ADVERTISEMENT

ವೇತನ ಹೆಚ್ಚಳಕ್ಕೆ ಬಿಸಿಯೂಟ ತಯಾರಕರ ಮನವಿ

ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 10 ಜೂನ್ 2019, 16:02 IST
Last Updated 10 ಜೂನ್ 2019, 16:02 IST
ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ಪ್ರತಿನಿಧಿಗಳು ಸೋಮವಾರ ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು
ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ಪ್ರತಿನಿಧಿಗಳು ಸೋಮವಾರ ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು   

ತುಮಕೂರು: 2019–20ರ ಬಜೆಟ್‌ನಲ್ಲಿ ಬಿಸಿಯೂಟ ತಯಾರಕರನ್ನು ಕಡೆಗಣಿಸಿದ್ದು, ಪುನಃ ಜುಲೈ 5ರಂದು ಮಂಡಿಸುವ ಬಜೆಟ್‌ನಲ್ಲಿ ವೇತನ ಹೆಚ್ಚಳ ಮಾಡಬೇಕು ಎಂದು ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ (ಎಐಟಿಯುಸಿ) ಜಿಲ್ಲಾ ಸಮಿತಿ ನೇತೃತ್ವದಲ್ಲಿ ಬಿಸಿಯೂಟ ನೌಕರರು ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ ಅವರ ಮೂಲಕ ಕೇಂದ್ರ ಸರ್ಕಾರಕ್ಕೆ ಸೋಮವಾರ ಮನವಿ ಸಲ್ಲಿಸಿದರು.

ಕಳೆದ ಬಜೆಟ್‌ನಲ್ಲಿ ವೇತನ ಹೆಚ್ಚಳ ಮಾಡಿಲ್ಲ. ಇದರಿಂದ ಬಿಸಿಯೂಟ ತಯಾರಕರಿಗೆ ಬಹಳ ಅನ್ಯಾಯ ಆಗಿದೆ ಎಂದು ಹೇಳಿದರು.

ಬಿಸಿಯೂಟ ತಯಾರಕರಿಗೆ ಕನಿಷ್ಠ ವೇತನ ಜಾರಿಗೊಳಿಸಬೇಕು, ಶಾಲೆಗಳ ಬಿಸಿಯೂಟ ಪೂರೈಕೆಯನ್ನು ಇಸ್ಕಾನ್ ಹಾಗೂ ಮತ್ತಿತರ ಖಾಸಗಿ ಸಂಸ್ಥೆಗಳಿಗೆ ಕೊಡುವ ಹುನ್ನಾರ ಕೈ ಬಿಡಬೇಕು, ಬಿಸಿಯೂಟ ತಯಾರಕರಿಗೆ ಕೆಲಸದ ಭದ್ರತೆ ಒದಗಿಸಬೇಕು ಎಂಬುದು ಸೇರಿದಂತೆ ಹನ್ನೊಂದು ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು.

ADVERTISEMENT

ಬಿಸಿಯೂಟ ತಯಾರಕರನ್ನು ಶಾಲಾ ಸಿಬ್ಬಂದಿಯಾಗಿ ಪರಿಗಣಿಸಬೇಕು, ಕಾರ್ಮಿಕರೆಂದು ಪರಿಗಣಿಸಿ ಕಾರ್ಮಿಕ ಕಾಯ್ದೆಯಡಿ ತರಬೇಕು, ಪಿಎಫ್ ಮತ್ತು ಇಎಸ್‌ಐ ಜಾರಿಗೆ ತರಬೇಕು, ಬಿಸಿಯೂಟಯೋಜನೆ ಎನ್ನುವುದನ್ನು ಕೈಬಿಟ್ಟು ಬಿಸಿಯೂಟ ನಿರಂತರ ಕಾರ್ಯಕ್ರಮ ಎಂದು ಬದಲಾಯಿಸಬೇಕು ಎಂದು ಒತ್ತಾಯಿಸಿದರು.

ಬಿಸಿಯೂಟ ತಯಾರಕರಿಗೆ ₹ 2 ಲಕ್ಷ ಅಪಘಾತ ಪರಿಹಾರ ಹಾಗೂ ₹ 5 ಲಕ್ಷ ಮರಣ ಪರಿಹಾರ ಕೊಡಬೇಕು, ಈಗಾಗಲೇ ಕೆಲವು ಜಿಲ್ಲೆಗಳಲ್ಲಿ ಖಾಸಗಿ ಸಂಸ್ಥೆಗಳಿಗೆ ಬಿಸಿಯೂಟ ಪೂರೈಕೆ ವಹಿಸಿಕೊಟ್ಟಿದ್ದು, ಕೂಡಲೇ ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಿದರು.

ಬಿಸಿಯೂಟ ತಯಾರಕರಿಗೆ ದಸರಾ ರಜೆ, ಬೇಸಿಗೆ ರಜಾದಿನಗಳ ಸಂಬಳ ಕೊಡಬೇಕು, 60 ವರ್ಷ ವಯಸ್ಸಾದ ಬಿಸಿಯೂಟ ತಯಾರಕರಿಗೆ ತಿಂಗಳಿಗೆ ₹ 3 ಸಾವಿರ ನಿವೃತ್ತಿ ಪಿಂಚಣಿ, ₹ 2 ಲಕ್ಷ ಇಡುಗಂಟು ಹಣ ಕೊಡಬೇಕು ಎಂದು ಒತ್ತಾಯ ಮಾಡಿದರು.

ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಿರೀಶ್, ಫೆಡರೇಷನ್ ಜಿಲ್ಲಾ ಸಂಚಾಲಕ ಸಿ.ಎಸ್.ಸತ್ಯನಾರಾಯಣ, ಫೆಡರೇಷನ್ ಗುಬ್ಬಿ ತಾಲ್ಲೂಕು ಸಂಚಾಲಕಿ ವನಜಾಕ್ಷಮ್ಮ, ಸಂಚಾಲಕಿಯರಾದ ನಳಿನಾ (ತಿಪಟೂರು), ವನಜಾಕ್ಷಮ್ಮ( ಗುಬ್ಬಿ), ನಾಗರತ್ನಮ್ಮ .ರಾಧಮ್ಮ ( ತುಮಕೂರು ನಗರ), ಎಚ್.ಆರ್.ಕಮಲಾ (ತುಮಕೂರು ತಾಲ್ಲೂಕು), ಚಂದ್ರಕಲಾ (ಚಿಕ್ಕನಾಯಕನಹಳ್ಳಿ), ಪದ್ಮಾ( ಕೊರಟಗೆರೆ), ಸಾವಿತ್ರಮ್ಮ (ಶಿರಾ) ಹಾಗೂ ಜಿಲ್ಲಾ ಸಂಚಾಲಕ ಶಶಿಕಾಂತ್ ಮನವಿ ಸಲ್ಲಿಸುವ ವೇಳೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.