ತುಮಕೂರು: ನಗರದ ಸಿದ್ಧಗಂಗಾ ಮಠದ ಬಳಿ ಕೆಲ ತಿಂಗಳ ಹಿಂದೆ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಯಿತು. ತೀವ್ರ ರಕ್ತಸ್ರಾವದಿಂದ ಬಳಲಿದ ಬಾಲಕಿಗೆ ಜಿಲ್ಲಾ ಆಸ್ಪತ್ರೆಯ ‘ಸಖಿ’ ಕೇಂದ್ರದಲ್ಲಿ ಚಿಕಿತ್ಸೆ ನೀಡಿ, ಆಪ್ತ ಸಮಾಲೋಚನೆ ನಡೆಸಿದರು. ಬಾಲಕಿ ಬೇಗ ಚೇತರಿಸಿಕೊಳ್ಳಲು ಇದು ನೆರವಾಯಿತು.
ಹೀಗೆ... ಪೋಕ್ಸೊ, ಅತ್ಯಾಚಾರ, ಕೌಟುಂಬಿಕ ದೌರ್ಜನ್ಯ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಮಾನಸಿಕ ಮತ್ತು ದೈಹಿಕವಾಗಿ ನೊಂದ ನೂರಾರು ಮಹಿಳೆಯರಿಗೆ ‘ಸಖಿ’ ಒನ್ ಸ್ಟಾಪ್ ಕೇಂದ್ರ ನೆರವಿನ ತಾಣವಾಗುತ್ತಿದೆ. ತಾತ್ಕಾಲಿಕವಾಗಿ ಆಶ್ರಯ ಕಲ್ಪಿಸುವ ಮೂಲಕ ಸಹಾಯದ ಹಸ್ತ ಚಾಚುತ್ತಿದೆ.
ಜಿಲ್ಲೆಯಲ್ಲಿ ಮಹಿಳೆಯರು, ಬಾಲಕಿಯರ ಮೇಲಿನ ದೌರ್ಜನ್ಯ ಪ್ರಕರಣಗಳು ಏರಿಕೆಯತ್ತ ಸಾಗುತ್ತಿವೆ. ಪೋಕ್ಸೊ, ಅತ್ಯಾಚಾರ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ. ಇಂತಹ ಪ್ರಕರಣಗಳ ಸಂತ್ರಸ್ತರ ‘ಆರೈಕೆ’ಗೆ ಸಖಿ ಕೇಂದ್ರದ ಸಿಬ್ಬಂದಿ ಹಗಲಿರುಳು ದುಡಿಯುತ್ತಿದ್ದಾರೆ. 2019ರಲ್ಲಿ ಸಖಿ ಕೇಂದ್ರ ಶುರುವಾಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇದರ ನಿರ್ವಹಣೆ ನೋಡಿಕೊಳ್ಳುತ್ತಿದೆ. ಕಳೆದ ಮೂರು ವರ್ಷದಲ್ಲಿ 849 ಜನ ಮಹಿಳೆಯರು ಕೇಂದ್ರದ ಪ್ರಯೋಜನ ಪಡೆದಿದ್ದಾರೆ.
ಒಂದೇ ಸೂರಿನಡಿ ಆಪ್ತ ಸಮಾಲೋಚನೆ, ವೈದ್ಯಕೀಯ, ಪೊಲೀಸ್ ಮತ್ತು ಕಾನೂನು ನೆರವು ನೀಡಿ ತಾತ್ಕಾಲಿಕ ವಸತಿಗೆ ವ್ಯವಸ್ಥೆ ಮಾಡಲಾಗುತ್ತದೆ. ಕೌಟುಂಬಿಕ ದೌರ್ಜನ್ಯ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿವೆ. ಆಪ್ತ ಸಮಾಲೋಚನೆ ಮುಖಾಂತರವೇ ಸಮಸ್ಯೆ ಬಗೆಹರಿಸುವ ಪ್ರಯತ್ನವನ್ನು ಈ ಕೇಂದ್ರದ ಮೂಲಕ ಮಾಡಲಾಗುತ್ತಿದೆ.
‘ಪತಿ–ಪತ್ನಿ ಇಬ್ಬರೂ ಅತಿಯಾಗಿ ಮೊಬೈಲ್ ಬಳಸುವುದು, ಅನೈತಿಕ ಸಂಬಂಧದಿಂದ ದೌರ್ಜನ್ಯ ಪ್ರಕರಣಗಳು ಜಾಸ್ತಿಯಾಗುತ್ತಿವೆ. ಗಂಡ ಹಲ್ಲೆ ಮಾಡಿದ್ದಾರೆ, ಸುಖಾ ಸುಮ್ಮನೆ ಜಗಳ ಮಾಡುತ್ತಿದ್ದಾರೆ’ ಎಂದು ಹೆಂಡತಿ ದೂರು ನೀಡುತ್ತಾರೆ. ಮಹಿಳೆಗೆ ಸಖಿ ಕೇಂದ್ರದಲ್ಲಿ ಅಗತ್ಯ ಚಿಕಿತ್ಸೆ ನೀಡಲಾಗುತ್ತದೆ. ನಂತರ ಆಕೆಯ ಗಂಡನನ್ನು ಕರೆದು ವಿಚಾರಣೆ ನಡೆಸಿದಾಗ ಅಸಲಿ ಸತ್ಯ ಬಹಿರಂಗವಾಗುತ್ತದೆ. ಆಗ ಇಬ್ಬರಿಗೂ ತಿಳಿ ಹೇಳುವ ಮೂಲಕ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತೇವೆ ಎಂದು ಸಖಿ ಕೇಂದ್ರದ ಸಿಬ್ಬಂದಿಯೊಬ್ಬರು ತಮ್ಮ ಅನುಭವ ಹಂಚಿಕೊಂಡರು.
ಇತ್ತೀಚಿನ ಅಂಕಿ ಅಂಗಳನ್ನು ಗಮನಿಸಿದರೆ ಪೋಕ್ಸೊ, ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿರುವುದನ್ನು ತೋರಿಸುತ್ತದೆ. 2022–23ರಲ್ಲಿ 45 ಬಾಲಕಿಯರು ಈ ಕೇಂದ್ರದಲ್ಲಿ ದಾಖಲಾಗಿದ್ದರು. 2023–24ರಲ್ಲಿ ಈ ಸಂಖ್ಯೆ 94ಕ್ಕೆ ಏರಿಕೆಯಾಗಿದೆ. ಬಾಲಕಿಯರು ಏನೂ ಅರಿಯದ ವಯಸ್ಸಿನಲ್ಲಿ ಪ್ರೀತಿ, ಪ್ರೇಮ ಎಂಬ ಮಾಯೆಗೆ ಬಿದ್ದು, ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಮನೆ ಬಿಟ್ಟು ಹೋಗುತ್ತಿದ್ದಾರೆ ಎಂದು ಸಖಿ ಕೇಂದ್ರದ ಸಿಬ್ಬಂದಿ ಹೇಳುತ್ತಾರೆ.
ಪೋಷಕರು ನಮ್ಮ ‘ಮಗಳು ಕಾಣೆಯಾಗಿದ್ದಾಳೆ’ ಎಂದು ಠಾಣೆಗೆ ದೂರು ನೀಡುತ್ತಾರೆ. ಪೊಲೀಸರು ಬಾಲಕಿಯನ್ನು ಪತ್ತೆ ಹಚ್ಚಿ ಸೀದಾ ಸಖಿ ಕೇಂದ್ರಕ್ಕೆ ಕರೆ ತರುತ್ತಿದ್ದಾರೆ. ಕೇಂದ್ರದಲ್ಲಿ ಆಕೆಗೆ ಚಿಕಿತ್ಸೆ ನೀಡಿ, ಆಪ್ತ ಸಮಾಲೋಚನೆ ನಡೆಸಿ ನಂತರ ವಾಪಸ್ ಕಳುಹಿಸಲಾಗುತ್ತದೆ.
ಮಹಿಳೆಯರು ತುರ್ತು ಸಂಕಷ್ಟದ ಸಮಯದಲ್ಲಿ ಸಹಾಯವಾಣಿ 181 ಕರೆ ಮಾಡಿದರೆ ಸಖಿ ಕೇಂದ್ರದ ಸಿಬ್ಬಂದಿ ಸ್ಪಂದಿಸಲಿದ್ದಾರೆ. ಕೌಟುಂಬಿಕ ದೌರ್ಜನ್ಯ ಅತ್ಯಾಚಾರ ಲೈಂಗಿಕ ಕಿರುಕುಳ ಆ್ಯಸಿಡ್ ದಾಳಿ ಮಹಿಳೆಯರ ಸಾಗಾಣಿಕೆ ಬಾಲ್ಯವಿವಾಹ ಅಪಹರಣ ಸೇರಿದಂತೆ ಇತರೆ ಪ್ರಕರಣಗಳ ಸಂತ್ರಸ್ತರು ‘ಸಖಿ’ ಒನ್‌ಸ್ಟಾಪ್ ಕೇಂದ್ರದ ನೆರವು ಪಡೆಯಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.