ADVERTISEMENT

ಗಾಂಜಾ ಸೇವನೆ: ತಪಾಸಣೆಗೆ ಖಾಸಗಿ ಆಸ್ಪತ್ರೆ ಮೊರೆ

697 ಆರೋಪಿ ಬಂಧನ; ₹2.65 ಕೋಟಿ ಮೌಲ್ಯದ ಮಾದಕ ವಸ್ತು ಜಪ್ತಿ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2025, 5:11 IST
Last Updated 25 ನವೆಂಬರ್ 2025, 5:11 IST
(ಸಾಂದರ್ಭಿಕ ಚಿತ್ರ)
(ಸಾಂದರ್ಭಿಕ ಚಿತ್ರ)   

ತುಮಕೂರು: ಗಾಂಜಾ ಸೇವಿಸಿ ಸಿಕ್ಕಿಬಿದ್ದವರ ವೈದ್ಯಕೀಯ ತಪಾಸಣೆಗೆ ಜಿಲ್ಲಾ ಆಸ್ಪತ್ರೆಯಲ್ಲಿ ಸೌಲಭ್ಯ ಇಲ್ಲವಾಗಿದ್ದು, ಪೊಲೀಸರು ಖಾಸಗಿ ಆಸ್ಪತ್ರೆ ಮೊರೆ ಹೋಗಬೇಕಾಗಿದೆ. ಆರೋಪಿಗಳನ್ನು ಪತ್ತೆ ಮಾಡುವುದರ ಜತೆಗೆ ಪರೀಕ್ಷೆ ಮಾಡಿಸಲು ತಮ್ಮ ಜೇಬಿನಿಂದ ಹಣ ಖರ್ಚು ಮಾಡಬೇಕಾಗಿದೆ!

ಗಾಂಜಾ ಸೇವನೆಯ ಅನುಮಾನದ ಮೇಲೆ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಾರೆ. ನಂತರ ಗಾಂಜಾ ಸೇವನೆ ಮಾಡಿದ್ದಾರೆಯೇ? ಇಲ್ಲವೇ? ಎಂದು ಖಚಿತಪಡಿಸಿಕೊಳ್ಳಲು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಬೇಕಾಗಿದೆ. ಜಿಲ್ಲಾ ಆಸ್ಪತ್ರೆಯಲ್ಲಿ ಅಂತಹ ಸೌಲಭ್ಯ ಇಲ್ಲವಾಗಿದ್ದು, ತಪಾಸಣೆಗಾಗಿ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ ಒಬ್ಬರಿಗೆ ₹250 ಶುಲ್ಕ ನಿಗದಿಪಡಿಸಲಾಗಿದೆ. ಆಯಾ ಪೊಲೀಸ್ ಠಾಣೆ ವ್ಯಾಪ್ತಿಯ ಇನ್‌ಸ್ಪೆಕ್ಟರ್‌ಗಳೇ ಇದಕ್ಕೆ ಹಣ ಪಾವತಿಸಬೇಕಾಗಿದೆ.

ಕಳೆದ ಐದು ವರ್ಷದಲ್ಲಿ ಪರೀಕ್ಷೆಗೆ ಒಳಗಾದವರಲ್ಲಿ 697 ಮಂದಿ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ. ಇದಕ್ಕಾಗಿ ₹1,74,250 ಹಣ ಆಸ್ಪತ್ರೆಗೆ ಕಟ್ಟಲಾಗಿದೆ. ಗಾಂಜಾ ಸೇವನೆ ಮಾಡಿಲ್ಲ ಎಂದು ವಶಕ್ಕೆ ಪಡೆದವರನ್ನು ಬಿಟ್ಟು ಕಳುಹಿಸಿದ ಉದಾಹರಣೆಗಳೂ ಸಾಕಷ್ಟಿವೆ. ಪ್ರತಿ ಪರೀಕ್ಷೆಗೆ ಹಣ ಪಾವತಿ ಕಡ್ಡಾಯ. ಗಾಂಜಾ ಸೇವನೆ ಖಚಿತಪಟ್ಟರೆ ಪ್ರಕರಣ ದಾಖಲಿಸಲಾಗುತ್ತದೆ. ಮುಂದಿನ ಪ್ರಕ್ರಿಯೆಗಳು ನಡೆಯುತ್ತವೆ. ತಪಾಸಣೆಯಲ್ಲಿ ‘ನೆಗೆಟಿವ್‌’ ವರದಿ ಬಂದರೆ ಹಣ, ಸಮಯ ಎರಡೂ ವ್ಯರ್ಥ.

ADVERTISEMENT

ಜಿಲ್ಲಾ ಆಸ್ಪತ್ರೆಯಲ್ಲಿ ಬೃಹತ್‌ ಕಟ್ಟಡಗಳು ತಲೆಎತ್ತುತ್ತಿವೆ. ಗಾಂಜಾ ಸೇವನೆ ಪರೀಕ್ಷೆಗೆ ಅಗತ್ಯವಾಗಿ ಬೇಕಾದ ಸೌಲಭ್ಯ ಕಲ್ಪಿಸಿಲ್ಲ. ಪೊಲೀಸರು ಅನಿವಾರ್ಯವಾಗಿ ಖಾಸಗಿ ಆಸ್ಪತ್ರೆಗಳನ್ನು ಅವಲಂಬಿಸಿದ್ದಾರೆ. ವರದಿ ಸಿಗುವುದು ಸಹ ಎರಡು–ಮೂರು ದಿನ ವಿಳಂಬವಾಗುತ್ತದೆ. ಸರ್ಕಾರಿ ಆಸ್ಪತ್ರೆಯಲ್ಲಿಯೇ ಇದಕ್ಕೆ ಅವಕಾಶ ಕಲ್ಪಿಸಿದರೆ ಪೊಲೀಸರ ಅಲೆದಾಟ ತಪ್ಪುತ್ತದೆ. ಕೆಲಸವೂ ವೇಗ ಪಡೆಯುತ್ತದೆ.

‘ಜಿಲ್ಲೆಯವರೇ ಆದ ಜಿ.ಪರಮೇಶ್ವರ ಗೃಹ ಸಚಿವರಾಗಿದ್ದಾರೆ. ಹಲವು ವರ್ಷಗಳಿಂದ ಪೊಲೀಸ್‌ ಇಲಾಖೆ ಅವರ ಉಸ್ತುವಾರಿಯಲ್ಲಿ ಕೆಲಸ ಮಾಡುತ್ತಿದೆ. ಪೊಲೀಸರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅಗತ್ಯ ಕ್ರಮ ವಹಿಸಿಲ್ಲ. ಕೆಲವೊಮ್ಮೆ ವೈದ್ಯಕೀಯ ವರದಿಗಾಗಿ ಬೆಂಗಳೂರಿನ ತನಕ ಹೋಗಿ ಬರಬೇಕಾದ ಪರಿಸ್ಥಿತಿಯೂ ನಿರ್ಮಾಣವಾಗುತ್ತದೆ. ನಗರದಲ್ಲಿಯೇ ಕನಿಷ್ಠ ಸೌಲಭ್ಯ ಕಲ್ಪಿಸಿದರೆ ಉತ್ತಮ’ ಎಂದು ಕೆಲವು ಪೊಲೀಸ್‌ ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

488 ಕೆ.ಜಿ ಗಾಂಜಾ ಜಪ್ತಿ: 2021ರಿಂದ 2025ರ ಮೇ ಅಂತ್ಯದ ವರೆಗೆ ₹2.65 ಕೋಟಿ ಮೌಲ್ಯದ ಮಾದಕ ವಸ್ತು ಜಪ್ತಿ ಮಾಡಲಾಗಿದೆ. 488 ಕೆ.ಜಿ ಗಾಂಜಾ, 319 ಗ್ರಾಂ ಓಪಿಎಂ, 100.5 ಗ್ರಾಂ ಎಂಡಿಎಂಎ, 1,720 ಟೆಪೆಂಟಡಾಲ್‌ ಅಸ್ಫಡಾಲ್‌ ಮಾತ್ರೆಗಳು ಪತ್ತೆಯಾಗಿವೆ.

ಗಾಂಜಾ ಸೇವನೆ ಹೆಚ್ಚಳ: ಸಿಗದ ಜಾಡು

20 ವರ್ಷದ ಬಿ.ಕಾಂ ವಿದ್ಯಾರ್ಥಿ ಖಾಸಗಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ. ಗಾಂಜಾ ವ್ಯಸನಿಯಾಗಿದ್ದ ಆತನನ್ನು 2025ರ ಮೇ 10ರಂದು ಪೊಲೀಸರು ವಶಕ್ಕೆ ಪಡೆದರು. ನಗರ ಹೊರವಲಯದ ಶಿರಾ ರಸ್ತೆಯ ವೈದ್ಯಕೀಯ ಕಾಲೇಜು ಬಳಿ ಗಾಂಜಾ ತುಂಬಿದ್ದ ಚೀಲದ ಜತೆಗೆ ನಿಂತಿದ್ದ ಇಬ್ಬರನ್ನು ಇದೇ ಮೇ ತಿಂಗಳಲ್ಲಿ ಸೈಬರ್‌ ಠಾಣೆ ಪೊಲೀಸರು ಬಂಧಿಸಿದರು. ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದು ವಿಚಾರಣೆ ಸಮಯದಲ್ಲಿ ಬೆಳಕಿಗೆ ಬಂದಿತ್ತು. ಇವೆರಡು ಉದಾಹರಣೆಯಷ್ಟೇ.. ಇಂತಹ ಹತ್ತಾರು ಪ್ರಕರಣಗಳು ವಿವಿಧ ಠಾಣೆಗಳಲ್ಲಿ ದಾಖಲಾಗುತ್ತಿವೆ. ಗಾಂಜಾ ಪ್ರಕರಣಗಳ ಸಂಖ್ಯೆಯೂ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿವೆ. 2023ರಲ್ಲಿ 81 ಪ್ರಕರಣಗಳು ವರದಿಯಾದರೆ 2024ಕ್ಕೆ 111 2025ಕ್ಕೆ 130ಕ್ಕೆ ಏರಿಕೆಯಾಗಿದೆ. ಹೆಚ್ಚಾಗಿ ಶಾಲಾ–ಕಾಲೇಜಿನ ವಿದ್ಯಾರ್ಥಿಗಳು ಮಾದಕ ವ್ಯಸನಕ್ಕೆ ದಾಸರಾಗುತ್ತಿದ್ದಾರೆ. ಹೊರ ಜಿಲ್ಲೆ ರಾಜ್ಯದಿಂದ ಬಂದವರು ಜಾಲಕ್ಕೆ ಸಿಲುಕುತ್ತಿದ್ದಾರೆ. ಗಾಂಜಾ ಸೇವನೆ ಮಾಡುವವರನ್ನು ಪತ್ತೆ ಹಚ್ಚಿ ಬಂಧಿಸುವ ಕೆಲಸವಾಗುತ್ತಿದೆ. ಆದರೆ ಗಾಂಜಾ ಸರಬರಾಜು ಮಾಡುವವರ ಸುಳಿವು ಸಿಗುತ್ತಿಲ್ಲ. ಅಂತಹವರ ಜಾಡು ಹಿಡಿಯುವುದು ಪೊಲೀಸರಿಗೆ ಸವಾಲಾಗಿದೆ. ಗಾಂಜಾ ಮಾರಾಟಗಾರರ ಜಾಲ ಭೇದಿಸುವುದು ಕಷ್ಟಕರವಾಗುತ್ತಿದೆ. ಕೆಲವು ಸಂದರ್ಭಗಳಲ್ಲಿ ಪೊಲೀಸರೂ ಶಾಮೀಲಾಗುವುದರಿಂದ ಜಾಲ ಭೇದಿಸುವುದು ಕಷ್ಟಕರ ಎಂಬ ಆರೋಪ ಸಾಮಾನ್ಯವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.