
ಕುಣಿಗಲ್: ವಿಶ್ವದಲ್ಲಿ ಧರ್ಮಾಧಾರಿತ ದೇಶಗಳಾದ ಪಾಕಿಸ್ತಾನ, ಬಾಂಗ್ಲಾ ಅರಾಜಕತೆಯಿಂದ ಪತನಗೊಳ್ಳುತ್ತಿವೆ. ಜಾತ್ಯತೀತ ತತ್ವದ ಭಾರತ ಇನ್ನಷ್ಟು ಕಾಲ ಉಳಿಯಬೇಕಾದರೆ ಧರ್ಮಾಧಾರಿತ ರಾಜಕಾರಣಕ್ಕೆ ಕುಮ್ಮಕು ನೀಡಬಾರದು ಎಂದು ಸಾಹಿತಿ ಜಾಣಗೆರೆ ವೆಂಕಟರಾಮಯ್ಯ ತಿಳಿಸಿದರು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅತ್ಯಾಧುನಿಕ ಗ್ರಂಥಾಲಯವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.
ದೇಶದಲ್ಲಿ ಜಾತಿ, ಧರ್ಮಗಳ ನಡುವೆ ಎತ್ತಿಕೊಡುವ ಧರ್ಮಾಧಾರಿತ ರಾಜಕಾರಣ ನಡೆಯುತ್ತಿದೆ. ಈ ವ್ಯವಸ್ಥೆಗೆ ಕುಮ್ಮಕ್ಕು ನೀಡಿದರೆ ಶೂದ್ರರು, ದಲಿತರಿಗೆ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುವುದಿಲ್ಲ. ಮತ್ತೆ ಪುರುಹೋಹಿತಶಾಹಿ ಆಡಳಿತ ಬರುವುದು ಖಚಿತ ಎಂದು ಅಭಿಪ್ರಾಯಟ್ಟರು.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರ ಅವಿವೇಕದ ವರ್ತನೆ ಹೆಚ್ಚಾಗಿ ಅವಾಂತರ, ಹಗರಣಗಳ ಸರಮಾಲೆಯಿಂದ ಪರಿಷತ್ ಹಾಳಾಗಿದೆ. ಕನ್ನಡಪರ ಹೋರಾಟಗಾರರ ಹೋರಾಟದಿಂದ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲಾಗಿದೆ. ಹಗರಣಗಳ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಜೈಲಿಗೆ ಸೇರಬೇಕಾದ ಸ್ಥತಿಯು ಅವರಿಗೆ ಬರಲಿದೆ ಎಂದರು.
ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷ ಕರಿಗೌಡ ಬೀಚನಹಳ್ಳಿ ಮಾತನಾಡಿ, ಗ್ರಂಥಾಲಯಗಳಿಗೆ ಕ್ರಿಸ್ತಪೂರ್ವದಲಿ ನಳಂದ ವಿ.ವಿಯಿಂದಲೂ ನಡೆದು ಬಂದ ಚರಿತ್ರೆ ಇದೆ. ಗ್ರಂಥಾಲಯಗಳು ಸಾರ್ವಜನಿಕ ವಿಶ್ವವಿದ್ಯಾಲಯಗಳಾಗಿದ್ದು, ಪುಸ್ತಕ, ಗ್ರಂಥಗಳ ಸಂಗ್ರಹ ಸುಲಭ, ನಿರ್ವಹಣೆ ಮಾತ್ರ ಕಷ್ಟವಾಗುತ್ತಿದೆ. ತಾಂತ್ರಿಕ ಯುಗದಲ್ಲಿ ಶಾಂತಿ ನೆಮ್ಮದಿಯನ್ನು ಉತ್ತಮ ಸಾಹಿತ್ಯ ಓದಿನಿಂದ ಮಾತ್ರ ಪಡೆಯಬಹುದು ಎಂದರು.
ಸಾಹಿತಿ ನಾರಾಯಣ ಹೊಡಾಘಟ್ಟ ಮಾತನಾಡಿ, ವೈಚಾರಿಕ ಪ್ರಜ್ಞೆ ಬೆಳೆಸಿಕೊಳ್ಳಬೇಕು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ನೂರಾರು ದೇವಾಲಯಗಳನ್ನು ಸುತ್ತಿ ಪೂಜೆ, ಹೋಮ ಮಾಡಿಸುತ್ತಿದ್ದಾರೆ. ಆದರೆ ಅಧಿಕಾರ ಇನ್ನೂ ಸಿಕ್ಕಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ವೈಚಾರಿಕ ಸಾಹಿತ್ಯದ ಹಿಂದೆ ಹೋಗಿ ಜನರ ಮನಸು ಅರಿತು, ಜನಗಳ ಮದ್ಯೆ ಬೆರೆತು ಜನಪರ ಯೋಜನೆಗಳನ್ನು ನೀಡಿ ಇನ್ನೂ ಅಧಿಕಾರದಲ್ಲಿ ಮುಂದುವರೆದಿದ್ದಾರೆ ಎಂದು ವಿಶ್ಲೇಷಿಸಿದರು.
ಲೇಖಕ ವೈ.ಜಿ.ವೆಂಕಟೇಶಯ್ಯ ಅವರಿಗೆ ‘ಮಲ್ಲಮ್ಮ ಪಟೇಲ್ ನಾರಸಿಗೌಡ’ ಪ್ರಶಸ್ತಿ ನೀಡಲಾಯಿತು. ಮಾಜಿ ಅಧ್ಯಕ್ಷ ಕ.ಚ.ಕೃಷ್ಣಪ್ಪ ಅವರ ವಿಚಾರ ಸಾಹಿತ್ಯ ಕೃತಿ ಬಿಡುಗಡೆ ಮಾಡಲಾಯಿತು.
ಗ್ರಂಥಾಲಯದ ದಾನಿಗಳಾದ ವೆಗೋಲ ಇಂಡಿಯಾ ಸಂಸ್ಥೆಯ ಪ್ರದಾನ ವ್ಯವಸ್ಥಾಪಕ ಜಗದೀಶ್ ನಾಯಕ್, ಕಸಾಪ ಅಧ್ಯಕ್ಷ ಕಪನಿಪಾಳ್ಯ ರಮೇಶ್, ಮಾಜಿ ಅಧ್ಯಕ್ಷರಾದ ಕೆ.ಎಚ್.ವೆಂಕಟೇಶ್, ಜಿ.ಬಿ.ಮಲ್ಲಯ್ಯ, ತಗಡೂರು ವೀರಭದ್ರಯ್ತ, ಗಾಯತ್ರಿ ರಾಜು, ದಿನೇಶ್ ಕುಮಾರ್, ಕಚ. ಕೃಷ್ಣಪ್ಪ ಅವರನ್ನು ಸನ್ಮಾನಿಸಲಾಯಿತು.
ಸಾಹಿತಿ ಸೊಂದಲಗೆರೆ ಲಕ್ಷ್ಮೀಪತಿ, ಮಾಜಿ ಸಚಿವ ಡಿ.ನಾಗರಾಜಯ್ಯ, ಕಸಾಪ ಪದಾಧಿಕಾರಿಗಳು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.