ತುಮಕೂರು: ಬೆಂಬಲ ಬೆಲೆಯಲ್ಲಿ ರಾಗಿ ಖರೀದಿ ಮಾಡಿದ್ದ ರಾಜ್ಯ ಸರ್ಕಾರ ರೈತರಿಗೆ ಹಣ ಬಿಡುಗಡೆ ಮಾಡುವುದನ್ನೇ ನಿಲ್ಲಿಸಿದೆ. ಮೇ ತಿಂಗಳ 27ರ ನಂತರ ಹಣ ಪಾವತಿಯಾಗದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಖರೀದಿ ಕೇಂದ್ರಗಳಿಗೆ ರಾಗಿ ಕೊಟ್ಟು ತಿಂಗಳುಗಳೇ ಕಳೆದಿದ್ದರೂ ಈವರೆಗೂ ಹಣ ಬಾರದೆ ಕಂಗಾಲಾಗಿದ್ದಾರೆ. ಇಂದು–ನಾಳೆ ಬರಬಹುದು ಎಂದು ಸಾವಿರಾರು ರೈತರು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.
ಜಿಲ್ಲೆಯಲ್ಲಿ ಇನ್ನೂ 14,374 ರೈತರಿಗೆ ಸುಮಾರು ₹97 ಕೋಟಿ ಹಣವನ್ನು ಬಿಡುಗಡೆ ಮಾಡಬೇಕಿದೆ. 46,628 ರೈತರಿಂದ ಒಟ್ಟು 7,36,396 ಕ್ವಿಂಟಲ್ ರಾಗಿಯನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲಾಗಿತ್ತು. ಒಟ್ಟಾರೆಯಾಗಿ 315.91 ಕೋಟಿ ಹಣವನ್ನು ಪಾವತಿಸಬೇಕಿದ್ದು, ಅದರಲ್ಲಿ 32,254 ರೈತರಿಗೆ ₹218 ಕೋಟಿ ಹಣವನ್ನು ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದೆ.
ಮೇ 27ರ ವರೆಗೆ ಹಣ ಪಾವತಿ ಮಾಡಿದ್ದು, ನಂತರ ಹಣ ಪಾವತಿ ಮಾಡುವುದನ್ನು ಸ್ಥಗಿತಗೊಳಿಸಲಾಗಿದೆ. ಸ್ವಲ್ಪ ಹೆಚ್ಚು ಕಡಿಮೆ ಎರಡು ತಿಂಗಳಿಂದ ಹಣ ಬಿಡುಗಡೆ ಮಾಡಿಲ್ಲ. ಸಾಮಾನ್ಯವಾಗಿ ಖರೀದಿ ಕೇಂದ್ರಕ್ಕೆ ರಾಗಿ ತಂದು ಮಾರಾಟ ಮಾಡಿದ ಒಂದೆರಡು ವಾರದಲ್ಲಿ ರೈತರ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಲಾಗುತಿತ್ತು. ಆದರೆ ಈಗ ಹಣ ಬಿಡುಗಡೆ ಮಾಡುವುದನ್ನು ಸ್ಥಗಿತಗೊಳಿಸಿರುವುದು ಏಕೆ ಎಂಬ ಪ್ರಶ್ನೆ ರೈತರನ್ನು ಕಾಡುತ್ತಿದೆ. ಪ್ರತಿ ದಿನವೂ ಬ್ಯಾಂಕ್ ಖಾತೆಯನ್ನು ಪರಿಶೀಲಿಸಿ, ಬರಿಗೈಯಲ್ಲಿ ವಾಪಸಾಗುತ್ತಿದ್ದಾರೆ.
ಈ ಬಾರಿ ರಾಗಿ ಕ್ವಿಂಟಲ್‌ಗೆ ₹4,290 ಬೆಂಬಲ ಬೆಲೆ ನಿಗದಿಪಡಿಸಲಾಗಿತ್ತು. ಮುಕ್ತ ಮಾರುಕಟ್ಟೆಗಿಂತ ಉತ್ತಮ ಬೆಲೆ ಸಿಗುವುದನ್ನು ಗಮನಿಸಿದ ರೈತರು ಖರೀದಿ ಕೇಂದ್ರಗಳಲ್ಲಿ ಮಾರಾಟ ಮಾಡಿದ್ದರು. ಹಿಂದಿನ ವರ್ಷ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದು, ರಾಗಿ ಬೆಳೆಯಲು ಒಲವು ತೋರಿದ್ದರು. ಬೆಂಬಲ ಬೆಲೆ ಏರಿಕೆ ಮಾಡಿದ್ದರಿಂದ ಹೆಚ್ಚಿನ ಪ್ರದೇಶದಲ್ಲಿ ರಾಗಿ ಬೆಳೆದಿದ್ದರು. ಇದರಿಂದಾಗಿ ಉತ್ಪಾದನೆಯೂ ದುಪ್ಪಟ್ಟಾಗಿತ್ತು.
ಹಲವು ಕಾರಣಗಳಿಂದ ರಾಗಿ ಖರೀದಿ ಕೇಂದ್ರಗಳನ್ನು ತೆರೆಯುವುದು ತಡವಾಗಿತ್ತು. ಮೇ ತಿಂಗಳ ವರೆಗೂ ಖರೀದಿ ಮಾಡಲಾಗಿತ್ತು. ಹಿಂದಿನ ವರ್ಷದ ಹಿಂಗಾರು ಮುಗಿದು, ಈ ವರ್ಷದ ಮುಂಗಾರು ಆರಂಭವಾಗಿದೆ. ಬಿತ್ತನೆಗೆ ಭೂಮಿ ಸಿದ್ಧಗೊಳಿಸುವುದು, ಬಿತ್ತನೆ ಬೀಜ, ಗೊಬ್ಬರ ಖರೀದಿ ಮತ್ತಿತರ ಕೃಷಿ ಚಟುವಟಿಕೆ ಕೈಗೊಳ್ಳಬೇಕಿದೆ. ಆದರೆ ರಾಗಿ ಮಾರಾಟ ಮಾಡಿದ ಹಣ ಬಾರದೆ ಮುಂಗಾರು ಕೃಷಿ ಆರಂಭಿಸುವುದು ಕಷ್ಟಕರವಾಗಿದೆ. ಮತ್ತೆ ಬಡ್ಡಿಗೆ ಬೇರೊಬ್ಬರ ಬಳಿ ಕೈ ಒಡ್ಡಿ ಹಣ ತಂದು ಕೃಷಿ ಕೆಲಸ ಆರಂಭಿಸುವ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಹಣ ಬರಲಿದೆ
ಮೇ 27ರ ನಂತರ ಹಣ ಬಿಡುಗಡೆ ಮಾಡುವುದನ್ನು ಏಕೆ ನಿಲ್ಲಿಸಲಾಗಿದೆ ಎಂಬುದು ಗೊತ್ತಿಲ್ಲ. ಮೇ ತಿಂಗಳ ವರೆಗೆ ಶೀಘ್ರವಾಗಿ ಬಿಡುಗಡೆ ಮಾಡಲಾಗಿದೆ. ಈ ತಿಂಗಳ ಅಂತ್ಯದೊಳಗೆ ಹಣ ಬಿಡುಗಡೆ ಆಗುವ ನಿರೀಕ್ಷೆ ಇದೆ ಎಂದು ಅಧಿಕಾರಿಯೊಬ್ಬರು ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.