ADVERTISEMENT

ಲೈಂಗಿಕ ದೌರ್ಜನ್ಯ: 20 ವರ್ಷ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2024, 6:20 IST
Last Updated 21 ಸೆಪ್ಟೆಂಬರ್ 2024, 6:20 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ತುಮಕೂರು: ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಗರ್ಭಿಣಿಯನ್ನಾಗಿ ಮಾಡಿದ ಆರೋಪಿ ಬಾಬು (ಮಹೇಶ್ ಬಾಬು) ಎಂಬಾತನಿಗೆ 20 ವರ್ಷ ಜೈಲು ಶಿಕ್ಷೆ ಹಾಗೂ ₹1 ಲಕ್ಷ ದಂಡ ವಿಧಿಸಿ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಆದೇಶಿಸಿದೆ.

ಪಾವಗಡ ನಿವಾಸಿ ಬಾಬು ಎಂಬಾತ ಬಾಲಕಿಯನ್ನು ಪ್ರೀತಿಸುವಂತೆ ಪೀಡಿಸಿದ್ದಾನೆ. ಇದಕ್ಕೆ ಒಪ್ಪದಿದ್ದಾಗ ಆಕೆಯನ್ನು ಎಳೆದೊಯ್ದು ಅತ್ಯಾಚಾರ ನಡೆಸಿದ್ದ. ಇದೇ ನೆಪ ಮಾಡಿಕೊಂಡು ಹಲವಾರು ಬಾರಿ ಅತ್ಯಾಚಾರ ಮಾಡಿದ್ದ. ಬಾಲಕಿ ಗರ್ಭಿಣಿಯಾಗಿದ್ದನ್ನು ಗಮನಿಸಿದ ಪೋಷಕರು ಪಾವಗಡ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಪೊಲೀಸ್ ಇನ್‌ಸ್ಪೆಕ್ಟರ್ ಡಿ.ನಾಗರಾಜು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಶಿಕ್ಷೆ ವಿಧಿಸಿದ್ದಾರೆ. ಜತೆಗೆ ನೊಂದ ಬಾಲಕಿಗೆ ₹5 ಲಕ್ಷ ಪರಿಹಾರ ನೀಡುವಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಆದೇಶಿಸಿದ್ದಾರೆ.

ADVERTISEMENT

ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಕೆ.ಎಸ್.ಆಶಾ ವಾದ ಮಂಡಿಸಿದರು.

ಯುವಕನಿಗೆ ಶಿಕ್ಷೆ: ಕುಣಿಗಲ್ ಪೊಲೀಸ್ ಠಾಣೆ ವ್ಯಾಪ್ತಿಯ ಚಿಕ್ಕಹೊನ್ನೇಗೌಡನಪಾಳ್ಯದಲ್ಲಿ ಬಾಲಕಿ ಮೇಲೆ ನಡೆದಿದ್ದ ದೌರ್ಜನ್ಯ ಪ್ರಕರಣದಲ್ಲಿ ಯುವಕನಿಗೆ 7 ತಿಂಗಳು ಸಜೆ ಹಾಗೂ ₹40 ಸಾವಿರ ದಂಡ ವಿಧಿಸಿ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಆದೇಶಿಸಿದೆ.

ನವೀನ್ ಎಂಬಾತ ಬಾಲಕಿಯನ್ನು ಪ್ರೀತಿಸುವಂತೆ ಒತ್ತಾಯಿಸಿ ದೌರ್ಜನ್ಯ ನಡೆಸಿದ್ದ. ಇನ್‌ಸ್ಪೆಕ್ಟರ್ ಜಮಾಲ್ ಅಹಮ್ಮದ್ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಶೇಷ ಸರ್ಕಾರಿ ಅಭಿಯೋಜಕರಾದ ಕೆ.ಎಸ್.ಆಶಾ ವಾದ ಮಂಡಿಸಿದರು.

ಬಾಲ್ಯ ವಿವಾಹ: 20 ವರ್ಷ ಶಿಕ್ಷೆ

ತುಮಕೂರು: ಬಾಲ್ಯ ವಿವಾಹ ಮಾಡಿಕೊಂಡು ಲೈಂಗಿಕ ದೌರ್ಜನ್ಯ ನಡೆಸಿದ್ದ ಬಾಲಕಿಯ ಸೋದರ ಮಾವ ಮಧುಗಿರಿ ಪಟ್ಟಣದ ಮಾರುತಿ ಎಂಬಾತನಿಗೆ 20 ವರ್ಷ ಶಿಕ್ಷೆ ₹90 ಸಾವಿರ ದಂಡ ವಿಧಿಸಿ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಆದೇಶಿಸಿದೆ. 2021 ಆಗಸ್ಟ್‌ನಲ್ಲಿ ಬಲವಂತವಾಗಿ ಬಾಲಕಿಯನ್ನು ವಿವಾಹವಾಗಿದ್ದ. ಮಧುಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಧೀಶರು ಅಪರಾಧಿಗೆ ಶಿಕ್ಷೆ ವಿಧಿಸಿದ್ದು ₹4 ಲಕ್ಷ ಪರಿಹಾರ ನೀಡುವಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಆದೇಶಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.