ADVERTISEMENT

ಇಂಗ್ಲಿಷ್ ಒಲವು; ಸೀಟು ಭರ್ತಿ

ಜಿಲ್ಲೆಯ 48 ಕಡೆಗಳಲ್ಲಿ ಒಂದನೇ ತರಗತಿಯಿಂದ ಆಂಗ್ಲ ಮಾಧ್ಯಮ; 18 ಕಡೆ ಎಲ್‌ಕೆಜಿ

ಡಿ.ಎಂ.ಕುರ್ಕೆ ಪ್ರಶಾಂತ
Published 20 ಜುಲೈ 2019, 19:45 IST
Last Updated 20 ಜುಲೈ 2019, 19:45 IST
   

ತುಮಕೂರು: ತುಮಕೂರು ಮತ್ತು ಮಧುಗಿರಿ ಶೈಕ್ಷಣಿಕ ಜಿಲ್ಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಆರಂಭವಾಗಿರುವ ಒಂದನೇ ತರಗತಿ ಮತ್ತು ಎಲ್‌ಕೆಜಿ (ಪೂರ್ವ ಪ್ರಾಥಮಿಕ) ಇಂಗ್ಲಿಷ್ ಮಾಧ್ಯಮಕ್ಕೆ ಭಾರಿ ಸ್ಪಂದನೆ ವ್ಯಕ್ತವಾಗಿದೆ.

ಪ್ರತಿ ತರಗತಿಗೂ ಗರಿಷ್ಠ 30 ಮಕ್ಕಳನ್ನು ದಾಖಲಿಸಿಕೊಳ್ಳಬಹುದು. ಆದರೆ ಈ ಯೋಜನೆಗೆ ಆಯ್ಕೆಯಾಗಿರುವ ಜಿಲ್ಲೆಯ ಬಹುತೇಕ ಶಾಲೆಗಳಲ್ಲಿ ಈ ಮಿತಿ ದಾಟಿವಷ್ಟು ವಿದ್ಯಾರ್ಥಿಗಳು ಅರ್ಜಿ ಬಂದಿದ್ದವು. ವಿಶೇಷ ಎಂದರೆ ಕೆಲವು ಕಡೆಗಳಲ್ಲಿ ಎಸ್‌ಡಿಎಂಸಿ ಮತ್ತು ಗ್ರಾಮಸ್ಥರು ಸಹಕಾರ ನೀಡಿದ ಕಾರಣ ನಿಗದಿತ ಮಿತಿ ದಾಟಿ ಮಕ್ಕಳನ್ನು ದಾಖಲಿಸಿಕೊಳ್ಳಲಾಗಿದೆ.

ತುಮಕೂರು ದಕ್ಷಿಣ ಶೈಕ್ಷಣಿಕ ಜಿಲ್ಲೆಯಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ 29 ಕನ್ನಡ ಮಾಧ್ಯಮ ಶಾಲೆಗಳಲ್ಲಿಯೇ ಸರ್ಕಾರವು 1ನೇ ತರಗತಿಯಿಂದ ಆಂಗ್ಲ ಮಾಧ್ಯಮ ಆರಂಭಿಸಿದೆ. 11 ಕಡೆಗಳಲ್ಲಿ ಎಲ್‌ಕೆಜಿಗೆ ಚಾಲನೆ ದೊರೆತಿದೆ. ಮಧುಗಿರಿ ಶೈಕ್ಷಣಿಕ ಜಿಲ್ಲೆಯ 19 ಶಾಲೆಗಳಲ್ಲಿ 1ನೇ ತರಗತಿಯಿಂದ ಆಂಗ್ಲ ಮಾಧ್ಯಮ ಮತ್ತು 7 ಕಡೆಗಳಲ್ಲಿ ಎಲ್‌ಕೆಜಿ ಆರಂಭವಾಗಿವೆ. ಕರ್ನಾಟಕ ಪಬ್ಲಿಕ್ ಶಾಲೆಯಾಗಿ ಆಯ್ಕೆ ಆಗಿರುವ ಕೆಲವು ಶಾಲೆಗಳಲ್ಲಿ ಒಂದನೇ ತರಗತಿ ಮತ್ತು ಎಲ್‌ಕೆಜಿ ಆಂಗ್ಲ ಮಾಧ್ಯಮ ಶಿಕ್ಷಣ ದೊರೆಯುತ್ತಿದೆ.

ADVERTISEMENT

ಚಿಕ್ಕನಾಯಕನಹಳ್ಳಿ ತಾಲ್ಲೂಕು ಹುಳಿಯಾರು–ಕೆಂಕೆರೆಯ ಕರ್ನಾಟಕ ಪಬ್ಲಿಕ್ ಶಾಲೆ, ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಬೆಳ್ಳಾವಿಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ... ಹೀಗೆ ಕೆಲವು ಕಡೆಗಳಲ್ಲಿ ಎಲ್‌ಕೆಜಿ ದಾಖಲಾತಿಗೆ ನೂರಾರು ‍ಅರ್ಜಿಗಳನ್ನು ಸಲ್ಲಿಸಿದ್ದರು. ಅಂತಿಮವಾಗಿ ಲಾಟರಿ ಮೂಲಕ ಆಯ್ಕೆ ಮಾಡಿ ವಿದ್ಯಾರ್ಥಿಗಳನ್ನು ದಾಖಲಿಸಲಾಯಿತು. ಬೆಳ್ಳಾವಿ ಶಾಲೆಗೆ ಮಕ್ಕಳನ್ನು ದಾಖಲಿಸಲೇಬೇಕು ಎಂದು ಪೋಷಕರು ಹಟ ಹಿಡಿದಿದ್ದರು. ಆ ಪರಿಣಾಮ 79 ಮಕ್ಕಳು ಎಲ್‌ಕೆಜಿಗೆ ದಾಖಲಾಗಿದ್ದಾರೆ.

ತುಮಕೂರು ಶೈಕ್ಷಣಿಕ ಜಿಲ್ಲೆಯ 29 ಶಾಲೆಗಳಲ್ಲಿ ಗರಿಷ್ಠ 879 ಮಂದಿಯನ್ನು ಒಂದನೇ ತರಗತಿಗೆ ದಾಖಲಿಸಿಕೊಳ್ಳಲು ಅವಕಾಶ ಇದೆ. ಈಗ 298 ಹೆಣ್ಣು ಮಕ್ಕಳು, 366 ಗಂಡು ಮಕ್ಕಳು ಸೇರಿದಂತೆ 664 ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳಲಾಗಿದೆ. ಎಲ್‌ಕೆಜಿಗೆ ಕರ್ನಾಟಕ ಪಬ್ಲಿಕ್ ಶಾಲೆಯ 11 ಶಾಲೆಗಳಿಗೆ 400 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಬೆಳ್ಳಾವಿಯಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಮಕ್ಕಳು ದಾಖಲಾಗಿದ್ದಾರೆ.

ಮಧುಗಿರಿ ಶೈಕ್ಷಣಿಕ ಜಿಲ್ಲೆಯಲ್ಲಿ 1ನೇ ತರಗತಿ ಆಂಗ್ಲ ಮಾಧ್ಯಮಕ್ಕೆ 479 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಇಲ್ಲಿ 570 ಮಕ್ಕಳ ದಾಖಲೆಗೆ ಅವಕಾಶ ಇದೆ. ಮಧುಗಿರಿ ತಾಲ್ಲೂಕಿನ ಮಿಡಿಗೇಶಿಯಲ್ಲಿ ಎಲ್‌ಕೆಜಿ ದಾಖಲಾತಿಗಾಗಿ ಹೆಚ್ಚು ಅರ್ಜಿಗಳು ಬಂದಿದ್ದವು. ಆದರೆ ಲಾಟರಿ ಆಯ್ಕೆಗೆ ಎಲ್ಲರೂ ಸಮ್ಮತಿಸಿದರು. ಈ ಶೈಕ್ಷಣಿಕ ಜಿಲ್ಲೆಯ 7 ಶಾಲೆಗಳಲ್ಲಿಯ ಎಲ್‌ಕೆಜಿಗೆ 30 ಮಂದಿ ದಾಖಲಾಗಿದ್ದಾರೆ.

ಆಂಗ್ಲ ಮಾಧ್ಯಮ ಶಿಕ್ಷಣ ಒದಗಿಸಲು ಆಯ್ಕೆಯಾದ ಪ್ರತಿ ಶಾಲೆಯ ಒಬ್ಬ ಶಿಕ್ಷಕರಿಗೆ ತರಬೇತಿ ನೀಡಲಾಗಿದೆ. ಈ ಶಾಲೆಗಳಿಗೆ ಒಬ್ಬ ಸಹಾಯಕಿಯನ್ನು ಸರ್ಕಾರ ನೇಮಿಸಿದೆ. ಶಿಕ್ಷಕರಿಗೆ ಕಾರ್ಯಾಗಾರದ ಮೂಲಕ ತರಬೇತಿ ಸಹ ನೀಡಲಾಗಿದೆ.

‘ದಾಖಲಾತಿಗೆ ಮಿತಿ ಅನುಸರಿದೆ ಒಮ್ಮೆಯೇ ಎಲ್ಲರಿಗೂಅವಕಾಶ ನೀಡಿದರೆ ಎಲ್‌ಕೆಜಿಗೆ ಗರಿಷ್ಠ 100 ಮಕ್ಕಳು ದಾಖಲಾಗುವ ಅವಕಾಶ ಸಹ ಇರುತ್ತದೆ. ಆಗ ಅಲ್ಲಿ ಮೂರು ಸೆಕ್ಷನ್ ಮಾಡಬೇಕಾಗುತ್ತದೆ. ಒಬ್ಬ ಶಿಕ್ಷಕರನ್ನು ಮಾತ್ರ ನಿಯೋಜಿಸುವ ಕಾರಣ ಉತ್ತಮ ಶಿಕ್ಷಣ ನಿರೀಕ್ಷಣೆ ಸಾಧ್ಯವಿಲ್ಲ. ಆದ್ದರಿಂದಲೇ ಗರಿಷ್ಠ ಮಿತಿ 30ಕ್ಕೆ ನಿಗದಿಗೊಳಿಸಲಾಗಿದೆ’ ಎಂದು ಮಾಹಿತಿ ನೀಡುವರು ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು.

ಈಗಾಗಲೇ ಜಿಲ್ಲೆಯ ಕೆಲವು ಸರ್ಕಾರಿ ಶಾಲೆಗಳಲ್ಲಿ ಹಿರಿಯ ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳವರು ‘ಮಕ್ಕಳ ಮನೆ’ ಹೆಸರಿನಲ್ಲಿ ಎಲ್‌ಕೆಜಿ ಶಿಕ್ಷಣ ಆರಂಭಿಸಿದ್ದಾರೆ. ಈ ಮಕ್ಕಳ ಮನೆಯ ಪ್ರೇರಣೆ ಹೆಚ್ಚಾಗಿದೆ. ಹಿರಿಯ ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳವರು ಸ್ವಯಂ ಪ್ರೇರಿತರಾಗಿ ತಮ್ಮ ಊರಿನ ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ ಆರಂಭಿಸಿದ್ದಾರೆ.

ಅಂಕಿ ಅಂಶ

664ತುಮಕೂರು; ಒಂದನೇ ತರಗತಿಗೆ ದಾಖಲಾತಿ

479 ಮಧುಗಿರಿ’ ಒಂದನೇ ತರಗತಿಗೆ ದಾಖಲಾತಿ

400ತುಮಕೂರು; ಎಲ್‌ಕೆಜಿಗೆ ದಾಖಲಾತಿ

210 ಮಧುಗಿರಿ; ಎಲ್‌ಕೆಜಿಗೆ ದಾಖಲಾತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.