ADVERTISEMENT

ಸ್ಕ್ರ್ಯಾಚ್ ಆ್ಯಂಡ್ ವಿನ್; ಮಹಿಳೆಗೆ ₹ 25 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2019, 11:30 IST
Last Updated 19 ಅಕ್ಟೋಬರ್ 2019, 11:30 IST
   

ತುಮಕೂರು: ನಗರದ ಮರಳೂರಿನ ಪ್ರಗತಿ ಬಡಾವಣೆ ನಿವಾಸಿ ಗಂಗಮ್ಮ ಎಂಬುವರಿಗೆ ‘ಸ್ಕ್ರ್ಯಾಚ್ ಆ್ಯಂಡ್ ವಿನ್’ ಆಟದ ಮೂಲಕ ₹ 12 ಲಕ್ಷದ ಬಹುಮಾನದ ಆಸೆ ತೋರಿಸಿ ನ್ಯಾಪ್ಟಲ್ ಕಂಪನಿಯು ₹ 25.7 ಲಕ್ಷ ವಂಚನೆ ಮಾಡಿರುವುದು ತಡವಾಗಿ ಬೆಳಕಿಗೆ ಬಂದಿದೆ.

₹ 12 ಲಕ್ಷ ಬಹುಮಾನ ಪಡೆಯುವ ಆಸೆಗೆ ಬಿದ್ದ ಗಂಗಮ್ಮ ಅವರು ₹ 25 ಲಕ್ಷ ಕಳೆದುಕೊಂಡಿದ್ದಾರೆ. ಜೂನ್ 20ರಂದು ಅಂಚೆ ಮೂಲಕ ನ್ಯಾಪ್ಟಲ್ ಕಂಪನಿಯು ರಿಜಿಸ್ಟ್ರರ್ಡ್ ಪತ್ರ ಕಳುಹಿಸಿದೆ. ಪತ್ರ ತೆರೆದು ನೋಡಿದಾಗ ಸ್ಕ್ರ್ಯಾಚ್ ಕೂಪನ್ ಇದೆ. ಅದನ್ನು ತೆರೆದು ನೋಡಿದಾಗ ₹ 12 ಲಕ್ಷ ಬಹುಮಾನ ಇರುವುದು ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಂಪನಿಯವರು ಭರ್ತಿ ಮಾಡಲು ತಿಳಿಸಿದ ಹೆಸರು, ಖಾತೆ ಸಂಖ್ಯೆ, ಬ್ಯಾಂಕ್ ಹೆಸರು, ಶಾಖೆ ಹೆಸರು, ಪಾನ್ ನಂಬರ್, ಮೊಬೈಲ್ ಸಂಖ್ಯೆ, ಆಧಾರ್ ಸಂಖ್ಯೆ ನಮೂದಿಸಿ ಕಂಪನಿಯ ವಾಟ್ಸ್‌ಆ್ಯಪ್‌ ನಂಬರ್‌ಗೆ ಗಂಗಮ್ಮ ಅವರು ಕಳಿಸಿದ್ದಾರೆ. ಇದನ್ನು ಕಳಿಸಿದ ಬಳಿಕ ಕಂಪನಿಯ ಎಕ್ಸಿಕ್ಯೂಟಿವ್ ಚೇತನ್‌ಕುಮಾರ್ ಎಂಬುವರು ಕರೆ ಮಾಡಿ ನಿಮಗೆ ₹ 12 ಲಕ್ಷ ಬಹುಮಾನ ಬಂದಿರುವುದು ಖಾತ್ರಿಯಾಗಿದೆ ಎಂದು ಹೇಳಿದ್ದರು. ಅಲ್ಲದೇ ₹ 12 ಲಕ್ಷ ಮೊತ್ತ ನಮೂದಿಸಿದ ಎಚ್‌.ಎಸ್.ಬಿ.ಸಿ ಬ್ಯಾಂಕ್‌ನ ಚೆಕ್‌ ಫೋಟೊ ವಾಟ್ಸ್‌ಆ್ಯಪ್‌ನಲ್ಲಿ ನಲ್ಲಿ ಕಳಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ADVERTISEMENT

ಬಳಿಕ ಕರೆ ಮಾಡಿ ನೀವು ಬಹುಮಾನ ಪಡೆಯಬೇಕಾದರೆ ₹ 48 ಸಾವಿರ ಕಂಪನಿಯ ಖಾತೆಗೆ ಜಮಾ ಮಾಡಬೇಕು. ಮೊದಲ ಕಂತಾಗಿ ₹ 24 ಸಾವಿರ ಜಮಾ ಮಾಡಬೇಕು ಎಂದು ಹೇಳಿದ್ದಾರೆ. ಹೀಗೆ ಹಂತ ಹಂತವಾಗಿ ವಿವಿಧ ಖಾತೆಗಳಿಗೆ ₹ 25.7 ಲಕ್ಷ ಮೊತ್ತವನ್ನು ಕಂಪನಿಯು ಗಂಗಮ್ಮ ಅವರಿಂದ ಜಮಾ ಮಾಡಿಸಿಕೊಂಡಿದೆ. ಬಳಿಕ ಕಂಪನಿಯವರು ನಿಮ್ಮ ಖಾತೆಗೆ ಹಣ ಜಮಾ ಮಾಡುವುದಾಗಿ ಆಸೆ ಹುಟ್ಟಿಸಿ ಅ.9ರಿಂದ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ವಂಚನೆಗೊಳಗಾದ ಗಂಗಮ್ಮ ಗುರುವಾರ ರಾತ್ರಿ ಜಯನಗರ ಠಾಣೆಗೆ ದೂರು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.