ADVERTISEMENT

ಸಿದ್ದರಾಮಯ್ಯರನ್ನು ನಿರ್ಲಕ್ಷಿಸಿದರೆ ಹೊಸ ಪಕ್ಷ ಕಟ್ಟುತ್ತಾರೆ: ರಾಜಣ್ಣ

ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಅಭಿಮತ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2019, 15:38 IST
Last Updated 5 ನವೆಂಬರ್ 2019, 15:38 IST
ಕೆ.ಎನ್.ರಾಜಣ್ಣ
ಕೆ.ಎನ್.ರಾಜಣ್ಣ   

ತುಮಕೂರು: ಬಿ.ಎಸ್.ಯಡಿಯೂರಪ್ಪ ಇಲ್ಲದೆ ಬಿಜೆಪಿ ಇಲ್ಲ, ದೇವೇಗೌಡರು ಇಲ್ಲದ ಜೆಡಿಎಸ್ ಇಲ್ಲ. ಅದೇ ರೀತಿ ರಾಜ್ಯ ಕಾಂಗ್ರೆಸ್‌ಗೆ ಸಿದ್ದರಾಮಯ್ಯ ಅನಿವಾರ್ಯ ಎಂದು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು. ಸಿದ್ದರಾಮಯ್ಯ ಅವರನ್ನು ನಿರ್ಲಕ್ಷ್ಯ ಮಾಡಿದರೆ ಸುಮ್ಮನೆ ಕೂರಲು ಸಾಧ್ಯವಾ? ಅವರು ಹೊಸಪಕ್ಷ ಕಟ್ಟಬಹುದು, ಕಟ್ಟದಿರಲೂ ಬಹುದು. ನಾನು ಅವರು ಎಲ್ಲಿಗೆ ಹೋಗುತ್ತಾರೋ ಅಲ್ಲಿ ಇರುತ್ತೇನೆ’ ಎಂದು ಹೇಳಿದರು.

‘ಕೆಲವು ವ್ಯಕ್ತಿಗಳು ಆಯಾ ಪಕ್ಷಗಳಿಗೆ ಅನಿವಾರ್ಯ. ಪಕ್ಷ ಬಿಟ್ಟರೆ ಆ ನಾಯಕರ ಶಕ್ತಿಯೂ ಕುಂದುತ್ತದೆ, ಪಕ್ಷಕ್ಕೂ ತೊಂದರೆ ಆಗುತ್ತದೆ. ವಾಸ್ತವವಾಗಿ ಹೇಳುವುದಾದರೆ ಯಾವುದೇ ಪಕ್ಷಕ್ಕೆ ಮತ್ತು ರಾಜಕಾರಣಿಗಳಿಗೆ ತತ್ವ, ಸಿದ್ಧಾಂತಗಳೇನೂ ಇಲ್ಲ. ಎಲ್ಲರೂ ಅವಕಾಶವಾದಿಗಳೇ’ ಎಂದರು.

ADVERTISEMENT

‘ಕಾಂಗ್ರೆಸ್ ನಮ್ಮನ್ನು ಬೆಳೆಸಿದೆ, ನಾವು ಪಕ್ಷ ಬೆಳೆಸಿದ್ದೇವೆ. ಸ್ವತಂತ್ರವಾಗಿ ಸ್ಪರ್ಧಿಸುವ ಶಕ್ತಿಯೂ ನಮಗೆ ಇದೆ. ಜನ ಸೇವೆಗಾಗಿ ರಾಜಕೀಯ ಅಧಿಕಾರ ಬೇಕು. ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡುತ್ತೇವೆ’ ಎಂದು ಹೇಳಿದರು.

ಫೋನ್‌ ಕದ್ದಾಲಿಕೆ ವಿಚಾರದಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಯಾವುದೇ ಶಿಕ್ಷೆಯೂ ಆಗುವುದಿಲ್ಲ. ಅವರು ಅಧಿಕಾರಿಗಳಿಗೆ ಲಿಖಿತವಾಗಿಯೇನೂ ಈ ಬಗ್ಗೆ ಸೂಚಿಸಿಲ್ಲ. ಮೌಖಿಕವಾಗಿ ಹೇಳಿರುತ್ತಾರೆ. ಅಧಿಕಾರಿಗಳು ಸಿಕ್ಕಿ ಹಾಕಿಕೊಳ್ಳುತ್ತಾರೆ ಅಷ್ಟೇ ಎಂದರು.

ಶಾಸಕರು ಬಿಜೆಪಿ ಕಡೆ ಹೋಗುತ್ತಾರೆ ಎನ್ನುವ ಕಾರಣಕ್ಕೆ ಒಗ್ಗಟ್ಟು ಕಾಯ್ದುಕೊಳ್ಳಲು ಕುಮಾರಸ್ವಾಮಿ ಬಿಜೆಪಿ ಬೆಂಬಲಿಸುವ ಮಾತನಾಡುತ್ತಿದ್ದಾರೆ. ಇದು ಒಂದು ರಾಜಕೀಯ ತಂತ್ರ ಎಂದು ಪ್ರತಿಪಾದಿಸಿದರು.

ಶಾಸಕ ಡಿ.ಕೆ ಶಿವಕುಮಾರ್‌ ವಿರುದ್ಧ ಜಾರಿ ನಿರ್ದೇಶನಾಲಯಕ್ಕೆ (ಇ.ಡಿ) ಮೂಗರ್ಜಿ ಬರೆದಿದ್ದೇ ದೇವೇಗೌಡರು. ಮೈತ್ರಿ ಸರ್ಕಾರ ರಚನೆಗೂ ಮುನ್ನ ಶಿವಕುಮಾರ್ ಮತ್ತು ದೇವೇಗೌಡರು ರಾಜಕೀಯ ಎದುರಾಳಿಗಳಾಗಿದ್ದರು. ಅರ್ಜಿ ಬರೆದಿಲ್ಲ ಎಂದು ದೇವೇಗೌಡರು ಯಾವುದಾದರೂ ದೇವಸ್ಥಾನಕ್ಕೆ ಬಂದು ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದರು.

**

ಯಡಿಯೂರಪ್ಪ ಅನರ್ಹ ಶಾಸಕರ ಉಪಕಾರ ಸ್ಮರಿಸಿದ್ದಾರೆ. ಇದು ಮನುಷ್ಯತ್ವ ಇರುವವರು ಹೇಳುವ ಮಾತು. ಆದರೆ ಅದನ್ನು ಆಡಿಯೊ ಮಾಡಿ ಪ್ರಚಾರ ಮಾಡಬಾರದಿತ್ತು. ಆಡಿಯೊ ಮಾಡಿರುವುದು ನಂಬಿಕೆ ದ್ರೋಹ.
ಕೆ.ಎನ್.ರಾಜಣ್ಣ, ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.