ಪಾವಗಡ: ಪಟ್ಟಣದ ಶನೈಶ್ಚರ ದೇಗುಲಕ್ಕೆ ಐದನೇ ಶನಿವಾರ ರಾಜ್ಯ ಸೇರಿದಂತೆ ವಿವಿಧೆಡೆಯಿಂದ ಭಕ್ತಾದಿಗಳು ಆಗಮಿಸಿ ದರ್ಶನ ಪಡೆದರು.
ಕೊನೆಯ ಶ್ರಾವಣ ಶನಿವಾರವಾದ್ದರಿಂದ ಭಕ್ತಾದಿಗಳು ದೇಗುಲದ ಬಳಿ ಬೆಳಗಿನಿಂದಲೇ ಸರದಿಯಲ್ಲಿ ನಿಂತಿದ್ದರು. 5 ಸಾವಿರಕ್ಕೂ ಹೆಚ್ಚಿನ ಭಕ್ತಾದಿಗಳು ಕೇಶ ಮುಂಡನ ಮಾಡಿ ಹರಕೆ ತೀರಿಸಿದರು.
ಶುಕ್ರವಾರ ಸಂಜೆಯಿಂದಲೇ ಆಂಧ್ರ, ತೆಲಾಂಗಣ, ರಾಜ್ಯದ ವಿವಿಧೆಡೆಯಿಂದ ಪಟ್ಟಣಕ್ಕೆ ಭಕ್ತಾದಿಗಳು ಆಗಮಿಸಿದ್ದರಿಂದ ವಾಹನ ದಟ್ಟಣೆ ಹೆಚ್ಚಿತ್ತು. ದೇಗುಲದ ಸುತ್ತ ಮುತ್ತಲ ಪ್ರದೇಶದಲ್ಲಿ ಬ್ಯಾರಿಕೇಡ್ ಅಳವಡಿಸಿ ವಾಹನ ಸಂಚಾರ ನಿಯಂತ್ರಿಸಲಾಯಿತು.
ನವಗ್ರಹ ಪೂಜೆ, ಕುಂಕುಮಾರ್ಚನೆ, ಸರ್ವ ಸೇವೆ, ತೈಲಾಭಿಷೇಕ, ಸೀತಲಾದೇವಿ ಮೂಲ ಯಂತ್ರದ ಬಳಿ ಮಡಿಲಕ್ಕಿ, ತಾಳಿ ಪೂಜೆ, ಕುಂಕುಮಾರ್ಚನೆ ಸೇವೆ ನಡೆಯಿತು.
ಶನೈಶ್ಚರ ವೃತ್ತದ ಬಳಿ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಅಲಂಕೃತ ಬೆಳ್ಳಿ ಪಲ್ಲಕ್ಕಿಯಲ್ಲಿ ಜ್ಯೇಷ್ಠದೇವಿ, ಶನೈಶ್ಚರ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಶನೈಶ್ಚರ ದೇಗುಲ ವೃತ್ತದ ಬಳಿ ಮೂರು ಸುತ್ತು ಮೆರವಣಿಗೆ ನಡೆಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.