ADVERTISEMENT

ಶರೀರ ಸ್ವಾಸ್ತ್ಯದಿಂದ ಆಧ್ಯಾತ್ಮಿಕ ಸಾಧನೆ

ಹರಿದ್ವಾರ ರಾಮಕೃಷ್ಣ ಮಿಷನ್ ಸೇವಾಶ್ರಮದ ಸ್ವಾಮಿ ದಯಾಧಿಪಾನಂದಜೀ ಮಹಾರಾಜ್‍ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2019, 20:30 IST
Last Updated 8 ಡಿಸೆಂಬರ್ 2019, 20:30 IST
ತುಮಕೂರು ರಾಮಕೃಷ್ಣ-ವಿವೇಕಾನಂದ ಆಶ್ರಮದಲ್ಲಿ ಆಯೋಜಿಸಲಾಗಿದ್ದ ‘ಭಕ್ತ ಸಮ್ಮೇಳನ’ವನ್ನು ಹರಿದ್ವಾರ ರಾಮಕೃಷ್ಣ ಮಿಷನ್ನಿನ ಸ್ವಾಮಿ ದಯಾಧಿಪಾನಂದಜೀ ಉದ್ಘಾಟಿಸಿದರು. ಚಿತ್ರದಲ್ಲಿ ಸ್ವಾಮಿ ಶಿವಪೂರ್ಣಾನಂದಜೀ, ಸ್ವಾಮಿ ವೀರೇಶಾನಂದಜೀ ಹಾಗೂ ಸ್ವಾಮಿ ಧೀರಾನಂದಜೀ ಇದ್ದಾರೆ.
ತುಮಕೂರು ರಾಮಕೃಷ್ಣ-ವಿವೇಕಾನಂದ ಆಶ್ರಮದಲ್ಲಿ ಆಯೋಜಿಸಲಾಗಿದ್ದ ‘ಭಕ್ತ ಸಮ್ಮೇಳನ’ವನ್ನು ಹರಿದ್ವಾರ ರಾಮಕೃಷ್ಣ ಮಿಷನ್ನಿನ ಸ್ವಾಮಿ ದಯಾಧಿಪಾನಂದಜೀ ಉದ್ಘಾಟಿಸಿದರು. ಚಿತ್ರದಲ್ಲಿ ಸ್ವಾಮಿ ಶಿವಪೂರ್ಣಾನಂದಜೀ, ಸ್ವಾಮಿ ವೀರೇಶಾನಂದಜೀ ಹಾಗೂ ಸ್ವಾಮಿ ಧೀರಾನಂದಜೀ ಇದ್ದಾರೆ.   

ತುಮಕೂರು: ಶರೀರ ಸ್ವಾಸ್ತ್ಯದಿಂದ ಮಾತ್ರವೇ ಆಧ್ಯಾತಿಕ ಸಾಧನೆ ಸಾಧ್ಯ ಎಂದು ಹರಿದ್ವಾರ ರಾಮಕೃಷ್ಣ ಮಿಷನ್ ಸೇವಾಶ್ರಮದ ಸ್ವಾಮಿ ದಯಾಧಿಪಾನಂದಜೀ ಮಹಾರಾಜ್‍ ಅಭಿಪ್ರಾಯಪಟ್ಟರು.

ತುಮಕೂರು ರಾಮಕೃಷ್ಣ-ವಿವೇಕಾನಂದ ಆಶ್ರಮದಲ್ಲಿ ಭಾನುವಾರ ಶ್ರೀರಾಮಕೃಷ್ಣರ ಅಮೃತ ಶಿಲಾಮೂರ್ತಿ ಪ್ರತಿಷ್ಠಾಪನಾ ಮಹೋತ್ಸವದ 9ನೇ ವಾರ್ಷಿಕೋತ್ಸವ ಕಾರ್ಯಕ್ರಮದ ಪ್ರಯುಕ್ತ ಆಯೋಜಿಸಲಾಗಿದ್ದ ‘ಭಕ್ತ ಸಮ್ಮೇಳನ’ವನ್ನು ಉದ್ಘಾಟಿಸಿ ಅವರು ‘ಸಾಧನಾ ಬದುಕಿನಲ್ಲಿ ಆರೋಗ್ಯದ ಮಹತ್ವ’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಆಧ್ಯಾತ್ಮಿಕ ಆನಂದ ಪಡೆಯುವುದೇ ಮಾನವ ಜೀವನದ ಅತ್ಯುನ್ನತ ಗುರಿ. ಈ ಗುರಿ ಮುಟ್ಟುವುದಕ್ಕೆ ಮುಖ್ಯ ಸಾಧನ ಶರೀರ. ಹಾಗಾಗಿ ಶರೀರ ಸ್ವಾಸ್ತ್ಯದಿಂದ ಮಾತ್ರವೇ ಆಧ್ಯಾತಿಕ ಸಾಧನೆ ಸಾಧ್ಯ. ಅಲ್ಲದೆ, ಧರ್ಮ, ಆರ್ಥ, ಕಾಮ, ಮೋಕ್ಷ ಮೊದಲಾದ ಪುರುಷಾರ್ಥಗಳನ್ನು ಪಡೆಯುವುದಕ್ಕೆ ಮೂಲವಾಗಿ ಬೇಕಿರುವುದು ಶಾರೀರಿಕ ಆರೋಗ್ಯ ಎಂದು ಹೇಳಿದರು.

ADVERTISEMENT

ಹಸಿವಿದ್ದಷ್ಟೇ ಆಹಾರ ಸ್ವೀಕರಿಸುವುದು, ಅವಶ್ಯಕತೆಯಿದ್ದಷ್ಟೇ ನೀರು ಸೇವಿಸುವುದು, ಬೇಗ ಮಲಗಿ ಬೇಗ ಏಳುವುದು ಹೀಗೆ ಮುಂತಾದ ಆರೋಗ್ಯದ ನಿಯಮಗಳನ್ನು ಪ್ರಕೃತಿ ತಾನಾಗಿ ಹಾಕಿಕೊಟ್ಟಿದೆ. ವಿಶ್ವ ಆರೋಗ್ಯ ಸಂಸ್ಥೆ ಕೂಡ ಶಾರೀರಿಕ, ಮಾನಸಿಕ, ಸಾಮಾಜಿಕ, ಆಧ್ಯಾತಿಕ ಸ್ವಾಸ್ತ್ಯವೇ ಆರೋಗ್ಯವಂತ ಸಮಾಜದ ಸ್ಪಷ್ಟ ಕುರುಹು ಎಂದು ಹೇಳಿದೆ ಎಂದರು.

ತುಮಕೂರು ರಾಮಕೃಷ್ಣ-ವಿವೇಕಾನಂದ ಆಶ್ರಮದ ಪೂಜ್ಯ ಸ್ವಾಮಿ ಧೀರಾನಂದಜೀ ಮಹಾರಾಜ್‍ ಮಾತನಾಡಿ, ‘ಸಾಧುಸಂಗ, ಸತ್ಸಂಗದಿಂದ ವಿವೇಕ ವೈರಾಗ್ಯ ಜಾಗೃತವಾಗುತ್ತವೆ. ಭಗವಂತ ಸರ್ವಶಕ್ತ, ಸರ್ವವ್ಯಾಪಿ, ಕರುಣಾಮಯ ಎಂದು ಭಾವಿಸುತ್ತಾ ಜಪ ಮಾಡಿದಾಗ ಬಹಳ ಬೇಗ ಆಧ್ಯಾತ್ಮಿಕ ಉನ್ನತಿಯುಂಟಾಗುತ್ತದೆ. ಭಕ್ತಿಯಿಂದ ಪ್ರಾರ್ಥಿಸಿದಾಗ ಖಂಡಿತವಾಗಿಯೂ ಭಗವಂತ ಅದನ್ನು ಆಲಿಸುತ್ತಾನೆ’ ಎಂದು ಹೇಳಿದರು.

ಕೋಲ್ಕತ್ತಾದ ಸ್ವಾಮಿ ಶಿವಪೂರ್ಣಾನಂದಜೀ ಮಹಾರಾಜ್‍ ಭಗವನ್ನಾಮ ಸಂಕೀರ್ತನೆ ನೆರವೇರಿಸಿಕೊಟ್ಟರು. ಸ್ವಾಮಿ ವೀರೇಶಾನಂದ ಸರಸ್ವತಿ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.