ADVERTISEMENT

‘ಮಾದಿಗ’ ನಮೂದಿಸಲು ಮನವಿ

​ಪ್ರಜಾವಾಣಿ ವಾರ್ತೆ
Published 7 ಮೇ 2025, 6:43 IST
Last Updated 7 ಮೇ 2025, 6:43 IST

ತುಮಕೂರು: ಪರಿಶಿಷ್ಟ ಜಾತಿ ಒಳ ಮೀಸಲಾತಿಗಾಗಿ ದತ್ತಾಂಶ ಸಂಗ್ರಹಿಸುವ ವೇಳೆ ಮಾದಿಗ ಸಮುದಾಯದವರು ಜಾತಿ ಕಾಲಂನಲ್ಲಿ ‘ಮಾದಿಗ’ ಎಂದು ನಮೂದಿಸುವಂತೆ ಕೋಡಿಹಳ್ಳಿ ಆದಿಜಾಂಬವ ಮಠದ ಷಡಕ್ಷರ ಮುನಿ ಸ್ವಾಮೀಜಿ ಇಲ್ಲಿ ಮಂಗಳವಾರ ಮನವಿ ಮಾಡಿದರು.

ಮಾದಿಗ ಸಮುದಾಯದವರು ಜಾತಿ, ಉಪಜಾತಿ ಕಲಂನಲ್ಲಿ ‘ಎಕೆ, ಎಡಿ, ಎಎ’ ಎಂದು ಬರೆಸಬಾರದು. ‘ಮಾದಿಗ‘ ಎಂದೇ ನಮೂದಿಸಬೇಕು ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ 101 ಜಾತಿಗಳ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯ, ಔದ್ಯೋಗಿಕ ಬೆಳವಣಿಗೆಗೆ ದತ್ತಾಂಶ ಸಂಗ್ರಹ ಮಹತ್ವದ್ದಾಗಿದೆ. ಈ ಬಗ್ಗೆ ವಿದ್ಯಾವಂತರು ಗ್ರಾಮೀಣ ಭಾಗದಲ್ಲಿ ಜಾಗೃತಿ ಮೂಡಿಸಬೇಕು ಎಂದರು.

ADVERTISEMENT

ಪಾಲನಹಳ್ಳಿ ಮಠದ ಸಿದ್ಧರಾಜ ಸ್ವಾಮೀಜಿ, ‘ಮಾದಿಗ ಸಮುದಾಯದ 35 ವರ್ಷಗಳ ಹೋರಾಟ ಕೊನೆಯ ಹಂತದಲ್ಲಿದೆ. ಪ್ರತಿಯೊಬ್ಬರು ಮೈಯೆಲ್ಲಾ ಕಣ್ಣಾಗಿ ಜಾತಿ, ಉಪ ಜಾತಿ ಕಾಲಂನಲ್ಲಿ ಮಾದಿಗ ಎಂದು ನಮೂದಿಸುವ ಮೂಲಕ ಮಾದಿಗರ ಪಾಲು ಪಡೆದುಕೊಳ್ಳಲು ಮುಂದಾಗಬೇಕು’ ಎಂದು ಹೇಳಿದರು.

ಜಿ.ಪಂ ಮಾಜಿ ಸದಸ್ಯ ಕೆಂಚಮಾರಯ್ಯ, ‘ಬೇರೆ ರಾಜ್ಯಗಳಲ್ಲಿ ಅಸ್ಪೃಶ್ಯ ಜಾತಿಗಳು ಮಾತ್ರ ಪರಿಶಿಷ್ಟ ಜಾತಿ ಪಟ್ಟಿಯಲ್ಲಿವೆ. ನಮ್ಮಲ್ಲಿ ಅಸ್ಪೃಶ್ಯರದಲ್ಲವರೂ ಇದ್ದಾರೆ. ಹಾಗಾಗಿ ಗೊಂದಲ ನಿವಾರಣೆ, ಅನ್ಯಾಯ ಸರಿಪಡಿಸಿಕೊಳ್ಳಲು ಇದು ಸಕಾಲ’ ಎಂದು ತಿಳಿಸಿದರು.

ಮುಖಂಡರಾದ ವೈ.ಕೆ.ಬಾಲಕೃಷ್ಣಪ್ಪ, ನರಸೀಯಪ್ಪ, ನರಸಿಂಹಯ್ಯ, ಬೆಳಗುಂಬ ವೆಂಕಟೇಶ್, ಕೋಡಿಯಾಲ ಮಹದೇವ್, ಬಂಡೆಕುಮಾರ್, ಹೆತ್ತೇನಹಳ್ಳಿ ಮಂಜು, ನಾಗರಾಜು ಗೂಳರಿವೆ, ಡಿ.ಗಣೇಶ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.