ADVERTISEMENT

ತುಮಕೂರು | ತೆನೆ ಬಿಡುವ ವೇಳೆ ಕೈಕೊಟ್ಟ ಮಳೆ; ಬಾಡುತ್ತಿದೆ ಬೆಳೆ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2024, 13:34 IST
Last Updated 11 ಸೆಪ್ಟೆಂಬರ್ 2024, 13:34 IST
ಕೊಡಿಗೇನಹಳ್ಳಿ ಭಾಗದಲ್ಲಿ ಮಳೆಯಿಲ್ಲದೆ ಬಾಡುತ್ತಿರುವ ಮೆಕ್ಕೆಜೋಳ
ಕೊಡಿಗೇನಹಳ್ಳಿ ಭಾಗದಲ್ಲಿ ಮಳೆಯಿಲ್ಲದೆ ಬಾಡುತ್ತಿರುವ ಮೆಕ್ಕೆಜೋಳ   

ಕೊಡಿಗೇನಹಳ್ಳಿ: ತೆನೆ ಬಿಟ್ಟು ಕಾಳು ಕಟ್ಟುವ ಸಮಯದಲ್ಲಿ ಮಳೆ ಕೈಕೊಟ್ಟ ಪರಿಣಾಮ ಸಪೂರವಾಗಿ ಬಂದಿದ್ದ ಬೆಳೆ ಬಾಡುತ್ತಿದೆ.

ಈ ಬಾರಿ ಮುಂಗಾರು ಮುಂಚೆ ಒಂದಷ್ಟು ಮಳೆ ಬಿದ್ದಿದ್ದರಿಂದ ಉಳುಮೆ ಮಾಡಿಸಿ ಜಮೀನುಗಳನ್ನು ಅಚ್ಚುಕಟ್ಟು ಮಾಡಿಕೊಂಡಿದ್ದರಿಂದ ಜೂನ್-ಜುಲೈ ತಿಂಗಳಲ್ಲಿ ಬಿದ್ದ ತುಂತುರು ಮಳೆಗೆ ಬಿತ್ತನೆ ಮಾಡಿ ಕಳೆ ತೆಗೆಸಲಾಗಿತ್ತು. ರಸಗೊಬ್ಬರ ಕೂಡ ಹಾಕಿದ್ದರಿಂದ ಎಲ್ಲೆಡೆ ಉತ್ತಮ ಬೆಳೆ ಬೆಳೆದಿತ್ತು.

ಆಗಸ್ಟ್ 2-3ನೇ ವಾರದಲ್ಲಿ ನಿರಂತರವಾಗಿ ಜೋರಾದ ಮಳೆ ಆಗುವುದರ ಜೊತೆಗೆ ಕೊರಟಗೆರೆ ಭಾಗದಲ್ಲಿ ಉತ್ತಮ ಮಳೆಯಾಗಿದ್ದರಿಂದ ಜಯಮಂಗಲಿ ನದಿ ಕೂಡ ತುಂಬಿ ಹರಿಯಿತು. ಉತ್ತಮ ಬೆಳೆಯ ನಿರೀಕ್ಷೆಯಲ್ಲಿದ್ದವರಿಗೆ ಕಳೆದ 22 ದಿನಗಳಿಂದ ಮಳೆಯಿಲ್ಲದೆ ಮೆಕ್ಕೆಜೋಳ, ಶೇಂಗಾ, ರಾಗಿ, ಅಲಸಂದೆ, ಅವರೆ, ತೊಗರಿ ಜೊತೆಗೆ ಜಾನುವಾರುಗಳಿಗಾಗಿ ಇಟ್ಟಿರುವ ಮೇವಿನ ಬೆಳೆ ಕೂಡ ಒಣಗುತ್ತಿದೆ.

ADVERTISEMENT

ಮೋಡ ಬಂದು ಇನ್ನೇನು ಮಳೆ ಬರಲಿದೆ ಎನ್ನುವಷ್ಟರಲ್ಲಿ ಗಾಳಿ ಎದ್ದು ಮೋಡಗಳು ಚದುರುತ್ತಿರುವುದರಿಂದ ಹಲವು ದಿನಗಳಿಂದ ಮಳೆಯಾಗುತ್ತಿಲ್ಲ. ಕೊಳವೆ ಬಾವಿ ಇರುವ ಒಂದಷ್ಟು ರೈತರ ನೀರನ್ನು ಹರಿಸುವಲ್ಲಿ ನಿರತರಾದರೆ, ಕೊಳವೆ ಬಾವಿ ಇಲ್ಲದೆ ಮಳೆಯನ್ನೇ ನಂಬಿರುವ ಮುಕ್ಕಾಲು ಭಾಗ ರೈತರು ಪ್ರತಿದಿನ ಆಕಾಶದತ್ತ ನೋಡುವುದೇ ಕಾಯಕವಾಗಿದೆ. ಇನ್ನು ನಾಲ್ಕೈದು ದಿನಗಳಲ್ಲಿ ಮಳೆ ಬಂದರೆ ಬೆಳೆ ಒಂದರ್ಧ ಸಿಗಲಿದೆ, ಇಲ್ಲದಿದ್ದರೆ ಸಂಪೂರ್ಣ ಬೆಳೆ ಒಣಗಲಿದೆ ಎನ್ನುತ್ತಾರೆ ಚಿಕ್ಕಮಾಲೂರು ಗ್ರಾಮದ ರೈತ ಲಿಂಗಪ್ಪ.

ವಾರದೊಳಗೆ ಮಳೆ ನಿರೀಕ್ಷೆ

ಮಧುಗಿರಿ ತಾಲ್ಲೂಕಿನಾದ್ಯಾಂತ ಈ ವರ್ಷ ಶೇಖಡ 90ಕ್ಕಿಂತ ಹೆಚ್ಚು ಬಿತ್ತನೆಯಾಗಿದ್ದರಿಂದ ರೈತರು ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದರು. ಆದರೆ ಬೆಳೆ ಉತ್ತಮವಾಗಿರುವ ಸಂದರ್ಭದಲ್ಲೇ ಕಳೆದ 20 ದಿನಗಳಿಂದ ಮಳೆ ಬೀಳದಿರುವುದು ಬೆಳೆ ಬಾಡುವುದಕ್ಕೆ ಕಾರಣವಾಗಿದೆ. ಮುಂದಿನ ಒಂದು ವಾರದೊಳೆಗೆ ಮಳೆ ಬಂದು ರೈತರ ಕೈಗೆ ಒಂದಷ್ಟು ಬೆಳೆ ಕೂಡ ಸಿಗುವ ಎನ್ನುವ ವಿಶ್ವಾಸವಿದೆ. ಹನುಮಂತರಾಯಪ್ಪ ಸಹಾಯಕ ಕೃಷಿ ನಿರ್ದೇಶಕ ಕೃಷಿ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.