ADVERTISEMENT

ಚಿಕ್ಕನಾಯಕನಹಳ್ಳಿ ಪೌರ ಕಾರ್ಮಿಕರಿಗೆ ಪಿಎಫ್ ನೀಡದ ಅಧಿಕಾರಿಗಳ ವಜಾಗೆ ಶಿಫಾರಸು

ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ.ಶಿವಣ್ಣ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 15 ಜೂನ್ 2022, 11:28 IST
Last Updated 15 ಜೂನ್ 2022, 11:28 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ತುಮಕೂರು: ಚಿಕ್ಕನಾಯಕನಹಳ್ಳಿ ಪೌರ ಕಾರ್ಮಿಕರಿಗೆ 2011ರಿಂದ 2018ರ ವರೆಗಿನ ಭವಿಷ್ಯನಿಧಿ (ಪಿ.ಎಫ್‌) ಹಣವನ್ನು ಪಾವತಿಸದ ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ.ಶಿವಣ್ಣ ಇಲ್ಲಿ ಬುಧವಾರ ತಿಳಿಸಿದರು.

ಚಿಕ್ಕನಾಯಕನಹಳ್ಳಿ, ಕುಣಿಗಲ್, ಪಾವಗಡ, ಕೊರಟಗೆರೆಯಲ್ಲಿ ಪೌರ ಕಾರ್ಮಿಕರಿಗೆ ಪಿ.ಎಫ್ ಹಣ ಪಾವತಿ ಮಾಡಿಲ್ಲ. ಚಿಕ್ಕನಾಯಕನಹಳ್ಳಿಯಲ್ಲಿ ಸುಮಾರು ₹60 ಲಕ್ಷ ಪಿ.ಎಫ್‌ ಹಣ ಜಮಾ ಮಾಡಬೇಕಿತ್ತು. ಹಣ ದುರುಪಯೋಗ ಪಡಿಸಿಕೊಂಡ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕೈಗೊಳ್ಳಲಾಗುವುದು ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಮ್ಯಾನ್ಯುವಲ್‌ ಸ್ಕ್ಯಾವೆಂಜರ್ ಕಾಯ್ದೆಯ ಕುರಿತು ಅರಿವು ಮೂಡಿಸಲಾಗುತ್ತಿದೆ. ರಾಜ್ಯದಲ್ಲಿ 5,080 ಮಂದಿ ಮ್ಯಾನ್ಯುವಲ್‌ ಸ್ಕ್ಯಾವೆಂಜರ್‌ಗಳು ಇದ್ದಾರೆ. ಆಯೋಗದ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡ ನಂತರ 9 ಮಂದಿ ಸ್ಕ್ಯಾವೆಂಜರ್‌ಗಳು ಮೃತಪಟ್ಟಿದ್ದಾರೆ. ಕಾಯ್ದೆಯ ಅನ್ವಯ ಇಂತಹ ಕೆಲಸ ಮಾಡಿಸುವವರಿಗೂ ಶಿಕ್ಷೆಯಾಗಲಿದೆ’ ಎಂದರು.

ADVERTISEMENT

ಮ್ಯಾನ್ಯುವೆಲ್‌ ಸ್ಕ್ಯಾವೆಂಜರ್‌ ವೃತ್ತಿ ಮಾಡುವವರಿಗೆ ಪುನರ್ವಸತಿ ಕಲ್ಪಿಸುವ ಕುರಿತು ಈಗಾಗಲೇ ಸಭೆ ನಡೆಸಲಾಗಿದೆ. ಪುನರ್ವಸತಿ, ಉದ್ಯೋಗ, ಕೌಶಲಾಧಾರಿತ ತರಬೇತಿ ನೀಡುವ ಮೂಲಕ ಅವರಿಗೆ ಬೇರೆ ವೃತ್ತಿಯಲ್ಲಿ ಬದುಕು ಕಟ್ಟಿಕೊಳ್ಳಲು ನೆರವು ನೀಡಲಾಗುವುದು ಎಂದರು.

ಅಸಮಾಧಾನ: ಜಿಲ್ಲೆಯಲ್ಲಿ ಪೌರ ಕಾರ್ಮಿಕರ ಅಭಿವೃದ್ಧಿಗೆ ಕೈಗೊಂಡ ಕ್ರಮಗಳು ಸಮಾಧಾನಕರವಾಗಿಲ್ಲ. ಈ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ ಕ್ರಮ ವಹಿಸಲಾಗುವುದು, ಸೂಚಿಸಲಾಗುವುದು ಎಂದಷ್ಟೇ ಹೇಳುತ್ತಿದ್ದಾರೆ. ಏನು ಕ್ರಮಕೈಗೊಂಡಿದ್ದಾರೆ ಎಂಬ ಮಾಹಿತಿಯೂ‌ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪೌರ ಕಾರ್ಮಿಕರಿಗೆ ಈವರೆಗೂ ಅಗತ್ಯ ಪರಿಕರಗಳನ್ನು ವಿತರಿಸುವ ಕೆಲಸವಾಗುತ್ತಿಲ್ಲ. ಮಾಸ್ಕ್‌, ಗ್ಲೌಸ್‌ ಸೇರಿದಂತೆ ಯಾವುದೇ ಪರಿಕರವಿಲ್ಲದೆ ಸ್ವಚ್ಛತೆಯ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಕಾರ್ಮಿಕರಿಗೆ ಗುಣಮಟ್ಟದ ತಿಂಡಿ ಸಿಗುತ್ತಿಲ್ಲ. ಅಧಿಕಾರಿಗಳು ಸೂಚನೆಯನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪೌರ ಕಾರ್ಮಿಕರಿಗೆ ಸಕಾಲಕ್ಕೆ ವೇತನ ಪಾವತಿಯಾಗದೆ ತೊಂದರೆ ಅನುಭವಿಸುತ್ತಿರುವುದು ಗಮನಕ್ಕೆ ಬಂದಿದ್ದು, ಇದನ್ನು ಬಗೆಹರಿಸುವಂತೆ ಜಿ.ಪಂ ಸಿಇಒಗೆ ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.