ADVERTISEMENT

ತುಮಕೂರು: ವಸತಿ ಶಾಲೆ ಫಲಿತಾಂಶ ಕುಸಿತ

ಎರಡು ವರ್ಷದಲ್ಲಿ ಶೇ 9ರಷ್ಟು ಫಲಿತಾಂಶ ಕಡಿಮೆ; ಹಲವೆಡೆ ಕಾಯಂ ಶಿಕ್ಷಕರ ಕೊರತೆ

​ಪ್ರಜಾವಾಣಿ ವಾರ್ತೆ
Published 12 ಮೇ 2025, 7:48 IST
Last Updated 12 ಮೇ 2025, 7:48 IST
ತುಮಕೂರಿನ ಮೆಳೆಕೋಟೆಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆ
ತುಮಕೂರಿನ ಮೆಳೆಕೋಟೆಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆ    

ತುಮಕೂರು: ಜಿಲ್ಲೆಯಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆ (ಕ್ರೈಸ್‌) ಅಧೀನದಲ್ಲಿ ನಡೆಯುತ್ತಿರುವ ವಸತಿ ಶಾಲೆಗಳ ಎಸ್‌ಎಸ್‌ಎಲ್‌ಸಿ ಫಲಿತಾಂಶ ವರ್ಷದಿಂದ ವರ್ಷಕ್ಕೆ ಕುಸಿತ ಕಾಣುತ್ತಿದೆ. ಈ ವರ್ಷ ಮತ್ತಷ್ಟು ಕಡಿಮೆಯಾಗಿದೆ.

ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ 33, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಡಿ 10, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ 9 ಸೇರಿ ಒಟ್ಟು 52 ವಸತಿ ಶಾಲೆಗಳಿವೆ. 2022–23ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 99.13ರಷ್ಟು ಸಾಧನೆ ಮಾಡಿದರೆ, 2024–25ನೇ ಸಾಲಿನಲ್ಲಿ ಶೇ 90ಕ್ಕೆ ಕುಸಿದಿದೆ. ಎರಡು ವರ್ಷದ ಅಂತರದಲ್ಲಿ ಶೇ 9 ರಷ್ಟು ಫಲಿತಾಂಶ ಕಡಿಮೆಯಾಗಿದೆ. ಪರೀಕ್ಷೆ ಬರೆಯುವ ಮಕ್ಕಳ ಸಂಖ್ಯೆಯೂ ಇಳಿಮುಖವಾಗಿದೆ.

2024–25ರಲ್ಲಿ 2,211 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 1,990 ಮಂದಿ ಉತ್ತೀರ್ಣರಾಗಿದ್ದಾರೆ. 221 ಜನ ನಪಾಸಾಗಿದ್ದಾರೆ. ಕಳೆದ ಮೂರು ವರ್ಷದಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳು ಈ ಬಾರಿ ಫೇಲ್‌ ಆಗಿದ್ದಾರೆ. ಇದೇ ಮೊದಲ ಬಾರಿಗೆ ಅನುತ್ತೀರ್ಣರಾದವರ ಸಂಖ್ಯೆ 200ರ ಗಡಿ ದಾಟಿದೆ.

ADVERTISEMENT

ಕಳಪೆ ಫಲಿತಾಂಶದ ಮಧ್ಯೆಯೂ ಜಿಲ್ಲೆಯಲ್ಲಿ 9 ವಸತಿ ಶಾಲೆಗಳು ಶೇ 100 ರಷ್ಟು ಫಲಿತಾಂಶ ಪಡೆದಿವೆ. ಮೇ ತಿಂಗಳ ಪ್ರಾರಂಭದಲ್ಲಿ ಪ್ರಕಟವಾದ ಫಲಿತಾಂಶದಲ್ಲಿ ತುರುವೇಕೆರೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿ ಪಿ.ಸಿ.ಹರ್ಷಿತ 623 ಅಂಕ ಗಳಿಸಿ ರಾಜ್ಯದ ಗಮನ ಸೆಳೆದಿದ್ದಾರೆ. ಖಾಸಗಿ ಶಾಲೆಗಳ ಮಕ್ಕಳು, ಪೋಷಕರು ವಸತಿ ಶಾಲೆಗಳ ಕಡೆ ಕಣ್ಣರಳಿಸಿ ನೋಡುವಂತೆ ಮಾಡಿದ್ದಾರೆ.

ಕಳೆದ ಹಲವು ವರ್ಷಗಳಿಂದ ವಸತಿ ಶಾಲೆಗಳ ಫಲಿತಾಂಶ ಶೇ 90ರ ಮೇಲಿದೆ. ಇದಕ್ಕಿಂತ ಕಡಿಮೆ ಫಲಿತಾಂಶ ಇತ್ತೀಚೆಗಿನ ವರ್ಷಗಳಲ್ಲಿ ದಾಖಲಾಗಿಲ್ಲ. ಶಾಲೆಗೆ ದಾಖಲಾದ ವಿದ್ಯಾರ್ಥಿಗಳು ದಿನದ 24X7 ಕಲಿಕೆಯಲ್ಲಿ ತೊಡಗಿಸಿಕೊಂಡಿರುತ್ತಾರೆ. ಓದು, ಕಲಿಕೆ, ವಾಸ ಎಲ್ಲ ಒಂದೇ ಕಡೆ ಆಗುವುದರಿಂದ ಸದಾ ಅಭ್ಯಾಸದಲ್ಲಿ ನಿರತರಾಗಿರುತ್ತಾರೆ. ಎಲ್ಲ ಸೌಲಭ್ಯಗಳ ಮಧ್ಯೆಯೂ ಕೆಲವು ವಿದ್ಯಾರ್ಥಿಗಳು ಕನಿಷ್ಠ ಉತ್ತೀರ್ಣರಾಗಲು ಬೇಕಾದ ಅಂಕಗಳನ್ನು ಪಡೆಯಲು ವಿಫಲರಾಗುತ್ತಿದ್ದಾರೆ.

ಕಾಯಂ ಶಿಕ್ಷಕರಿಲ್ಲ: ವಿದ್ಯಾರ್ಥಿಗಳು ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಲಿ ಎಂಬ ಉದ್ದೇಶದಿಂದ ವಸತಿ ಶಾಲೆಗಳಲ್ಲಿ ತುಂಬಾ ಬೇಗ ಪಠ್ಯಕ್ರಮ ಪೂರ್ಣಗೊಳಿಸಲಾಗುತ್ತದೆ. ಆದರೆ, ಜಿಲ್ಲೆಯ ವಿವಿಧ ವಸತಿ ಶಾಲೆಗಳಲ್ಲಿ ಕಾಯಂ ಶಿಕ್ಷಕರ ನೇಮಕವಾಗಿಲ್ಲ. ಇದು ಫಲಿತಾಂಶ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ. ಹಲವು ಕಡೆಗಳಲ್ಲಿ ಅತಿಥಿ ಶಿಕ್ಷಕರನ್ನೇ ನೆಚ್ಚಿಕೊಳ್ಳಲಾಗಿದೆ. ಕಾಯಂ ಶಿಕ್ಷಕರು ಇಲ್ಲದ ಕಡೆಗಳಲ್ಲಿ ಫಲಿತಾಂಶ ಕಡಿಮೆಯಾಗಿದೆ.

‘ಕಳೆದ ವರ್ಷ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚುವರಿ ಅಂಕ ನೀಡಿದ್ದರು. ಈ ಬಾರಿ ಇದನ್ನು ನಿಲ್ಲಿಸಲಾಗಿದೆ. ಇದರಿಂದ ಫಲಿತಾಂಶದಲ್ಲಿ ಕೊಂಚ ವ್ಯತ್ಯಾಸ ಆಗಿರಬಹುದು. ಉಳಿದಂತೆ ಎಲ್ಲ ವಸತಿ ಶಾಲೆಗಳು ಉತ್ತಮ ಫಲಿತಾಂಶ ಪಡೆದಿವೆ’ ಎಂದು ವಸತಿ ಶಾಲೆ ಶಿಕ್ಷಕರೊಬ್ಬರು ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.