ತುಮಕೂರು: ಹಿರಿಯ ನಾಗರಿಕರಿಗಾಗಿ ತಂದಿರುವ ಹಿರಿಯ ನಾಗರಿಕರ ಹಾಗೂ ಪಾಲಕರ ಜೀವನ ಸಂರಕ್ಷಣಾ ಕಾಯ್ದೆ ಸಮರ್ಪಕವಾಗಿ ಜಾರಿಯಾಗುತ್ತಿಲ್ಲ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾಯಾಧೀಶರಾದ ನೂರುನ್ನೀಸಾ ಇಲ್ಲಿ ಗುರುವಾರ ವಿಷಾದಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಹಿರಿಯ ನಾಗರಿಕರ ಕಾಯ್ದೆಯು ಹಿರಿಯ ಜೀವಗಳಿಗೆ ನೆರವಾಗುತ್ತಿಲ್ಲ ಎಂದರು.
ಹಿರಿಯ ನಾಗರಿಕರು ಚರ, ಸ್ಥಿರಾಸ್ತಿಯನ್ನು ತಮ್ಮ ಅಂತ್ಯ ಕಾಲದವರೆಗೂ ಯಾರಿಗೂ ವರ್ಗಾಯಿಸಬಾರದು. ಮಕ್ಕಳಿಗೆ ಆಸ್ತಿ ವಿಲೇವಾರಿಯಾದ ನಂತರ ನೋಡಿಕೊಳ್ಳಲು ನಿರ್ಲಕ್ಷ್ಯ ವಹಿಸಿದರೆ ಅವರ ಹೆಸರಿಗೆ ಮಾಡಿರುವ ಖಾತೆ ರದ್ದುಪಡಿಸುವ, ಮರು ನೋಂದಣಿ ಮಾಡುವ ಷರತ್ತನ್ನು ಹಕ್ಕು ಪತ್ರದಲ್ಲಿ ಸೇರಿಸಬೇಕು ಎಂದು ಸಲಹೆ ನೀಡಿದರು.
ಮೌಲ್ಯರಹಿತ ಶಿಕ್ಷಣದಿಂದ ಮಕ್ಕಳು ಹಿರಿಯರನ್ನು ಅಸಡ್ಡೆಯಿಂದ ಕಾಣುವ ಪರಿಸ್ಥಿತಿ ಸಮಾಜದಲ್ಲಿ ನಿರ್ಮಾಣವಾಗಿದೆ. ಮಕ್ಕಳಿಗೆ ಚಿಕ್ಕಂದಿನಿಂದಲೇ ಮೌಲ್ಯಯುತ ಶಿಕ್ಷಣ ನೀಡುವ ಮೂಲಕ ಸುಸಂಸ್ಕೃತರನ್ನಾಗಿ ರೂಪಿಸಬೇಕು ಎಂದು ಹೇಳಿದರು.
ಸಚಿವ ಜಿ.ಪರಮೇಶ್ವರ ವಿಶೇಷ ಕರ್ತವ್ಯಾಧಿಕಾರಿ ಡಾ.ನಾಗಣ್ಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಸಿದ್ದರಾಮಣ್ಣ, ಇಲಾಖೆ ಅಧಿಕಾರಿ ದಿನೇಶ್ ಇತರರು ಉಪಸ್ಥಿತರಿದ್ದರು. ಹಿರಿಯ ನಾಗರಿಕರ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿ.ಕೃ.ಶ್ರೀನಿವಾಸ ಶರ್ಮ, ಪುಟ್ಟಬೋರಯ್ಯ, ಎಂ.ಸಿ.ಲಲಿತ, ಪುಟ್ಟನರಸಯ್ಯ, ಇಕ್ಬಾಲ್ ಹುಸೇನ್ ಅವರನ್ನು ಅಭಿನಂದಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.