ADVERTISEMENT

3 ಹೊಸ ಮೊಬೈಲ್ ತಂತ್ರಾಂಶ ಪ್ರಾರಂಭ

ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದಿಂದ ಗ್ರಾಹಕರ ಸಂಪರ್ಕ ಸಭೆ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2019, 13:53 IST
Last Updated 13 ಸೆಪ್ಟೆಂಬರ್ 2019, 13:53 IST
ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರದ ಕಾರ್ಯದರ್ಶಿ ಸುನೀಲ್ ಕೆ. ಗುಪ್ತಾ ಅವರು ಗ್ರಾಹಕರ ಜೊತೆ ಸಂವಾದ ನಡೆಸಿದರು
ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರದ ಕಾರ್ಯದರ್ಶಿ ಸುನೀಲ್ ಕೆ. ಗುಪ್ತಾ ಅವರು ಗ್ರಾಹಕರ ಜೊತೆ ಸಂವಾದ ನಡೆಸಿದರು   

ತುಮಕೂರು: ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರವು ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುವ ಸಲುವಾಗಿ ‘ಮೈಕಾಲ್’, ‘ಮೈಸ್ಪೀಡ್’ ಹಾಗೂ ‘ಡಿಎನ್‌ಡಿ’ ಎಂಬ ಮೂರು ಹೊಸ ಮೊಬೈಲ್ ತಂತ್ರಾಂಶಗಳನ್ನು ಪ್ರಾರಂಭಿಸಿದೆ ಎಂದು ಪ್ರಾಧಿಕಾರದ ಕಾರ್ಯದರ್ಶಿ ಸುನೀಲ್ ಕೆ.ಗುಪ್ತಾ ತಿಳಿಸಿದರು.

ಪ್ರಾಧಿಕಾರವು ನಗರದ ಕನ್ನಡ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‌ಗ್ರಾಹಕರ ಸಂಪರ್ಕ ಸಭೆಯಲ್ಲಿ ಮಾತನಾಡಿದರು.

ಗ್ರಾಹಕರ ಹಿತಾಸಕ್ತಿಗಳನ್ನು ರಕ್ಷಿಸಲು ಹಲವು ಉತ್ತಮ ದೂರ ಸಂಪರ್ಕ ಸೇವೆಗಳನ್ನು ಪ್ರಾಧಿಕಾರ ಒದಗಿಸುತ್ತಿದೆ. ದೂರವಾಣಿ ಕರೆ ಗುಣಮಟ್ಟ ತಿಳಿಯಲು ‘ಮೈಕಾಲ್’, ಮೊಬೈಲ್ ನೆಟ್‌ವರ್ಕ್ (ಡೌನ್‌ಲೋಡಿಂಗ್ ಹಾಗೂ ಅಪ್‌ಲೋಡಿಂಗ್) ವೇಗವನ್ನು ತಿಳಿಯಲು ‘ಮೈ ಸ್ಪೀಡ್’ ಹಾಗೂ ಅನಪೇಕ್ಷಿತ ವಾಣಿಜ್ಯಾತ್ಮಕ ಸಂದೇಶ/ಕರೆಗಳನ್ನು ನಿಷ್ಕ್ರಿಯಗೊಳಿಸಲು ‘ಡಿಎನ್‌ಡಿ’ ತಂತ್ರಾಂಶಗಳೊಂದಿಗೆ ಹೊಸ ವೆಬ್ ಪೋರ್ಟಲ್ ಪರಿಚಯಿಸಿದೆ. ಹೊಸ ತಂತ್ರಾಂಶಗಳನ್ನು ಗೂಗಲ್ ಪ್ಲೇ–ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು ಎಂದು ಮಾಹಿತಿ ನೀಡಿದರು.

ADVERTISEMENT

ದೇಶದಲ್ಲಿ 116 ಕೋಟಿ ಗ್ರಾಹಕರು ಮೊಬೈಲ್ ಬಳಸುತ್ತಿದ್ದಾರೆ. ದಿನೇ ದಿನೇ ಬಳಕೆದಾರರ ಸಂಖ್ಯೆ ಹೆಚ್ಚುತ್ತಿದೆ. ಗ್ರಾಹಕರ ಅನುಕೂಲಕ್ಕಾಗಿ ಪ್ರಾಧಿಕಾರವು ದೂರಸಂಪರ್ಕ ಸೇವೆ ಒದಗಿಸುವ ಸಂಸ್ಥೆಗಳಿಗೆ ಕಟ್ಟು ನಿಟ್ಟಿನ ನಿಯಮಗಳನ್ನು ಜಾರಿ ಮಾಡಿದೆ ಎಂದರು.

‘ಆ ನಿಯಮಗಳ ಅನ್ವಯ ಪ್ರೀ ಪೇಯ್ಡ್ ಗ್ರಾಹಕರು ಕಳೆದ ಆರು ತಿಂಗಳ ಅವಧಿಯ ಕರೆ/ಎಸ್‌ಎಂಎಸ್‌ಗಳ ವಿವರಗಳನ್ನು ಪಡೆಯಬಹುದು. ಶುಲ್ಕ ಯೋಜನೆ ಗ್ರಾಹಕರಿಗೆ ಕನಿಷ್ಠ 6 ತಿಂಗಳವರೆಗೆ ಲಭ್ಯವಿರಬೇಕು. ಈ ಆರು ತಿಂಗಳ ಅವಧಿಯಲ್ಲಿ ಗ್ರಾಹಕರು ಬೇರೆ ಶುಲ್ಕ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಲು ಸ್ವತಂತ್ರರು’ ಎಂದು ಹೇಳಿದರು.

ಪ್ರಾಧಿಕಾರದ ಸಲಹೆಗಾರ ಶ್ರೀನಿವಾಸ ಎಸ್.ಗಲಗಲಿ, ಕೇಬಲ್ ಸೇವೆಗಳನ್ನು ನಿಯಂತ್ರಿಸುವ ಸಲುವಾಗಿ ಹೊಸ ನಿಯಂತ್ರಣ ವ್ಯವಸ್ಥೆ ಜಾರಿ ಮಾಡಲಾಗಿದೆ. ಗ್ರಾಹಕರು ತಾವು ವೀಕ್ಷಿಸುವ ಚಾನಲ್‌ಗಳಿಗೆ ಮಾತ್ರ ಶುಲ್ಕ ಪಾವತಿ ಮಾಡುವ ಸ್ವಾತಂತ್ರ್ಯ ಹೊಂದಿರುತ್ತಾರೆ ಎಂದು ಹೇಳಿದರು.

ಗ್ರಾಹಕರು ದೂರ ಸಂಪರ್ಕ ಹಾಗೂ ಕೇಬಲ್ ಸೇವೆಗಳಿಗೆ ಸಂಬಂಧಿಸಿದ ದೂರುಗಳು ಇದ್ದಲ್ಲಿ ದೂರು ಕೇಂದ್ರದಲ್ಲಿ ದೂರುಗಳನ್ನು ನೋಂದಾಯಿಸಬೇಕು. ದೂರು ನಿವಾರಣೆಯಲ್ಲಿ ಅತೃಪ್ತಿ ಇದ್ದಲ್ಲಿ ದೂರಿನ ನಿವಾರಣೆಗೆ ಮೇಲ್ಮನವಿ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಲು ಅವಕಾಶ ಇದೆ ಎಂದು ತಿಳಿಸಿದರು.

ಗ್ರಾಹಕರ ಜೊತೆಗಿನ ಸಂವಾದದಲ್ಲಿ ಗ್ರಾಹಕರು ದೂರ ಸಂಪರ್ಕಕ್ಕೆ ಸಂಬಂಧಿಸಿದ ಸೇವಾ ನ್ಯೂನ್ಯತೆಗಳ ಬಗ್ಗೆ ವಿವರಿಸಿದರು. ಪ್ರಾಧಿಕಾರದ ನೀತಿ ನಿಯಮಗಳ ಬಗ್ಗೆ ಮಾಹಿತಿ ಪಡೆದರು. ಕಾರ್ಯಕ್ರಮದಲ್ಲಿ ವಿವಿಧ ಸೇವಾ ಸಂಸ್ಥೆ, ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳು, ವಿದ್ಯಾರ್ಥಿಗಳು, ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.