ADVERTISEMENT

ಫಲಿತಾಂಶ ಕುಸಿತ: ಶೈಕ್ಷಣಿಕ ಜಿಲ್ಲೆ ಖ್ಯಾತಿಗೆ ಧಕ್ಕೆ

ಎಸ್ಸೆಸ್ಸೆಲ್ಸಿ: ಶಿಕ್ಷಣ ಇಲಾಖೆಯೇ ಹೆಚ್ಚಿನ ನಿಗಾವಹಿಸಲಿಲ್ಲವೇ? ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ಸಿಗಲಿಲ್ಲವೇ?

​ಪ್ರಜಾವಾಣಿ ವಾರ್ತೆ
Published 2 ಮೇ 2019, 16:12 IST
Last Updated 2 ಮೇ 2019, 16:12 IST

ತುಮಕೂರು: ರಾಜ್ಯದಲ್ಲಿಯೇ ಶಿಕ್ಷಣಕ್ಕೆ ಹೆಸರಾದ ತುಮಕೂರು ಜಿಲ್ಲೆಯು ಈ ಬಾರಿಯ ಎಸ್ಸೆಸ್ಸೆಲ್ಸಿಯಲ್ಲಿ ಕಳಪೆ ಸಾಧನೆ ಮಾಡಿದೆ. ಶೈಕ್ಷಣಿಕ ಜಿಲ್ಲೆ ಎಂಬ ಅದರ ಖ್ಯಾತಿಗೆ ಧಕ್ಕೆ ಉಂಟಾಗಿದೆ.

ಹತ್ತು ತಾಲ್ಲೂಕಿನ ಈ ಜಿಲ್ಲೆಯಲ್ಲಿ ಎರಡು ಶೈಕ್ಷಣಿಕ (ತುಮಕೂರು ಮತ್ತು ಮಧುಗಿರಿ) ಜಿಲ್ಲೆಗಳಿವೆ. ಪೈಪೋಟಿಗೆ ಬಿದ್ದಂತೆ ಫಲಿತಾಂಶದಲ್ಲಿ ಮುಂದಿರುತ್ತಿದ್ದ ಈ ಶೈಕ್ಷಣಿಕ ಜಿಲ್ಲೆಗಳು ಈ ಬಾರಿ ಮುಗ್ಗರಿಸಿವೆ.

ಪ್ರತಿ ವರ್ಷದಂತೆಯೇ ಏಕೆ. ಅದಕ್ಕಿಂತ ಸ್ವಲ್ಪ ಹೆಚ್ಚಿನ ಶ್ರಮ ವಹಿಸಿಯೇ ಫಲಿತಾಂಶ ಏರಿಕೆಗೆ ಪ್ರಯತ್ನಿಸಿದ್ದೆವು. ಆದರೆ, ನಿರೀಕ್ಷೆಯಂತೆ ಫಲಿತಾಂಶ ಲಭಿಸಿಲ್ಲ. ಎಲ್ಲಿ ಲೋಪವಾಯಿತು ಎಂಬುದು ಗೊತ್ತಾಗುತ್ತಿಲ್ಲ ಎಂದು ಶಿಕ್ಷಕರು, ಶಿಕ್ಷಣ ಇಲಾಖೆ ಅಧಿಕಾರಿಗಳು ಆತ್ಮಾವಲೋಕನದ ಮಾತು ಹೇಳುತ್ತಿದ್ದಾರೆ.

ADVERTISEMENT

ಅಭ್ಯಾಸ ಕ್ರಮ, ಪರೀಕ್ಷೆಗೆ ಹೇಗೆ ಸಿದ್ಧತೆ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ಸಿಗಲಿಲ್ಲವೇ? ಮಕ್ಕಳ ಕಲಿಕಾ ಸಾಮರ್ಥ್ಯ ವೃದ್ಧಿಸುವಲ್ಲಿ ಲೋಪವಾಗಿದೆಯೇ, ಶಿಕ್ಷಣ ಇಲಾಖೆಯೇ ಹೆಚ್ಚಿನ ನಿಗಾವಹಿಸಲಿಲ್ಲವೇ, ಶಿಕ್ಷಕರು, ಅಧಿಕಾರಿಗಳ ಅತೀ ಆತ್ಮವಿಶ್ವಾಸವೇ ಕಳಪೆ ಸಾಧನೆಗೆ ಕಾರಣವಾಯಿತೇ ಎಂಬುದು ಗೊತ್ತಿಲ್ಲ. ಫಲಿತಾಂಶ ಕುಸಿತಕ್ಕೆ ಒಟ್ಟಿನಲ್ಲಿ ನಾವೆಲ್ಲರೂ ಹೊಣೆಗಾರರೇ ಎಂದು ಶಿಕ್ಷಣ ಇಲಾಖೆ ಅಧಿಕಾರಿಯೊಬ್ಬರು ಹೇಳುತ್ತಾರೆ.

ಶೈಕ್ಷಣಿಕ ಜಿಲ್ಲೆಯಲ್ಲೇ ಸುಮಾರು ಐದೂವರೆ ಸಾವಿರದಷ್ಟು ವಿದ್ಯಾರ್ಥಿಗಳು ಉತ್ತೀರ್ಣವೇ ಆಗಿಲ್ಲ ಎಂದರೆ ಏನರ್ಥ? ಶಿಕ್ಷಣ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಪೋಷಕರು ಒತ್ತಾಯಿಸುತ್ತಾರೆ.

ವರ್ಷದಿಂದ ವರ್ಷಕ್ಕೆ ಏರುಮುಖದಲ್ಲಿ ಫಲಿತಾಂಶ ಇರಬೇಕು. ಆದರೆ, ಇದು ಕೆಳಮುಖವಾಗುತ್ತಿದೆ. ಇದೇ ಸ್ಥಿತಿ ಮುಂದುವರಿದರೆ ಭವಿಷ್ಯದಲ್ಲಿ ಶಿಕ್ಷಣ ಕೇಂದ್ರ, ಶೈಕ್ಷಣಿಕ ಜಿಲ್ಲೆ ಖ್ಯಾತಿಯನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡುತ್ತಾರೆ.

ಜಿಲ್ಲೆಯಲ್ಲಿ ಪರೀಕ್ಷೆ ಬರೆದಿದ್ದ 21,126 ವಿದ್ಯಾರ್ಥಿಗಳ ಪೈಕಿ 16,947 ವಿದ್ಯಾರ್ಥಿಗಳು ಮಾತ್ರ ತೇರ್ಗಡೆಯಾಗಿದ್ದು, ಉಳಿದವರ ಭವಿಷ್ಯ ಏನು? ಆ ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬಿ ಮತ್ತೆ ಪರೀಕ್ಷೆಗೆ ಸಜ್ಜುಗೊಳಿಸಿ ಇತರ ಮಕ್ಕಳಂತೆಯೇ ಕಾಲೇಜು ಮೆಟ್ಟಿಲು ಹತ್ತುವಂತೆ ಮಾಡುವ ಜವಾಬ್ದಾರಿ ಇಲಾಖೆ, ಶಿಕ್ಷಣ ಸಂಸ್ಥೆ, ಪೋಷಕರ ಮೇಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.