ADVERTISEMENT

ರೋಹಿಣಿ ಮಳೆ: ರೈತರಿಗೆ ಹರ್ಷ

ಹುಳಿಯಾರಿನಲ್ಲಿ ಅತ್ಯಧಿಕ 100.2 ಮಿ.ಮೀ ಮಳೆ ದಾಖಲು

​ಪ್ರಜಾವಾಣಿ ವಾರ್ತೆ
Published 4 ಜೂನ್ 2021, 2:38 IST
Last Updated 4 ಜೂನ್ 2021, 2:38 IST
ಹುಳಿಯಾರು ಹೋಬಳಿ ತಮ್ಮಡಿಹಳ್ಳಿ ಭಾಗದ ತೋಟಗಳಲ್ಲಿ ನಿಂತ ಮಳೆ ನೀರು
ಹುಳಿಯಾರು ಹೋಬಳಿ ತಮ್ಮಡಿಹಳ್ಳಿ ಭಾಗದ ತೋಟಗಳಲ್ಲಿ ನಿಂತ ಮಳೆ ನೀರು   

ಹುಳಿಯಾರು: ಪಟ್ಟಣ ಸೇರಿದಂತೆ ಚಿಕ್ಕನಾಯಕನಹಳ್ಳಿ ತಾಲ್ಲೂಕು ವ್ಯಾಪ್ತಿಯಲ್ಲಿ ಬುಧವಾರ ತಡರಾತ್ರಿ ಆರಂಭವಾಗಿ ಗುರುವಾರ ಮುಂಜಾನೆವರೆಗೂ ಉತ್ತಮ ಮಳೆಯಾಗಿದೆ. ಕೆಲ ಕೆರೆಗಳಿಗೆ ನೀರು ಬಂದರೆ ಉಳಿದಂತೆ ತೋಟಗಳಲ್ಲಿ ನೀರು ನಿಂತಿದೆ.

ಪೂರ್ವ ಮುಂಗಾರು ಆರಂಭವಾದಾಗಿನಿಂದ ಇದೇ ಮೊದಲ ಬಾರಿಗೆ ಚಿಕ್ಕನಾಯಕನಹಳ್ಳಿ ತಾಲ್ಲೂಕು ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಿದೆ. ತಾಲ್ಲೂಕು ವ್ಯಾಪ್ತಿಯ ಮಳೆ ಮಾಪನ ಕೇಂದ್ರಗಳಾದ ಹುಳಿಯಾರು 100.2 ಮಿ.ಮೀ, ಮತಿಘಟ್ಟ 52.2 ಮಿ.ಮೀ., ಬೋರನಕಣಿವೆ 50.4 ಮಿ.ಮೀ, ಶೆಟ್ಟಿಕೆರೆ 42.3 ಮಿ.ಮೀ, ಸಿಂಗದಹಳ್ಳಿ 25.4 ಮಿ.ಮೀ, ಚಿಕ್ಕನಾಯಕನಹಳ್ಳಿ 19.8 ಮಿ, ಮೀ, ದೊಡ್ಡಎಣ್ಣೇಗೆರೆ 16.2 ಮಿ.ಮೀ ಮಳೆ ದಾಖಲಾಗಿದೆ.

ಹುಳಿಯಾರು ಬಳಿಅತಿ ಹೆಚ್ಚು ಮಳೆ ಪ್ರಮಾಣ ದಾಖಲಾಗಿದ್ದು ತೋಟಗಳಲ್ಲಿ ನೀರು ನಿಂತಿದೆ. ಇನ್ನೂ ನಂದಿಹಳ್ಳಿ, ತಮ್ಮಡಿಹಳ್ಳಿ ಭಾಗದಲ್ಲಿ ಉತ್ತಮ ಮಳೆಯಾಗಿದೆ. ಸಿಂಗದಹಳ್ಳಿ ಕೆರೆಗೆ ನೀರು ಬಂದಿದ್ದು ತಾಲ್ಲೂಕಿನಾದ್ಯಂತ ಮಳೆಯಾಗಿದೆ. ಅಶ್ವಿನಿ, ಭರಣಿ, ಕೃತಿಕಾ ಮಳೆಗಳು ಬರೀ ಸೋನೆಗೆ ಸೀಮಿತವಾಗಿದ್ದವು. ಆದರೆ ರೋಹಿಣಿ ಮಳೆ ಈ ಬಾರಿ ಕೃಪೆ ತೋರಿದ್ದು ಹೆಸರು ಬೆಳೆ ಉತ್ತಮ ಫಸಲು ಬರಲು ಸಹಕಾರಿಯಾಗಿದೆ.

ADVERTISEMENT

ಪಟ್ಟಣದಲ್ಲಿ ಅವ್ಯವಸ್ಥೆ: ಮಳೆಯಿಂದಾಗಿ ಹುಳಿಯಾರು ಪಟ್ಟಣದಲ್ಲಿ ಅವ್ಯವಸ್ಥೆಯಾಗಿತ್ತು. ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅರ್ಧಕ್ಕೆ ನಿಂತಿರುವುದರಿಂದ ರಾಮಗೋಪಾಲ್‌ ವೃತ್ತದಲ್ಲಿ ನೀರು ನಿಂತು ಜನರ ಸಂಚಾರಕ್ಕೆ ಪರದಾಡಿದರು. ಪಟ್ಟಣದ ವಿವಿಧ ಬಡಾವಣೆಗಳಿಂದ ಹರಿದು ಬಂದ ನೀರು ಆಂಜನೇಯಸ್ವಾಮಿ ದೇಗುಲದ ಮುಂಭಾಗ ಸರಾಗವಾಗಿ ಹರಿದು ಹೋಗಲು ಚರಂಡಿಯಿಲ್ಲದೆ ಕೆಲ ಮನೆಗಳಿಗೆ ನೀರು ನುಗ್ಗಿತ್ತು. ಉಳಿದಂತೆ ಕೆಲಕಡೆ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಜನರಿಗೆ ಸಮಸ್ಯೆ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.