
ತುಮಕೂರು: ಈ ಬಾರಿ ರಂಗಾಯಣ ವತಿಯಿಂದ ನಾಟಕೋತ್ಸವವನ್ನು ನ. 17ರಿಂದ 21ರವರೆಗೆ ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮೈಸೂರು ರಂಗಾಯಣ ನಿರ್ದೇಶಕ ಸತೀಶ್ ತಿಪಟೂರು ಸೋಮವಾರ ತಿಳಿಸಿದರು.
ನಗರ ವ್ಯಾಪ್ತಿಯ ಶಾಲಾ, ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕರು ಭಾಗವಹಿಸಬಹುದು. ನಾಟಕೋತ್ಸವದಲ್ಲಿ ಗಣೇಶ ಮಂದಾರ್ತಿ ನಿರ್ದೇಶನದ ‘ಮೈ ಫ್ಯಾಮಿಲಿ’ ನಾಟಕ ಪ್ರದರ್ಶನಗೊಳ್ಳಲಿದೆ. ಪ್ರತಿ ದಿನ ಬೆಳಿಗ್ಗೆ 10.30 ಹಾಗೂ ಮಧ್ಯಾಹ್ನ 2 ಗಂಟೆಗೆ ನಾಟಕ ಪ್ರದರ್ಶನ ಆರಂಭವಾಗಲಿದೆ. ಪ್ರವೇಶ ದರ ಪ್ರತಿ ವಿದ್ಯಾರ್ಥಿಗೆ ₹50 ನಿಗದಿಪಡಿಸಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ತಂತ್ರಜ್ಞಾನ ಯುಗದ ಇಂದಿನ ಕಾಲಘಟ್ಟದಲ್ಲಿ ಮೊಬೈಲ್ ಮೂಲಕ ಹಲವು ವರ್ಚುವಲ್ ಲೋಕದಲ್ಲಿ ಬದುಕುತ್ತಿದ್ದೇವೆ. ಈ ‘ವಚ್ರ್ಯುಯಲ್ ಜಗತ್ತು’ ನಮ್ಮೆಲ್ಲರ ನಿಜ ಬದುಕಿನ ವಾಸ್ತವವಾಗಿದೆ. ಜತೆಗೆ ಪ್ರತಿಯೊಬ್ಬರ ಬದುಕಿನ ಲಯಗಳೂ ಬೇರೆ-ಬೇರೆಯಾಗಿವೆ. ಹೀಗೆ ಅಸಹಜ ಮತ್ತು ಸಹಜ ಬದುಕಿನ ನಡುವಿನ ವ್ಯತ್ಯಾಸಗಳೇ ಅರಿವಾಗದಂತೆ, ಛಿದ್ರಗೊಂಡಂತೆ ಭಾಸವಾಗುತ್ತಿರುವ ಲೋಕವನ್ನು ಪ್ರಕೃತಿ ಸಹಜ ಲಯ ಮತ್ತು ಭಾವ-ಬಂಧದಲ್ಲಿ ಧ್ಯಾನಿಸುತ್ತಾ ವಾಸ್ತವ ಲೋಕದ ಅರಿವನ್ನು ಪಡೆದುಕೊಳ್ಳುವ ಪ್ರಯತ್ನ ಈ ಪ್ರಯೋಗದ ಭಾಗವಾಗಿದೆ ಎಂದು ಮಾಹಿತಿ ನೀಡಿದರು.
ಎಚ್.ಕೆ.ದ್ವಾರಕಾನಾಥ್ ರಂಗವಿನ್ಯಾಸ, ಮಹೇಶ್ ಕಲ್ಲತ್ತಿ ಬೆಳಕಿನ ವಿನ್ಯಾಸ, ಗಣೇಶ್ ಮಂದಾರ್ತಿ ಸಂಗೀತ, ವಿನ್ಯಾಸ, ನಿರ್ದೇಶನ, ಶ್ರವಣ್ ಹೆಗ್ಗೋಡು ಪಪೆಟ್ರಿ, ಕೆ.ಆರ್.ನಂದಿ ಪರಿಕರ, ಬಿ.ಎನ್.ಶಶಿಕಲಾ ವಸ್ತ್ರ ವಿನ್ಯಾಸಗೊಳಿಸಲಿದ್ದಾರೆ ಎಂದು ತಿಳಿಸಿದರು.
ಸಂಚಾಲಕ ಯೋಗಾನಂದ್ ಅರಸೀಕೆರೆ, ನಾಟಕ ಅಕಾಡೆಮಿ ಸದಸ್ಯ ಉಗಮ ಶ್ರೀನಿವಾಸ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.