ADVERTISEMENT

ಕ್ವಿಂಟಲ್ ಕೊಬ್ಬರಿ ದರ ₹20,900: ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಮುಟ್ಟಿದ ಬೆಲೆ

​ಪ್ರಜಾವಾಣಿ ವಾರ್ತೆ
Published 26 ಮೇ 2025, 23:30 IST
Last Updated 26 ಮೇ 2025, 23:30 IST
ಕೊಬ್ಬರಿ
ಕೊಬ್ಬರಿ   

ತುಮಕೂರು: ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಸೋಮವಾರ ಕೊಬ್ಬರಿ ಧಾರಣೆ ಸಾರ್ವಕಾಲಿಕ ದಾಖಲೆ ಬರೆದಿದೆ. ಕ್ವಿಂಟಲ್ ಕೊಬ್ಬರಿ ಬೆಲೆ ₹20,900ಕ್ಕೆ ಏರಿಕೆಯಾಗಿದೆ. 

ಕ್ವಿಂಟಲ್‌ ಕೊಬ್ಬರಿ ಗರಿಷ್ಠ ₹20,900 ಬೆಲೆಗೆ ಮಾರಾಟವಾದರೆ, ಕನಿಷ್ಠ ₹19,500 ಮತ್ತು ಮಾದರಿ ₹20,500ಕ್ಕೆ ಮಾರಾಟವಾಗಿದೆ. ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ 3,056 ಕ್ವಿಂಟಲ್ (7,112 ಚೀಲ) ಕೊಬ್ಬರಿ ಆವಕವಾಗಿತ್ತು.

ಕಳೆದ ಮಾರ್ಚ್ 24ರಂದು ₹19,051ಕ್ಕೆ ಮಾರಾಟವಾಗುವ ಮೂಲಕ ದಾಖಲೆ ಬರೆದಿತ್ತು. 2014–2015ನೇ ಸಾಲಿನಲ್ಲಿ ಕ್ವಿಂಟಲ್ ₹19 ಸಾವಿರಕ್ಕೆ ಮಾರಾಟವಾಗಿದ್ದೇ ಈವರೆಗಿನ ದಾಖಲೆಯಾಗಿತ್ತು. ಕಳೆದ ಎರಡು ತಿಂಗಳಿಂದ ₹19 ಸಾವಿರದ ಆಸುಪಾಸಿನಲ್ಲೇ ಇದ್ದ ಬೆಲೆ ಈಗ ಒಮ್ಮೆಲೆ ಕ್ವಿಂಟಲ್‌ಗೆ ₹1 ಸಾವಿರ ಏರಿಕೆ ಕಂಡಿದೆ.

ADVERTISEMENT

ಏರಿಕೆಗೆ ಕಾರಣ:

ಮಾರುಕಟ್ಟೆಯಲ್ಲಿ ಕೊಬ್ಬರಿ ಆವಕ ತೀವ್ರವಾಗಿ ಕಡಿಮೆಯಾಗಿದ್ದು, ಟೆಂಡರ್ ಸಮಯದಲ್ಲಿ ಮಾಡಿದ ಬದಲಾವಣೆ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ. ದಿನದಿಂದ ದಿನಕ್ಕೆ ಬೆಲೆ ಏರಿಕೆಯಾಗುತ್ತಿರುವುದು ತೆಂಗು ಬೆಳೆಗಾರರ ಮೊಗದಲ್ಲಿ ಹರ್ಷ ಮೂಡಿಸಿದೆ.

ಹಿಂದೆ ವಾರದಲ್ಲಿ ಮೂರು ದಿನ (ಸೋಮವಾರ, ಬುಧವಾರ, ಶನಿವಾರ) ಟೆಂಡರ್ ಪ್ರಕ್ರಿಯೆ ನಡೆಯುತ್ತಿತ್ತು. ನವೆಂಬರ್‌ನಿಂದ ವಾರದಲ್ಲಿ ಎರಡು ದಿನ (ಸೋಮವಾರ, ಗುರುವಾರ) ಹರಾಜು ನಡೆಯುತ್ತಿದೆ. ಜತೆಗೆ ಬಿಡ್‌ದಾರರು ನೇರವಾಗಿ ಭಾಗವಹಿಸಲು ಅವಕಾಶ ನೀಡಿದ್ದು, ಖರೀದಿದಾರರೇ ಬೆಲೆ ನಿಗದಿಪಡಿಸಿ ಖರೀದಿಸುತ್ತಿರುವುದು ಬೆಲೆ ಹೆಚ್ಚಳಕ್ಕೆ ದಾರಿಮಾಡಿಕೊಟ್ಟಿದೆ ಎಂದು ತಿಪಟೂರು ಎಪಿಎಂಸಿ ಕಾರ್ಯದರ್ಶಿ ನ್ಯಾಮಗೌಡ ಹೇಳುತ್ತಾರೆ.

ಆವಕ ಕುಸಿತ:

ಎಳನೀರು, ತೆಂಗಿನಕಾಯಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುತ್ತಿದ್ದು, ಕಾಯಿಯನ್ನು ಕೊಬ್ಬರಿಗೆ ದಾಸ್ತಾನು ಮಾಡುವುದು ಕಡಿಮೆಯಾಗಿದೆ. ಅಡಿಕೆಗೂ ಉತ್ತಮ ಬೆಲೆ ಸಿಗುತ್ತಿದ್ದು, ತೆಂಗಿನ ಜಾಗವನ್ನು ಅಡಿಕೆ ಬೆಳೆ ಆವರಿಸಿಕೊಂಡಿದೆ. ರೋಗ ಬಾಧೆ ಹಾಗೂ ಇತರ ಕಾರಣಗಳಿಂದ ತೆಂಗಿನ ಬೆಳೆ ಸಂಕಷ್ಟಕ್ಕೆ ಸಿಲುಕಿದ್ದು, ಕೊಬ್ಬರಿ ಇಳುವರಿ ತಗ್ಗಿಸಿದೆ.

ಜೂನ್‌ನಿಂದ 3 ತಿಂಗಳು ಕೊಬ್ಬರಿ ಮಾರಾಟಕ್ಕೆ ಬರಲಿದ್ದು ಇದೇ ಬೆಲೆ ಸಿಗುವ ಆಶಾಭಾವನೆಯಲ್ಲಿ ರೈತರಿದ್ದಾರೆ. ಆವಕ ಕಡಿಮೆ ಇರುವುದರಿಂದ ಮುಂದಿನ ದಿನಗಳಲ್ಲಿ ಬೆಲೆ ಮತ್ತಷ್ಟು ಏರಿಕೆಯಾಗಬಹುದು
–ವರ್ತಕರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.