ತುಮಕೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಶತಮಾನೋತ್ಸವದ ಪ್ರಯುಕ್ತ ನಗರದಲ್ಲಿ ಶನಿವಾರ ಸಂಘ ಶತಾಬ್ದಿ ಪಥ ಸಂಚಲನ ನಡೆಯಿತು.
ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಸಾವಿರಾರು ಮಂದಿ ಗಣ ವೇಷಧಾರಿಗಳು ಸೇರಿದ್ದರು. ಕರಿ ಟೋಪಿ, ಖಾಕಿ ಪ್ಯಾಂಟ್, ಬಿಳಿ ಅಂಗಿ ತೊಟ್ಟು, ಕೈಯಲ್ಲಿ ದೊಣ್ಣೆ ಹಿಡಿದು ಹೆಜ್ಜೆ ಹಾಕಿದರು.
ಆರ್‌ಎಸ್‌ಎಸ್ ಜಿಲ್ಲಾ ಪ್ರಮುಖ್ ನಾಗೇಂದ್ರಪ್ರಸಾದ್ ನೇತೃತ್ವದಲ್ಲಿ ಎರಡು ತಂಡಗಳು ಪ್ರತ್ಯೇಕವಾಗಿ ಪಥ ಸಂಚಲನ ನಡೆಸಿದವು. ಒಂದು ತಂಡ ಕಾಲೇಜು ಮೈದಾನದಿಂದ ಹೊರಟು ಭದ್ರಮ್ಮ ವೃತ್ತ, ಬಿದುರುಮಳೆ ತೋಟದ ರಸ್ತೆ, ಕರಿಬಸವೇಶ್ವರ ಮಠ, ಹೊರಪೇಟೆ ರಸ್ತೆ, ಹೊರಪೇಟೆ ವೃತ್ತದಿಂದ ಗುಂಚಿ ವೃತ್ತ ತಲುಪಿತು. ಮತ್ತೊಂದು ತಂಡ ಕಾಲೇಜು ಮೈದಾನದಿಂದ ಸಾಗಿ ಬಿ.ಎಚ್.ರಸ್ತೆ, ಟೌನ್‌ಹಾಲ್, ಸ್ವಾತಂತ್ರ್ಯ ಚೌಕದಿಂದ ಗುಂಚಿ ವೃತ್ತ ಸೇರಿತು.
ಪುಷ್ಪಾರ್ಚನೆ: ಗುಂಚಿ ವೃತ್ತದ ಬಳಿ ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ, ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ವಿರೇಶಾನಂದ ಸರಸ್ವತಿ, ಹಿರೇಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಬೆಳ್ಳಾವಿ ಕಾರದ ಮಠದ ಕಾರದ ವೀರ ಬಸವ ಸ್ವಾಮೀಜಿ ಪಥ ಸಂಚಲನಕ್ಕೆ ಪುಷ್ಪಾರ್ಚನೆ ನೆರವೇರಿಸಿದರು.
ನಂತರ ಎರಡೂ ತಂಡಗಳು ಒಟ್ಟಾಗಿ ಎಂ.ಜಿ.ರಸ್ತೆಯಲ್ಲಿ ಸಾಗಿದವು. ಎಂ.ಜಿ.ರಸ್ತೆಯುದ್ದಕ್ಕೂ ಪಥ ಸಂಚಲನದಲ್ಲಿ ಭಾಗವಹಿಸಿದ್ದ ಸ್ವಯಂ ಸೇವಕರ ಮೇಲೆ ಪುಷ್ಪ ವೃಷ್ಟಿ ಸುರಿಸಲಾಯಿತು.
ಶಾಸಕರಾದ ಬಿ.ಸುರೇಶ್‌ಗೌಡ, ಜಿ.ಬಿ.ಜ್ಯೋತಿಗಣೇಶ್, ಮಾಜಿ ಸಚಿವ ಸೊಗಡು ಶಿವಣ್ಣ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಸ್.ರವಿಶಂಕರ್, ಮುಖಂಡರಾದ ಎಂ.ಬಿ.ನಂದೀಶ್, ಎಚ್.ಎನ್.ಚಂದ್ರಶೇಖರ್, ಹಿಂದುತ್ವ ಪರ ಸಂಘಟನೆ ಮುಖಂಡರು, ಆರ್‌ಎಸ್‌ಎಸ್ ಕಾರ್ಯಕರ್ತರು ಪಥ ಸಂಚಲನದಲ್ಲಿ ಹೆಜ್ಜೆ ಹಾಕಿದರು.
ನಗರ ಕೇಸರಿಮಯ ಪಥ ಸಂಚಲನದ ಪ್ರಯುಕ್ತ ವಿವಿಧ ಹೂವುಗಳಿಂದ ಅಲಂಕರಿಸಿದ ವಾಹನದಲ್ಲಿ ಭಾರತ ಮಾತೆಯ ಭಾವಚಿತ್ರದ ಮೆರವಣಿಗೆ ನಡೆಯಿತು. ಪುಟಾಣಿಗಳು ರಾಣಿ ಅಬ್ಬಕ್ಕ ಒನಕೆ ಓಬವ್ವ ಭಾರತ ಮಾತೆ ಹಾಗೂ ಸೈನಿಕರ ವೇಷ ತೊಟ್ಟು ಗಮನ ಸೆಳೆದರು. ಜೂನಿಯರ್ ಕಾಲೇಜು ಮೈದಾನ ಎಂ.ಜಿ.ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳು ಕೇಸರಿಮಯವಾಗಿದ್ದವು. ಕೇಸರಿ ಬಾವುಟಗಳು ರಾರಾಜಿಸಿದವು. ಎಂ.ಜಿ.ರಸ್ತೆಯಲ್ಲಿ ಬೃಹತ್ ಪ್ರವೇಶ ದ್ವಾರ ನಿರ್ಮಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.