ADVERTISEMENT

ಭಾರಿ ಮಳೆ: ಶಾಲೆಗೆ ನುಗ್ಗಿದ ಮಳೆ ನೀರು- ರಾಗಿ, ಜೋಳ, ತೊಗರಿ ಬೆಳೆಗೆ ಅನುಕೂಲ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2021, 4:56 IST
Last Updated 5 ಅಕ್ಟೋಬರ್ 2021, 4:56 IST
ದಂಡಿನಶಿವರ ಹೋಬಳಿಯ ಲಕ್ಷಸಂದ್ರ ಗ್ರಾಮದ ಜಯಮ್ಮ ಅವರ ವಾಸದ ಮನೆಯ ಹಿಂಭಾಗದ ಮೇಲ್ಚಾವಣಿ ಕುಸಿದು ಬಿದ್ದಿದೆ
ದಂಡಿನಶಿವರ ಹೋಬಳಿಯ ಲಕ್ಷಸಂದ್ರ ಗ್ರಾಮದ ಜಯಮ್ಮ ಅವರ ವಾಸದ ಮನೆಯ ಹಿಂಭಾಗದ ಮೇಲ್ಚಾವಣಿ ಕುಸಿದು ಬಿದ್ದಿದೆ   

ತುರುವೇಕೆರೆ: ತಾಲ್ಲೂಕಿನಾದ್ಯಂತ ಎರಡು ದಿನಗಳಿಂದ ಸುರಿಯುತ್ತಿರುವ ಹಸ್ತ ಮಳೆಯು ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ.

ಸೋಮವಾರ ಮಧ್ಯಾಹ್ನ ಸುರಿದ ಹದ ಮಳೆಗೆ ಪಟ್ಟಣದ ಕೆಲವು ರಸ್ತೆಗಳ ಮೇಲೆ ನೀರು ಹರಿಯಿತು. ಅಮಾವಾಸ್ಯೆ ಹಬ್ಬದ ಪ್ರಯುಕ್ತ ಪಟ್ಟಣದಲ್ಲಿ ನಡೆಯುತ್ತಿದ್ದ ಸಂತೆಯು ಬಿರುಸಿನ ಮಳೆಗೆ ತತ್ತರಿಸಿತು. ಗ್ರಾಹಕರು ಮತ್ತು ವ್ಯಾಪಾರಿಗಳು ಕೆಲ ಸಮಯ ಪರದಾಡುವಂತಾಯಿತು.

ಇಲ್ಲಿನ ಆದಿಶಕ್ತಿ ಬಾರ್ ಮತ್ತು ನೌಕರರ ಭವನದ ಮುಂಭಾಗ ಮಳೆ ಮತ್ತು ಚರಂಡಿಯ ನೀರು ರಸ್ತೆಗೆ ನುಗ್ಗಿತು. ಕೆರೆ ಕೋಡಿ ಮುಂದಿನ ರಸ್ತೆಯಲ್ಲಿ ನೀರು ನಿಂತು ವಾಹನ ಸವಾರರು ಮತ್ತು ಪಾದಚಾರಿಗಳ ಸಂಚಾರಕ್ಕೆ ಕಿರಿಕಿರಿ ಉಂಟು ಮಾಡಿತು.

ADVERTISEMENT

ಭಾನುವಾರ ಸುರಿದ ಹದ ಮಳೆಗೆ ತಾಲ್ಲೂಕಿನ ದಂಡಿನಶಿವರ ಹೋಬಳಿಯ ಲಕ್ಷಸಂದ್ರ ಗ್ರಾಮದ ಜಯಮ್ಮ ಅವರ ವಾಸದ ಮನೆಯ ಹಿಂಭಾಗದ ಮೇಲ್ಚಾವಣಿ ಕುಸಿದು ಬಿದ್ದಿದೆ.

ತಾಲ್ಲೂಕಿನ ಕಳ್ಳನಕೆರೆ ಗೊಲ್ಲರಹಟ್ಟಿಯ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಗೆ ಮಳೆ ನೀರು ನುಗ್ಗಿದೆ. ದಿನಸಿ ಹಾಗೂ ಶಾಲಾ ದಾಖಲೆಗಳು ಮಳೆ ನೀರಿಗೆ ನೆನೆದಿದ್ದು ಮಕ್ಕಳು ಮತ್ತು ಗ್ರಾಮಸ್ಥರು ಕೊಠಡಿಯೊಳಗಿದ್ದ ನೀರನ್ನು ಹೊರ ಹಾಕಿದರು. ಮುಂಗಾರು ಹಂಗಾಮಿನಡಿ ಬಿತ್ತನೆಯಾಗಿದ್ದ ರಾಗಿ, ಜೋಳ, ತೊಗರಿ, ಅವರೆ, ಹರಳು, ಹುರುಳಿ, ಸಾಸಿವೆ, ಹುಚ್ಚೆಳ್ಳು ಬೆಳೆಗಳು ಮಳೆಯಿಲ್ಲದೆ ಕಳೆದ ಮೂರು ವಾರಗಳಿಂದ ನಲುಗಿದ್ದವು. ರಾಗಿ ಪೈರು ಒಣಗುವ ಹಂತಕ್ಕೆ ತಲುಪಿದ್ದು, ರೈತರನ್ನು ಆತಂಕಕ್ಕೆ ದೂಡಿತ್ತು. ತೆಂಗು, ಅಡಿಕೆ, ಬಾಳೆ ಬೆಳೆ ಮಳೆಯಿಲ್ಲದೆ ಸೊರಗಿದ್ದವು. ಮಳೆಯಿಂದಚೇತರಿಕೆ ಕಂಡಿವೆ.

ಹೊಲ, ಗದ್ದೆ, ತೋಟದ ಸಾಲು, ಹೊಂಡ, ಕಟ್ಟೆಗಳಲ್ಲಿ ಹೆಚ್ಚಿನ ನೀರು ಸಂಗ್ರಹವಾಗಿದೆ. ತುರುವೇಕೆರೆ ಕೆರೆಯು ಹೇಮಾವತಿ ನಾಲಾ ನೀರಿಗೆ ಕೋಡಿ ಬಿದ್ದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.