಧ್ಯಕ್ಷ ಗೋ.ನಿ. ವಸಂತಕುಮಾರ್, ತಾಪಂ ಮಾಜಿ ಸದಸ್ಯ ಸಿ.ಶಿವಣ್ಣ, ಗ್ರಾಪಂ ಸದಸ್ಯರಾದ ಮಲ್ಲಿಕಾರ್ಜುನಯ್ಯ, ರೂಪ, ಗ್ರಾಪಂ ಮಾಜಿ ಸದಸ್ಯ ತಿಮ್ಮೇಗೌಡ, ಮುಖ್ಯ ಶಿಕ್ಷಕ ಮಂಜುನಾಥ್‌ ಪ್ರಸನ್ನ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.