ADVERTISEMENT

ಪಾವಗಡ | ರೈಲ್ವೆ ಮಾರ್ಗಕ್ಕಾಗಿ ರಸ್ತೆ ಬಂದ್‌

ಕೆ.ರಾಂಪುರ: ಬೊಮ್ಮಲಗುಡ್ಡ ರಸ್ತೆ ಮುಚ್ಚಿರುವ ಅಧಿಕಾರಿಗಳು– ರೈತರ ಆರೋಪ

​ಪ್ರಜಾವಾಣಿ ವಾರ್ತೆ
Published 21 ಜೂನ್ 2025, 5:26 IST
Last Updated 21 ಜೂನ್ 2025, 5:26 IST
ಪಾವಗಡ ತಾಲ್ಲೂಕು ಕೆ ರಾಂಪುರ ಬಳಿ ಬೊಮ್ಮಲಗುಡ್ಡಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಮುಚ್ಚಿರುವುದು
ಪಾವಗಡ ತಾಲ್ಲೂಕು ಕೆ ರಾಂಪುರ ಬಳಿ ಬೊಮ್ಮಲಗುಡ್ಡಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಮುಚ್ಚಿರುವುದು   

ಪಾವಗಡ: ತಾಲ್ಲೂಕಿನ ಕೆ.ರಾಂಪುರ ಬಳಿ ರೈಲ್ವೆ ಮಾರ್ಗ ಅಳವಡಿಸುವ ಸಲುವಾಗಿ ಬೊಮ್ಮಲಗುಡ್ಡಕ್ಕೆ ಹೋಗುವ ರಸ್ತೆ ಮುಚ್ಚಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಕೆ. ರಾಂಪುರ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ರೈತರ ಜಮೀನುಗಳು ಬೊಮ್ಮಲಗುಡ್ಡಕ್ಕೆ ಹೊಂದಿಕೊಂಡಿವೆ. ಜಮೀನುಗಳಿಗೆ ಟ್ರ್ಯಾಕ್ಟರ್‌, ಎತ್ತಿನಬಂಡಿ, ಇತ್ಯಾದಿ ವಾಹನಗಳನ್ನು ಕೃಷಿ ಚಟುವಟಿಕೆಗಳಿಗಾಗಿ ಕೊಂಡೊಯ್ಯಲು, ಕೃಷಿ ಉತ್ಪನ್ನಗಳನ್ನು ಸಾಗಿಸಲು ಇದ್ದ ರಸ್ತೆ ಮುಚ್ಚಲಾಗಿದೆ. ಇದರಿಂದ ದೊಡ್ಡಹಳ್ಳಿಗೆ ಹೋಗಿ ಮತ್ತೆ ರೈಲ್ವೆ ನಿಲ್ದಾಣದ ಬಳಿ ಬಂದು ಜಮೀನುಗಳಿಗೆ ಹೋಗಬೇಕು. ಇದರಿಂದ 2ರಿಂದ 3 ಕಿ.ಮೀ. ಹೆಚ್ಚಾಗಿ ಕ್ರಮಿಸಬೇಕಿದೆ ಎಂದು ರೈತರು ಆರೋಪಿಸಿದ್ದಾರೆ.

ಬೊಮ್ಮಲಗುಡ್ಡದಿಂದ ಹರಿದು ಬರುವ ಮಳೆ ನೀರು ಸಮರ್ಪಕವಾಗಿ ಬೇರೆಡೆ ಹರಿಯುವ ವ್ಯವಸ್ಥೆ ಮಾಡದ ಕಾರಣ, ಜಮೀನುಗಳಿಗೆ ನುಗ್ಗಿ ಬೆಳೆಗಳು ಹಾಳಾಗುತ್ತಿವೆ. ರೈತರಿಗೆ ಇದರಿಂದ ಸಾಕಷ್ಟು ನಷ್ಟವಾಗುತ್ತಿದೆ ಎಂದು ದೂರಿದರು.

ADVERTISEMENT

ಗ್ರಾಮಗಳ ಜನತೆ ಹಳ್ಳಿಕಾರ್ ತಳಿಯ ಜಾನುವಾರುಗಳನ್ನು ಸಾಕಿದ್ದಾರೆ. ಇವುಗಳನ್ನು ಬೊಮ್ಮಲಗುಡ್ಡಕ್ಕೆ ಮೇಯಲು ನಿತ್ಯ ರೈಲ್ವೆ ನಿಲ್ದಾಣದ ಮೂಲಕವೇ ಕರೆದೊಯ್ಯಬೇಕು. ಜಾನುವಾರುಗಳು ಬೆದರಿ ನಿಲ್ದಾಣದಲ್ಲಿರುವ ಜನರ ಮೇಲೆರಗುವ ಸಾಧ್ಯತೆಗಳಿವೆ ಎಂದು ಆರೋಪಿಸಿದ್ದಾರೆ.

ಈ ಹಿಂದೆ ಇದ್ದ ರಸ್ತೆಯನ್ನು ಉಳಿಸಿಕೊಂಡು ಮೇಲ್ಸೇತುವೆ ನಿರ್ಮಿಸಿ ಈ ಭಾಗದ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಹಲವು ಬಾರಿ ರೈಲ್ವೆ ಇಲಾಖೆ ಎಂಜಿನಿಯರ್‌ಗಳಿಗೆ ಮನವಿ ಮಾಡಲಾಗಿದೆ. ಸಾಕಷ್ಟು ಬಾರಿ ಧರಣಿ, ಪ್ರತಿಭಟನೆ ನಡೆಸಲಾಗಿದೆ. ಆದರೆ ರೈತರ ಮನವಿಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಮೇಲ್ಸೇತುವೆ ನಿರ್ಮಿಸದಿದ್ದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ರೈಲ್ವೆ ನಿಲ್ದಾಣದ ಬಳಿ ಪ್ರತಿಭಟನೆ ನಡೆಸಲಾಗುವುದು. ಕಾನೂನು ಹೋರಾಟ ಆರಂಭಿಸಲಾಗುವುದು ಎಂದು ಗ್ರಾಮಸ್ಥರಾದ ವಕೀಲ ಪಿ. ರಾಮಾಂಜಿನಪ್ಪ, ಮಂಜುನಾಥ್, ಶಿವಲಿಂಗಪ್ಪ, ರಮೇಶ್, ಆರ್ ನಾಗರಾಜು, ಸಣ್ಣಾಯಪ್ಪ ಹಾಗೂ ಸ್ಥಳೀಯರು ಎಚ್ಚರಿಸಿದ್ದಾರೆ.

ಪಾವಗಡ ತಾಲ್ಲೂಕು ಕೆ ರಾಂಪುರ ಬಳಿ ಬೊಮ್ಮಲಗುಡ್ಡಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಮುಚ್ಚಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.