ADVERTISEMENT

ಮದಲೂರು ಕೆರೆಗೆ ನೀರು: ಶಾಸಕ ರಾಜೇಶ್ ಗೌಡ ಭರವಸೆ

ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಭರವಸೆ

​ಪ್ರಜಾವಾಣಿ ವಾರ್ತೆ
Published 29 ಜುಲೈ 2021, 16:23 IST
Last Updated 29 ಜುಲೈ 2021, 16:23 IST
ಶಿರಾ ತಾಲ್ಲೂಕಿನ ಕಳ್ಳಂಬೆಳ್ಳ ಕೆರೆಗೆ ಪಟ್ರಾವತಹಳ್ಳಿ ಎಸ್ಕೇಪ್ ಗೇಟ್ ಬಳಿ ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಹೇಮಾವತಿ ನೀರು ಹರಿಸಿದರು. ನಾರು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಬಿ.ಕೆ.ಮಂಜುನಾಥ್, ಮಾಲಿ ಮರಿಯಪ್ಪ, ಬಸವರಾಜು, ರಂಗಸ್ವಾಮಿ ಇದ್ದರು
ಶಿರಾ ತಾಲ್ಲೂಕಿನ ಕಳ್ಳಂಬೆಳ್ಳ ಕೆರೆಗೆ ಪಟ್ರಾವತಹಳ್ಳಿ ಎಸ್ಕೇಪ್ ಗೇಟ್ ಬಳಿ ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಹೇಮಾವತಿ ನೀರು ಹರಿಸಿದರು. ನಾರು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಬಿ.ಕೆ.ಮಂಜುನಾಥ್, ಮಾಲಿ ಮರಿಯಪ್ಪ, ಬಸವರಾಜು, ರಂಗಸ್ವಾಮಿ ಇದ್ದರು   

ಶಿರಾ: ‘ಮದಲೂರು ಕೆರೆಗೆ ನೀರು ಹರಿಯುವುದರಲ್ಲಿ ಯಾವುದೇ ಅನು
ಮಾನವಿಲ್ಲ. ಬಿಜೆಪಿ ಕೊಟ್ಟ ಮಾತನ್ನು ಉಳಿಸಿಕೊಳ್ಳಲಿದೆ’ ಎಂದು ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಹೇಳಿದರು.

ತಾಲ್ಲೂಕಿನ ಗಡಿ ಭಾಗವಾದ ಪಟ್ರಾವತನಹಳ್ಳಿ ಬಳಿ ಹೇಮಾವತಿ ನಾಲೆಯ ಎಸ್ಕೇಪ್ ಗೇಟ್‌ನಿಂದ ಕಳ್ಳಂಬೆಳ್ಳ ಕೆರೆಗೆ ನೀರು ಹರಿಸಿ ಮಾತನಾಡಿದರು.

ಹೇಮಾವತಿ ಜಲಾಶಯ ಭರ್ತಿಯಾಗಲು ಇನ್ನೂ ಕೇವಲ ಎರಡು ಅಡಿ ನೀರು ಮಾತ್ರ ಬಾಕಿ ಇದೆ. ಜೊತೆಗೆ ಉತ್ತಮ ಮಳೆಯಾಗುತ್ತಿರುವುದರಿಂದ ಜಲಾಶಯದಿಂದ ನೀರು ಹೊರಬಿಟ್ಟಿದ್ದು ಇದೇ ಪ್ರಥಮ ಬಾರಿಗೆ ಜುಲೈ ಅಂತ್ಯದೊಳಗೆ ಶಿರಾ ತಾಲ್ಲೂಕಿಗೆ ಹೇಮಾವತಿ ನೀರು ಹರಿದು ಬರುತ್ತಿದೆ ಎಂದರು.

ADVERTISEMENT

ಶಿರಾ ಹಾಗೂ ಕಳ್ಳಂಬೆಳ್ಳ ಕೆರೆಗೆ ಹೇಮಾವತಿಯಿಂದ 0.9 ಟಿಎಂಸಿ ಅಡಿ ನೀರು ನಿಗದಿ ಮಾಡಲಾಗಿದೆ. ಈಗ ಎರಡು ಕೆರೆಯಲ್ಲಿ ನೀರಿರುವುದರಿಂದ ಕೆರೆಗಳಲ್ಲಿ ನಿಗದಿತ ಮಟ್ಟದಲ್ಲಿ ನೀರು ಸಂಗ್ರಹಿಸಿ ಹೆಚ್ಚುವರಿ ನೀರನ್ನು ಮದ
ಲೂರು ಕೆರೆಗೆ ಹರಿಸಲಾಗುವುದು ಎಂದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬಳಿ ನಿಯೋಗ ತೆರಳಿ ನೀರು ಹರಿಸುವಂತೆ ಮನವಿ ಮಾಡಲಾಗುವುದು. ಅವರಿಗೆ ಮದಲೂರು ಕೆರೆಯ ಬಗ್ಗೆ ಮಾಹಿತಿ ಇದೆ. 2009ರಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದಾಗ ಮದಲೂರು ಕೆರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಯೋಜನೆಗೆ ಅನುಮತಿ ನೀಡಿದ್ದರು. ಅವರು ಈ ಭಾಗದ ಜನರ ನೋವಿಗೆ ಸ್ವಂದಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಾರು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಬಿ.ಕೆ.ಮಂಜುನಾಥ್ ಮಾತನಾಡಿ, ಹೇಮಾವತಿ ನೀರು ಪಡೆಯಲು ಇದುವರೆಗೂ ಹೋರಾಟ ನಡೆಸಬೇಕಿತ್ತು. ಆದರೆ ಈ ಬಾರಿ ಯಾವುದೇ ಹೋರಾಟವಿಲ್ಲದೆ ನೀರು ಬರುತ್ತಿವೆ. ಮದಲೂರು ಕೆರೆಗೆ ನೀರು ಹರಿಸುವ ವಿಚಾರವನ್ನು ಇದುವರೆಗೂ ರಾಜಕೀಯ ಲಾಭಕ್ಕಾಗಿ ಕೆಲವರು ಬಳಸಿಕೊಳ್ಳುತ್ತಿದ್ದರು. ಆದರೆ ಇದಕ್ಕೆ ಬಿಜೆಪಿ ಇತಿಶ್ರೀ ಹಾಡಿದ್ದು, ಇನ್ನು ಮುಂದೆ ಮದಲೂರು ಕೆರೆಗೆ ಶಾಶ್ವತವಾಗಿ ನೀರು ಹರಿಸಲು ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಭದ್ರಾ ಮೇಲ್ದಂಡೆ ಯೋಜನೆಯಿಂದ ಮದಲೂರು ಕೆರೆಗೆ ನೀರು ನಿಗದಿ ಮಾಡಲಾಗಿದೆ ಎಂದರು.

ನಗರಸಭೆ ಪೌರಾಯುಕ್ತ ಶ್ರೀನಿವಾಸ್, ಎಇಇ ಸೇತುರಾಮ್ ಸಿಂಗ್, ಬಿಜೆಪಿ ಗ್ರಾಮಾಂತರ ಮೋರ್ಚಾ ಅಧ್ಯಕ್ಷ ರಂಗಸ್ವಾಮಿ, ಮುಖಂಡರಾದ ಮಾಲಿ ಮರಿಯಪ್ಪ, ಬಸವರಾಜು, ಸುಧಾಕರ್ ಗೌಡ, ಮದಲೂರು ನರಸಿಂಹಮೂರ್ತಿ, ಮಾಲಿ ಸಿ.ಎಲ್.ಗೌಡ, ನಟರಾಜು, ಕೋಟೆ ರವಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.