ADVERTISEMENT

ತುಮಕೂರು | ‘ಮಾದಕ ಮಾತ್ರೆ’ ಮಾರಾಟ: 7 ಮಂದಿ ಬಂಧನ

​ಪ್ರಜಾವಾಣಿ ವಾರ್ತೆ
Published 30 ಜನವರಿ 2025, 14:24 IST
Last Updated 30 ಜನವರಿ 2025, 14:24 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ತುಮಕೂರು: ನಗರದಲ್ಲಿ ಮತ್ತುಬರಿಸುವ ‘ಟೈಡಾಲ್’ ಮಾತ್ರೆಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಏಳು ಮಂದಿ ಆರೋಪಿಗಳನ್ನು ಹೊಸ ಬಡಾವಣೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ನಗರದ ಯಲ್ಲಾಪುರದ ಮೆಡ್‌ಪ್ಲಸ್ ಔಷಧ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದ ಬಾನು ಪ್ರಕಾಶ್ (32), ಬೆಂಗಳೂರಿನ ಔಷಧ ಮಾರಾಟ ಪ್ರತಿನಿಧಿ ರಾಘವೇಂದ್ರ (43), ಆಟೊ ಪ್ಲಾಸ್ಟ್ ಕಂಪನಿಯ ಸಿಬ್ಬಂದಿ ಅಭಿಷೇಕ (23), ಕ್ಯಾತ್ಸಂದ್ರದವರಾದ ಕಾರು ಚಾಲಕ ಮೊಹಮ್ಮದ್ ಸೈಪ್ (22), ಸೈಯದ್ ಲುಕ್ಮಾನ್ (23), ಅಫ್ತಬ್ (23), ಅಮರಜ್ಯೋತಿ ನಗರದ ಗುರುರಾಜ್ (28) ಬಂಧಿತರು.

ಎಸ್‌ಐಟಿ, ರೈಲ್ವೆ ಹಳಿಗಳ ಪಕ್ಕ, ಉಪ್ಪಾರಹಳ್ಳಿ, ಶ್ರೀದೇವಿ ಕಾಲೇಜುಗಳ ಬಳಿ ಕೆಲವು ಹುಡುಗರು ಔಷಧ ಮಾರಾಟ ಮಳಿಗೆಯಲ್ಲಿ ಟೈಡಾಲ್ ಮಾತ್ರೆಗಳನ್ನು ಖರೀದಿಸುವುದನ್ನು ಮೆಡ್‌ಪ್ಲಸ್‌ನಲ್ಲಿ ಕೆಲಸ ಮಾಡುತ್ತಿದ್ದ ಬಾನು ಪ್ರಕಾಶ್ ಗಮನಿಸಿದ್ದರು. ರಾಘವೇಂದ್ರ ಮೂಲಕ ಬೆಂಗಳೂರಿನಿಂದ ಮಾತ್ರೆಗಳನ್ನು ತರಿಸಿಕೊಂಡು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು. ಬೇಡಿಕೆ ಮತ್ತಷ್ಟು ಹೆಚ್ಚಿದ್ದರಿಂದ ಇಬ್ಬರು ಸೇರಿಕೊಂಡು ಮತ್ತಷ್ಟು ದುಬಾರಿ ದರಕ್ಕೆ ಮಾರುತ್ತಿದ್ದರು.

ADVERTISEMENT

ಮಾತ್ರೆ ಅಗತ್ಯ ಇದ್ದವರಿಗೆ ತಮ್ಮ ಮೊಬೈಲ್ ಸಂಖ್ಯೆ ನೀಡಿ ಸಂಪರ್ಕ ಸಾಧಿಸಿದ್ದರು. ಶ್ರೀದೇವಿ ಕಾಲೇಜು ಬಳಿ ಹಾಗೂ ಕೈಗಾರಿಕಾ ಪ್ರದೇಶಗಳಿಗೆ ಕರೆಸಿಕೊಂಡು ಹಣ ಪಡೆದುಕೊಂಡು ಮಾತ್ರೆ ಕೊಡುತ್ತಿದ್ದರು. ಜತೆಗೆ ಬಂಧಿತರಾಗಿರುವ ಇತರ ಆರೋಪಿಗಳಿಗೆ ಮಾತ್ರೆ ಕೊಟ್ಟು ಮಾರಾಟ ಮಾಡಿಸುತ್ತಿದ್ದು ತನಿಖೆ ವೇಳೆ ಗೊತ್ತಾಗಿದೆ.

ನಗರದಲ್ಲಿ ಇತ್ತೀಚೆಗೆ ಶಾಲಾ, ಕಾಲೇಜು, ಪಾರ್ಕ್, ನಿರ್ಜನ ಪ್ರದೇಶಗಳಲ್ಲಿ ಇಂತಹ ಮತ್ತುಬರಿಸುವ ಮಾತ್ರೆಗಳ ಖಾಲಿ ಕವರ್‌ಗಳು, ಸಿರಂಜ್, ಸಿಗರೇಟ್ ಫಿಲ್ಟರ್, ಇತರೆ ಮಾದಕ ವಸ್ತುಗಳು ಬಿದ್ದಿರುವುದು ಪತ್ತೆಯಾಗಿತ್ತು. ಇದರ ಜಾಡು ಹಿಡಿದು ತನಿಖೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಇನ್‌ಸ್ಪೆಕ್ಟರ್ ಪುರುಷೋತ್ತಮ್, ಹೊಸಬಡಾವಣೆ ಪೊಲೀಸ್ ಠಾಣೆ ಪಿಎಸ್ಐ ಭಾರತಿ, ಎಎಸ್ಐ ಆಂಜಿನಪ್ಪ, ಸಿಬ್ಬಂದಿಗಳಾದ ಮಂಜುನಾಥ್, ಕೆ.ಟಿ.ನಾರಾಯಣ, ತಿಲಕ್ ಪಾರ್ಕ್ ಠಾಣೆಯ ನಿಜಾಮುದ್ದೀನ್, ಮಧು, ಸುನಿಲ್, ನದಾಫ್, ಲೋಕೇಶ್‌ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.