ADVERTISEMENT

ದಬ್ಬೇಘಟ್ಟ: 9.6 ಸೆಂ.ಮೀ ಮಳೆ

ರೈತರ ಹರ್ಷ: ವಾಣಿಜ್ಯ ಬೆಳೆಗಳಿಗೆ ಆಸರೆ: ಆಹಾರ ಬೆಳೆ ಬಿತ್ತನೆಗೆ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 18 ಮೇ 2024, 14:23 IST
Last Updated 18 ಮೇ 2024, 14:23 IST
ತುರುವೇಕೆರೆ ತಾಲ್ಲೂಕಿನ ಲೋಕಮ್ಮನಹಳ್ಳಿ ಗೇಟ್ ಬಳಿಯ ಹೆದ್ದಾರಿಯಲ್ಲಿ ಬೃಹತ್ ಮರ ಬಿದ್ದು ಸಂಚಾರಕ್ಕೆ ಅಡ್ಡಿಯಾಗಿದೆ
ತುರುವೇಕೆರೆ ತಾಲ್ಲೂಕಿನ ಲೋಕಮ್ಮನಹಳ್ಳಿ ಗೇಟ್ ಬಳಿಯ ಹೆದ್ದಾರಿಯಲ್ಲಿ ಬೃಹತ್ ಮರ ಬಿದ್ದು ಸಂಚಾರಕ್ಕೆ ಅಡ್ಡಿಯಾಗಿದೆ   

ತುರುವೇಕೆರೆ: ತಾಲ್ಲೂಕಿನ ದಬ್ಬೇಘಟ್ಟ ಹೋಬಳಿಯಲ್ಲಿ ಶುಕ್ರವಾರ ರಾತ್ರಿ 9.6 ಸೆಂ.ಮೀಟರ್ ಮಳೆಯಾಗಿದೆ.

ತಾಲ್ಲೂಕಿನ ಕಸಬಾ, ಮಾಯಸಂದ್ರ ಮತ್ತು ದಂಡಿನಶಿವರ ಹೋಬಳಿಗಳಿಗೆ ಭರಣಿ ಮತ್ತು ಕೃತಿಕ ಮಳೆ ಉತ್ತಮ, ಆರಂಭ ನೀಡಿತ್ತಾದರೂ ದಬ್ಬೇಘಟ್ಟ ಹೋಬಳಿಗೆ ಒಂದು ಹನಿ ಕೂಡ ಬಿದ್ದಿರಲಿಲ್ಲ. ಆದರೆ ಕಳೆದ ಎರಡು ದಿನಗಳಿಂದ ಈ ಹೋಬಳಿಯ ಮಾವಿನಕೆರೆ, ಮುತ್ತುಗದಹಳ್ಳಿ, ದಬ್ಬೇಘಟ್ಟ, ಮುತ್ತಗದಹಳ್ಳಿ, ಮುದ್ದನಹಳ್ಳಿ, ಕೆ.ಹೊಸೂರು, ಮಾವಿನಹಳ್ಳಿ, ಕಳ್ಳನಕೆರೆ, ಹುಲಿಕಲ್, ಗೂರಲಮಠ ಗ್ರಾಮದಲ್ಲಿ ಉತ್ತಮ ಮಳೆಯಾಗಿದೆ.

ಮಾಯಸಂದ್ರ ಹೋಬಳಿ ಭೈತರಹೊಸಹಳ್ಳಿ, ಶೆಟ್ಟಿಗೊಂಡನಹಳ್ಳಿ, ಮಣೆಚಂಡೂರು, ವಡವನಘಟ್ಟ ಮತ್ತು ಮಾಯಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ 7.4 ಸೆ.ಮೀಟರ್ ಮಳೆಯಾಗಿರುವುದು ರೈತರಲ್ಲಿ ಖುಷಿ ತಂದಿದೆ.

ADVERTISEMENT

ಕಸಬಾ ಹೋಬಳಿಯ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳು ಹಾಗೂ ದಂಡಿನಶಿವರ ಹೋಬಳಿಯ ಸಂಪಿಗೆ, ಮಾಸ್ತಿಗೊಂಡನಹಳ್ಳಿ, ಸಂಪಿಗೆಹೊಸಹಳ್ಳಿ, ಹುಲ್ಲೇಕೆರೆ, ದಂಡಿನಶಿವರ ಮತ್ತು ಅಮ್ಮಸಂದ್ರಗಳಲ್ಲಿ ಸಾಧಾರಣ ಮಳೆಯಾಗಿದೆ.

ಮಳೆ ಇಲ್ಲದೆ ಸೊರಗಿದ್ದ ವಾಣಿಜ್ಯ ಬೆಳೆಗಳು ಸತತ ಮಳೆಯಿಂದ ತೆಂಗು, ಬಾಳೆ, ಅಡಿಕೆ ಬೆಳೆ ಗರಿಗಳು ಹಸಿರಾಗಿದ್ದು, ಹೊಸ ಹೊಂಬಾಳೆ ಒಡೆಯುತ್ತಿವೆ. ಕೆಲ ಭಾಗಗಳಲ್ಲಿ ಅಲ್ಲಲ್ಲಿ ಮಳೆ ನೀರು ಸಂಗ್ರಹವಾಗಿದ್ದು ಪ್ರಾಣಿ ಪಕ್ಷಿಗಳಿಗೆ ನೀರಿನ ಆಸರೆಯಾಗಿದೆ.

ರಾತ್ರಿ 8 ಗಂಟೆಗೆ ಪ್ರಾರಂಭವಾದ ಮಳೆ 12 ಗಂಟೆ ವರೆಗೆ ಭೂಮಿಯನ್ನು ತಂಪೆರೆಯಿತು. ದಬ್ಬೇಘಟ್ಟ ಹೋಬಳಿಯಲ್ಲಿ ಈ ಹಿಂದೆ ಮಳೆಯೇ ಬಂದಿಲ್ಲ ಆದರೆ ಕಳೆದ ಎರಡು ದಿನಗಳಿಂದ ಕೃತಿಕ ಉತ್ತಮ ಮಳೆಯಾಗಿರುವ ಕಾರಣ ತೆಂಗು ಬೆಳೆಗಳು ಸ್ವಲ್ಪ ಚೇತರಿಕೆ ಕಂಡಿವೆ. ಆದರೆ ಹೆಸರು ಬಿತ್ತನೆಗೆ ಭೂಮಿ ತೇವಾಂಶದಿಂದ ಕೂಡಿರುವ ಕಾರಣ ರೈತರು ಇನ್ನೂ ಭೂಮಿ ಹಸನು ಮಾಡಿಕೊಂಡಿಲ್ಲ ಎನ್ನುತ್ತಾರೆ ರೈತ ಕುಮಾರಣ್ಣ.

ಪೂರ್ವ ಮುಂಗಾರು ಬಿತ್ತನೆಗೆ ರೈತರು ಭೂಮಿ ಹದ ಮಾಡಿಕೊಂಡು ಬಿತ್ತನೆಗೆ ಸಿದ್ಧವಾಗಿದ್ದರು. ಆದರೆ ರಾತ್ರಿ ಸುರಿದ ಮಳೆಯಿಂದ ಕೆಲ ರೈತರಿಗೆ ಹೆಸರು ಮತ್ತು ಅಲಸಂದೆ ಬಿತ್ತನೆಗೆ ಹಿನ್ನಡೆಯಾಗಿದೆ. ಕೆಲ ಕಡೆ ಬಿತ್ತನೆ ಕೂಡ ಆಗಿದೆ ಎನ್ನುತ್ತಾರೆ ರೈತ ಸಂಪಿಗೆ ಯೋಗೀಶ್ ತಿಳಿಸಿದರು.

ದಬ್ಬೇಘಟ್ಟ ಹೋಬಳಿ ವ್ಯಾಪ್ತಿ ಬಿರುಗಾಳಿಗೆ ಕೆ.ಹೊಸೂರಿನ ಮನೆಯೊಂದರ ಮೇಲೆ ವಿದ್ಯುತ್ ಕಂಬ ಮುರಿದು ಬಿದ್ದಿದೆ. ಕಳ್ಳನಕೆರೆ, ಹುಲಿಕಲ್, ಗೂರಲಮಠ, ಅಕ್ಕವನಕಟ್ಟೆ 5, ದಂಡಿನಶಿವರ ಹೋಬಳಿ 2, ಕಸಬಾ 1 ಮರ ಬಿದ್ದ ವಿದ್ಯುತ್ ಕಂಬ ಮುರಿದಿವೆ ಎಂದು ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಎಂ.ಸಿ.ರಾಜಶೇಖರ್ ತಿಳಿಸಿದರು.

ಕಸಬಾ ವ್ಯಾಪ್ತಿಯ ಲೋಕಮ್ಮನಹಳ್ಳಿ ಗೇಟ್ ಬಳಿಯ ಶ್ರೀರಂಗಪಟ್ಟಣ ಮತ್ತು ಬೀದರ್ 150 ಎ ರಾಷ್ಟ್ರೀಯ ಹೆದ್ದಾರಿ ಮೇಲೆ ಬೃಹತ್ ಮರ ಬಿದ್ದು ಕೆಲವೊತ್ತು ಸಂಚಾರ ಅಸ್ಥವ್ಯಸ್ಥವಾಗಿತ್ತು. ಸ್ಥಳಕ್ಕೆ ಬೆಸ್ಕಾಂ ಸಿಬ್ಬಂದಿ ಭೇಟಿ ನೀಡಿ ತೆರವುಗೊಳಿಸಿದ್ದಾರೆ.

ತುರುವೇಕೆರೆ ತಾಲ್ಲೂಕಿನ ದಬ್ಬೇಘಟ್ಟ ಹೋಬಳಿಯ ಕೆ.ಹೊಸೂರಿನ ಮನೆಯೊಂದರ ಮೇಲೆ ಗಾಳಿಗೆ ವಿದ್ಯುತ್ ಕಂಬ ಮುರಿದು ಬಿದ್ದಿದೆ.
ತುರುವೇಕೆರೆ ತಾಲ್ಲೂಕಿನ ಲೋಕಮ್ಮನಹಳ್ಳಿ ಗೇಟ್ ಬಳಿಯ ಶ್ರೀರಂಗಪಟ್ಟಣ ಮತ್ತು ಬೀದರ್ 150 ಎ ರಾಷ್ಟ್ರೀಯ ಹೆದ್ದಾರಿಯ ಮೇಲೆ ಬೃಹತ್ ಮರ ಬಿದ್ದು ಸಂಚಾರಕ್ಕೆ ತೊಂದರೆಯಾಗಿ ಲಾರಿ ರಸ್ತೆಯಲ್ಲೇ ನಿಂತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.