ADVERTISEMENT

ಸುರೇಶ್‌ಗೌಡ ವಿರುದ್ಧ ಗುಡುಗಿದ ಗ್ರಾಮಾಂತರ ಶಾಸಕ ಗೌರಿಶಂಕರ್

‘ಏತ ನೀರಾವರಿಯಿಂದ ಕೆರೆ ತುಂಬುವುದೆ?’

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2020, 1:47 IST
Last Updated 13 ನವೆಂಬರ್ 2020, 1:47 IST
ತುಮಕೂರು ತಾಲ್ಲೂಕು ಸಿರಿವರ ಗ್ರಾ.ಪಂ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಡಿ.ಸಿ.ಗೌರಿಶಂಕರ್ ಚಾಲನೆ ನೀಡಿದರು
ತುಮಕೂರು ತಾಲ್ಲೂಕು ಸಿರಿವರ ಗ್ರಾ.ಪಂ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಡಿ.ಸಿ.ಗೌರಿಶಂಕರ್ ಚಾಲನೆ ನೀಡಿದರು   

ತುಮಕೂರು: ದೇಶದಲ್ಲಿ ವಿಫಲವಾಗಿರುವ ಏತ ನೀರಾವರಿ ಯೋಜನೆ ಜಾರಿಗೆ ತಂದವರು ಈಗ ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಕೆರೆಗಳಿಗೆ ನೀರು ತುಂಬಿಸಿಲ್ಲ ಎಂದು ಆರೋಪಿಸುತ್ತಿದ್ದಾರೆ ಎಂದು ಶಾಸಕ ಡಿ.ಸಿ.ಗೌರಿಶಂಕರ್ ಅವರು ಮಾಜಿ ಶಾಸಕ ಸುರೇಶ್‌ಗೌಡ ವಿರುದ್ಧ ಗುಡುಗಿದರು.

ಗ್ರಾಮಾಂತರ ಕ್ಷೇತ್ರದ ಸಿರಿವರ ಗ್ರಾಮ ಪಂಚಾಯತಿಯಲ್ಲಿ 11 ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಿಸಿದ್ದು, ಬುಧವಾರ ಸಂಚಾರಕ್ಕೆ ಚಾಲನೆ ನೀಡಿ ಮಾತನಾಡಿದರು.

ಬೇರೆಡೆ ವಿಫಲವಾದ ಏತ ನೀರಾವರಿ ಯೋಜನೆಯನ್ನು ಕ್ಷೇತ್ರಕ್ಕೆ ತರಲಾಗಿದೆ. ಗೂಳೂರು ಏತ ನೀರಾವರಿ ಯೋಜನೆಯಲ್ಲಿ 300 ಎಂಸಿಎಫ್‌ಟಿ ನೀರು ಹಂಚಿಕೆ ಮಾಡಲಾಗಿದೆ. ಅತ್ಯಲ್ಪ ಪ್ರಮಾಣದಲ್ಲಿ ಹಂಚಿಕೆಯಾಗಿರುವ ನೀರನ್ನು 42 ಕೆರೆಗಳಿಗೆ ತುಂಬಿಸಲು ಸಾಧ್ಯವೆ. ಈ ಬಗ್ಗೆ ಮಾಹಿತಿ ಇಲ್ಲದೆ ಮಾತನಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ಅಕ್ಕಪಕ್ಕದ ತಾಲ್ಲೂಕುಗಳಲ್ಲಿ ಗುರುತ್ವಾಕರ್ಷಣೆ ಮೂಲಕ ನೀರು ಹರಿಸಿದ್ದರೆ, ಇಲ್ಲಿ ಏತ ನೀರಾವರಿ ಜಾರಿಗೆ ತರಲಾಗಿದೆ. ಗುರುತ್ವಾಕರ್ಷಣೆ ಮೂಲಕ ನೀರು ಹರಿದಿದ್ದರೆ, ಗ್ರಾಮಾಂತರ ಕ್ಷೇತ್ರದ ಎಲ್ಲಾ ಕೆರೆಗಳು ತುಂಬುತ್ತಿದ್ದವು ಎಂದರು.

‘ಕಳೆದ ಮೂವತ್ತು ವರ್ಷಗಳಿಂದ ನೀರು ಕಾಣದ ಗಳಗಕೆರೆಯನ್ನು ತುಂಬಿಸಿದ್ದೇನೆ. ಇದರಿಂದಾಗಿ ಈ ಭಾಗದಲ್ಲಿ ಅಂತರ್ಜಲದ ಮಟ್ಟ ಹೆಚ್ಚಾಗಲಿದೆ. ಕೆಂಬಾಳಲು ಕರೆ ತುಂಬಿಸಲಾಗಿದೆ’ ಎಂದು ಹೇಳಿದರು.

‘ಗ್ರಾಮಾಂತರ ಕ್ಷೇತ್ರ ಅಭಿವೃದ್ಧಿಯಾಗಿದೆ ಎಂದು ಬೊಗಳೆ ಬಿಡುತ್ತಿದ್ದರು. ಆದರೆ ಕೋಡಿಮುದ್ದನಹಳ್ಳಿಗೆ ರಸ್ತೆಯೇ ಇರಲಿಲ್ಲ. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ₹500 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗುತ್ತಿದೆ’ ಎಂದು ತಿಳಿಸಿದರು.

ಕೋಡಿಮುದ್ದನಹಳ್ಳಿಯಲ್ಲಿ 20 ಎಕರೆಯಲ್ಲಿ 220 ಕೆ.ವಿ ವಿದ್ಯುತ್ ಕೇಂದ್ರದ ನಿರ್ಮಾಣಕ್ಕೆ ಭೂಮಿ ಹಸ್ತಾಂತರಿಸಲಾಗಿದೆ ಎಂದರು. ಸಿರಿವರ ಭಾಗದ 2 ಸಾವಿರ ಮಹಿಳೆಯರಿಗೆ ದೀಪಾವಳಿ ಅಂಗವಾಗಿ ಸೀರೆ ವಿತರಿಸಲಾಯಿತು.

ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಹಾಲನೂರು ಅನಂತಕುಮಾರ್, ತಾ.ಪಂ ಸದಸ್ಯ ರಂಗಸ್ವಾಮಯ್ಯ, ನಗರಪಾಲಿಕೆ ಸದಸ್ಯ ವೆಂಕಟೇಶ್‌ಗೌಡ, ಮುಖಂಡರಾದ ಬೆಳಗುಂಬ ವೆಂಕಟೇಶ್, ಸುರೇಶ್, ತಿಮ್ಮಪ್ಪಗೌಡ, ಲಾಟರಿ ನಾರಾಯಣಪ್ಪ, ನರುಗನಹಳ್ಳಿ ವಿಜಯಕುಮಾರ್, ನರಸಪ್ಪ, ಪ್ರಕಾಶ್, ಮಹದೇವ್, ಅಬ್ಬಾಸ್, ಬೋರೇಗೌಡ, ಗಂಗಣ್ಣ, ಕೆ.ಬಿ.ರಾಜಣ್ಣ, ಲೋಕೇಶ್, ಶಂಕರಣ್ಣ, ಮುನಿರತ್ನ, ಜಯರಾಮ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.