ADVERTISEMENT

ತುಮಕೂರು | ಶಿರಾಗೇಟ್ ರಸ್ತೆ ಸಂಚಾರಕ್ಕೆ ಮುಕ್ತ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2024, 5:53 IST
Last Updated 14 ಸೆಪ್ಟೆಂಬರ್ 2024, 5:53 IST
ತುಮಕೂರಿನ ಶಿರಾಗೇಟ್ ರಸ್ತೆಯ ಅಮಾನಿಕೆರೆ ಕೋಡಿ ಬಳಿ ಸೇತುವೆ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿರುವುದು
ತುಮಕೂರಿನ ಶಿರಾಗೇಟ್ ರಸ್ತೆಯ ಅಮಾನಿಕೆರೆ ಕೋಡಿ ಬಳಿ ಸೇತುವೆ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿರುವುದು   

ತುಮಕೂರು: ಕಳೆದ ನಾಲ್ಕೂವರೆ ತಿಂಗಳಿಂದ ಬಂದ್ ಮಾಡಿದ್ದ ಶಿರಾಗೇಟ್ ರಸ್ತೆ ಸಂಚಾರಕ್ಕೆ ಮುಕ್ತವಾಗಿದ್ದು, ಶನಿವಾರ ಅಧಿಕೃತವಾಗಿ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ.

ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಶನಿವಾರ ಬೆಳಿಗ್ಗೆ ಹೊಸದಾಗಿ ನಿರ್ಮಿಸಿರುವ ಸೇತುವೆಯನ್ನು ಉದ್ಘಾಟಿಸಲಿದ್ದು, ನಂತರ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುತ್ತದೆ.

ನಗರದ ಅಮಾನಿಕೆರೆ ಕೋಡಿ ಹಳ್ಳಕ್ಕೆ ಸೇತುವೆ ನಿರ್ಮಾಣ ಕಾಮಗಾರಿಯನ್ನು ಮೇ ತಿಂಗಳ ಆರಂಭದಲ್ಲಿ ಕೈಗೆತ್ತಿಕೊಳ್ಳಲಾಗಿತ್ತು. ಆಗಸ್ಟ್ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಆದರೆ ಎರಡು ವಾರಗಳು ತಡವಾಗಿ ಕೆಲಸ ಪೂರ್ಣಗೊಂಡಿದ್ದು, ಉದ್ಘಾಟನೆಗೆ ಸಜ್ಜಾಗಿದೆ.

ADVERTISEMENT

ಅಮಾನಿಕೆರೆ ಕೋಡಿ ಹಳ್ಳದ ಬಳಿ ಸೇತುವೆ ಕಿರಿದಾಗಿದ್ದು, ವಾಹನಗಳ ದಟ್ಟಣೆಯಿಂದಾಗಿ ನಿರಂತರವಾಗಿ ಅಪಘಾತಗಳು ಸಂಭವಿಸುತ್ತಲೇ ಇದ್ದವು. ಸೇತುವೆ ವಿಸ್ತರಿಸುವಂತೆ ಒತ್ತಡಗಳು ಹೆಚ್ಚಾಗಿದ್ದವು. ಕಳೆದ ವರ್ಷವೇ ಕಾಮಗಾರಿ ಕೈಗೆತ್ತಿಕೊಳ್ಳುವುದಾಗಿ ಹೇಳಿದ್ದರೂ ಸಾಧ್ಯವಾಗಿರಲಿಲ್ಲ. ಈ ವರ್ಷ ನಿರ್ಮಾಣ ಕೆಲಸ ಪೂರ್ಣಗೊಂಡಿದೆ.

ನಗರದ ಮೂಲಕ ಹಾದು ಹೋಗುವ ವಾಹನಗಳು ಶಿರಾಗೇಟ್ ಮಾರ್ಗದಲ್ಲಿ ಸಂಚರಿಸಬೇಕಿತ್ತು. ರಾಜ್ಯದ 15ಕ್ಕೂ ಹೆಚ್ಚು ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿತ್ತು. ಜಿಲ್ಲೆಯ ಶಿರಾ, ಕೊರಟಗೆರೆ, ಮಧುಗಿರಿ, ಪಾವಗಡ ಭಾಗಕ್ಕೂ ಇದೇ ರಸ್ತೆ ಮೂಲಕ ತೆರಳಬೇಕಿತ್ತು. ರಸ್ತೆ ಬಂದ್ ಮಾಡಿದ್ದರಿಂದ ಸಾಕಷ್ಟು ಸಮಸ್ಯೆ ಎದುರಾಗಿತ್ತು. ಎಲ್ಲಾ ವಾಹನಗಳು ಸುತ್ತಿ ಬಳಸಿಕೊಂಡು ಹನುಮಂತಪುರ ಮೂಲಕ ಹಾದು ಹೋಗಬೇಕಿತ್ತು. ಹೊಸ ಸೇತುವೆ ನಿರ್ಮಾಣ ಕೆಲಸ ಪೂರ್ಣಗೊಂಡಿರುವುದರಿಂದ ಜನರು ನಿಟ್ಟುಸಿರು ಬಿಡುವಂತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.