
ತುಮಕೂರಿನಲ್ಲಿ ಮಂಗಳವಾರ ಆಯೋಜಿಸಿದ್ದ ಸರ್ವೋದಯ ದಿನಾಚರಣೆ ಕಾರ್ಯಕ್ರಮದಲ್ಲಿ ‘ಸತ್ಯಾನ್ವೇಷಣೆ ಒಂದು ಮಹಾಕೃತಿ’ ಹಾಗೂ ‘ಘಾತಕ ಲೋಕದಿಂದ ಗಾಂಧಿಯಾನದೆಡೆಗೆ’ ಕೃತಿ ಬಿಡುಗಡೆ ಮಾಡಲಾಯಿತು.
ತುಮಕೂರು: ಪ್ರಸ್ತುತ ಸಾಮಾಜಿಕ ಜಾಲ ತಾಣದಲ್ಲಿ ಗಾಂಧೀಜಿ ವಿರುದ್ಧ ನಿರಂತರವಾಗಿ ಅಪಪ್ರಚಾರ ಮಾಡಲಾಗುತ್ತಿದೆ. ಅವರ ವಿಚಾರಧಾರೆಗಳನ್ನು ಕೊಲ್ಲುವ ಪ್ರಯತ್ನ ನಡೆಯುತ್ತಿದೆ ಎಂದು ಬೆಂಗಳೂರಿನ ಗಾಂಧಿ ಭವನದ ಅಧ್ಯಕ್ಷ ವೂಡೇ ಪಿ.ಕೃಷ್ಣ ವಿಷಾದಿಸಿದರು.
ನಗರದಲ್ಲಿ ಮಂಗಳವಾರ ಬಾಪೂಜಿ ವಿದ್ಯಾಸಂಸ್ಥೆಯಿಂದ ಆಯೋಜಿಸಿದ್ದ ಸರ್ವೋದಯ ದಿನಾಚರಣೆ, ಮಹಾತ್ಮ ಗಾಂಧಿ ಆತ್ಮ ಕಥನ ‘ನನ್ನ ಸತ್ಯಾನ್ವೇಷಣೆ’ಯ ಶತಮಾನೋತ್ಸವ, ಎಂ.ಬಸವಯ್ಯ ರಚನೆಯ ‘ಸತ್ಯಾನ್ವೇಷಣೆ ಒಂದು ಮಹಾಕೃತಿ’, ಎಚ್.ಎಸ್.ಸುರೇಶ್ ಅವರ ‘ಘಾತಕ ಲೋಕದಿಂದ ಗಾಂಧಿಯಾನದೆಡೆಗೆ’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗಾಂಧೀಜಿ ಅವರನ್ನು ಇಡೀ ಪ್ರಪಂಚ ಸತ್ಯ ಮತ್ತು ಅಹಿಂಸೆಯ ಪ್ರತಿರೂಪವಾಗಿ ನೋಡುತ್ತಿದೆ. ದೇಶದ ಯುವ ಸಮೂಹ ಏಕಾಗ್ರತೆ ಕೊರತೆಯಿಂದ ಸತ್ಯ, ಸುಳ್ಳುಗಳ ವಿಮರ್ಶೆ ಮಾಡುತ್ತಿಲ್ಲ. ಯುವ ಜನರಿಗೆ ಎಂ.ಬಸವಯ್ಯ ಅವರ ಸತ್ಯಾನ್ವೇಷಣೆ ಕೃತಿ ಗಾಂಧೀಜಿಯ ಬದುಕಿನ ವಿವಿಧ ಮಜಲುಗಳನ್ನು ಪರಿಚಯಿಸಲಿದೆ ಎಂದರು.
ಕೆಪಿಸಿಸಿ ಉಪಾಧ್ಯಕ್ಷ ಮುರಳೀಧರ್ ಹಾಲಪ್ಪ, ‘ಸತ್ಯಾನ್ವೇಷಣೆ ಒಂದು ಮಹಾಕೃತಿ’, ‘ಘಾತಕ ಲೋಕದಿಂದ ಗಾಂಧಿಯಾನದೆಡೆಗೆ’ ಪುಸ್ತಕಗಳನ್ನು ಜಿಲ್ಲೆಯ ಪ್ರತಿ ಶಾಲಾ–ಕಾಲೇಜಿಗೆ ತಲುಪಿಸಲಾಗುವುದು. ಕಾರಾಗೃಹದ ಕೈದಿಗಳಿಗೂ ನೀಡಲಾಗುವುದು’ ಎಂದು ಹೇಳಿದರು.
ಗಾಂಧಿ ಸ್ಮಾರಕ ನಿಧಿಯ ನಿರ್ದೇಶಕ ಪ್ರೊ.ಜಿ.ಬಿ.ಶಿವರಾಜು, ಬಾಪೂಜಿ ವಿದ್ಯಾ ಸಂಸ್ಥೆ ಅಧ್ಯಕ್ಷ ಎಂ.ಬಸವಯ್ಯ, ಕಾರ್ಯದರ್ಶಿ ಭಾಗ್ಯಮ್ಮ ಬಸವಯ್ಯ, ಗಾಂಧಿ ಭವನದ ಕಾರ್ಯದರ್ಶಿ ನರೇಂದ್ರ, ಪರಿಸರವಾದಿ ಸಿ.ಯತಿರಾಜು, ಬಾಪೂಜಿ ವಿದ್ಯಾ ಸಂಸ್ಥೆಯ ಗೋವಿಂದಯ್ಯ, ಸುಮಂಗಲಾ ಜೇಮ್ಸ್, ಪ್ರೊ.ಸಿದ್ಧಿಬಾಬು, ಜಿ.ಚಿದಾನಂದಸ್ವಾಮಿ. ಜಿ.ಬಿಂದುಶ್ರೀ ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.