ADVERTISEMENT

ತುಮಕೂರು | ರಾಗಿ ಬಿತ್ತನೆ ಕುಸಿತ; ಆಹಾರ ಉತ್ಪಾದನೆ ಇಳಿಕೆ

ನಿಗದಿತ ಗುರಿಗಿಂತ ಅರ್ಧದಷ್ಟು ಪ್ರದೇಶದಲ್ಲಷ್ಟೇ ರಾಗಿ, ಶೇಂಗಾ ಬಿತ್ತನೆ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2025, 5:49 IST
Last Updated 15 ಆಗಸ್ಟ್ 2025, 5:49 IST
<div class="paragraphs"><p>ರಾಗಿ ಬಿತ್ತನೆ ಮಾಡುತ್ತಿರುವುದು&nbsp;</p></div>

ರಾಗಿ ಬಿತ್ತನೆ ಮಾಡುತ್ತಿರುವುದು 

   

ತುಮಕೂರು: ಕಳೆದ ಒಂದು ವಾರದಿಂದ ವರುಣ ಕೃಪೆ ತೋರಿದ್ದು, ಇಳೆ ತಂಪಾಗಿದೆ. ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳು ಬಿರುಸು ಪಡೆದುಕೊಂಡಿದ್ದು, ಕೊನೆ ಹಂತದ ಬಿತ್ತನೆ ಕೆಲಸಗಳು ಚುರುಕಾಗಿವೆ. ಆದರೆ ನಿಗದಿತ ಗುರಿಯಷ್ಟು ಪ್ರದೇಶದಲ್ಲಿ ಬಿತ್ತನೆಯಾಗದೆ ಆಹಾರ ಧಾನ್ಯಗಳ ಉತ್ಪಾದನೆ ಇಳಿಕೆಯಾಗಲಿದೆ.

ಎಲ್ಲೆಡೆ ಮಳೆಯಾಗುತ್ತಿದ್ದು, ರಾಗಿ ಹೊರತುಪಡಿಸಿ ಇತರೆ ಬೆಳೆಗಳ ಬಿತ್ತನೆಗೆ ಸಮಯ ಮುಗಿದಿದೆ. ಇನ್ನೂ ಒಂದು ವಾರದವರೆಗೂ ರಾಗಿ ಬಿತ್ತನೆ ಮಾಡಲಾಗುತ್ತದೆ. ಜಿಲ್ಲೆಯಲ್ಲಿ ಹೆಚ್ಚಿನ ಪ್ರದೇಶದಲ್ಲಿ ಮಳೆ ಆಶ್ರಯದಲ್ಲೇ ರಾಗಿ ಬೆಳೆಯಲಾಗುತ್ತಿದ್ದು, ಇನ್ನೂ ತಡವಾಗಿ ಬಿತ್ತನೆ ಮಾಡಿದರೆ ಕೊನೆಗಾಲಕ್ಕೆ ಮಳೆ ಇಲ್ಲದೆ ಒಣಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಈಗ ಬಿದ್ದ ಮಳೆಗೆ ಬಿತ್ತನೆ ಮಾಡುವಲ್ಲಿ ರೈತರು ತೊಡಗಿಸಿಕೊಂಡಿದ್ದಾರೆ.

ADVERTISEMENT

ಜಿಲ್ಲೆಯಲ್ಲಿ 1,51,375 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬಿತ್ತನೆ ಗುರಿ ಹೊಂದಿದ್ದು, ಈವರೆಗೆ 90,334 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಜೂನ್, ಜುಲೈನಲ್ಲಿ ಮಳೆ ಕೈಕೊಟ್ಟಿದ್ದು, ಜುಲೈ ಅಂತ್ಯಕ್ಕೆ ಕೇವಲ 46,867 ಹೆಕ್ಟೇರ್‌ಗಳಲ್ಲಷ್ಟೇ ಬಿತ್ತನೆಯಾಗಿತ್ತು. ಆಗಸ್ಟ್ ಆರಂಭದಲ್ಲೂ ಇದೇ ಸ್ಥಿತಿ ಮುಂದುವರಿದಿತ್ತು. ಆ. 4ರಿಂದ ಮಳೆಯಾಗುತ್ತಿದ್ದು, ಒಂದು ವಾರದಲ್ಲಿ ದುಪ್ಪಟ್ಟು ಪ್ರದೇಶದಲ್ಲಿ ಬಿತ್ತನೆಯಾಗಿದೆ. ಇನ್ನೂ ಒಂದೆರಡು ದಿನಗಳಲ್ಲಿ ಮತ್ತಷ್ಟು ಹೆಚ್ಚಳವಾಗಲಿದೆ.

ಶೇಂಗಾ ಬಿತ್ತನೆಗೆ ಸಮಯ ಮುಗಿದಿದ್ದು, ಕಳೆದ ಒಂದು ವಾರದ ಅಂತರದಲ್ಲಿ ಸುಮಾರು 4 ಸಾವಿರ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಪ್ರಸ್ತುತ ಶೇಂಗಾ ಬಿತ್ತನೆ ನಿಲ್ಲಿಸಲಾಗಿದೆ. 76,570 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಿದ್ದು, ಈವರೆಗೆ 32,037 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ.

ಜಿಲ್ಲೆಯಲ್ಲಿ ಒಟ್ಟು 3,20,280 ಹೆಕ್ಟೇರ್‌ ಪ್ರದೇಶದಲ್ಲಿ ವಿವಿಧ ಬೆಳೆ ಬಿತ್ತನೆ ಮಾಡಬೇಕಿದ್ದು, 1,77,499 ಹೆಕ್ಟೇರ್‌ನಲ್ಲಿ (ಶೇ 55.42) ಬಿತ್ತನೆಯಾಗಿದೆ. ಬಿತ್ತನೆಯಾಗಿರುವ ಒಟ್ಟು ಪ್ರದೇಶದಲ್ಲಿ ಅರ್ಧದಷ್ಟು ಪ್ರದೇಶದಲ್ಲಿ ರಾಗಿ ಬಿತ್ತನೆಯಾಗಿದೆ.

ಉತ್ಪಾದನೆ ಕುಸಿತ:

ಜಿಲ್ಲೆಯಲ್ಲಿ 2024ರಲ್ಲಿ 3.20 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ಬೆಳೆಗಳ ಬಿತ್ತನೆ ಗುರಿ ಹೊಂದಿದ್ದು, 3.08 ಲಕ್ಷ ಪ್ರದೇಶದಲ್ಲಿ ಬಿತ್ತನೆಯಾಗಿತ್ತು. ಆ ಮೂಲಕ ಶೇ 96ರಷ್ಟು ಗುರಿ ಸಾಧನೆಯಾಗಿತ್ತು.

ರಾಗಿ 1,67,510 ಹೆಕ್ಟೇರ್ (ಗುರಿ 1,51,375 ಹೆಕ್ಟೇರ್), ಶೇಂಗಾ 58,539 ಹೆಕ್ಟೇರ್ (ಗುರಿ 76,570 ಹೆಕ್ಟೇರ್) ಬಿತ್ತನೆಯಾಗಿತ್ತು. ಈ ವರ್ಷ ತಡವಾಗಿ ಮಳೆಯಾಗಿದ್ದರಿಂದ ರಾಗಿ ಬಿತ್ತನೆ ಪ್ರದೇಶ 1 ಲಕ್ಷ ಹೆಕ್ಟೇರ್ ದಾಟುವುದು ಕಷ್ಟಕರವಾಗಿದೆ. ಶೇಂಗಾ ಬಿತ್ತನೆ ನಿಗದಿತ ಗುರಿಯ ಅರ್ಧದಷ್ಟು ಪ್ರದೇಶವನ್ನೂ ದಾಟಿಲ್ಲ. ಹತ್ತಿ ಬಿಟ್ಟರೆ ಉಳಿದ ಬೆಳೆಗಳ ಬಿತ್ತನೆ ತೀವ್ರವಾಗಿ ಕುಸಿತ ಕಂಡಿದೆ.

ಕಳೆದ ವರ್ಷ ನಿಗದಿತ ಗುರಿಯಲ್ಲಿ ಶೇ 96ರಷ್ಟು ಪ್ರದೇಶದಲ್ಲಿ ಬಿತ್ತನೆಯಾಗಿದ್ದರೆ, ಈ ವರ್ಷ ಶೇ 55ರಷ್ಟು ಪ್ರದೇಶದಲ್ಲಷ್ಟೇ ಬಿತ್ತನೆಯಾಗಿದೆ. ಹಾಗಾಗಿ ಆಹಾರ ಧಾನ್ಯಗಳ ಉತ್ಪಾದನೆಯು ಹಿಂದಿನ ವರ್ಷಕ್ಕೆ ಹೋಲಿಸಿದರೆ ಅರ್ಧದಷ್ಟು ಕುಸಿತವಾಗಲಿದೆ ಎಂಬ ಆತಂಕ ಎದುರಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.