ADVERTISEMENT

ನೀರು ಬಿಡದಿದ್ರೆ ಡೈನಮೈಟ್ ಇಡ್ತೀನಿ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2018, 18:51 IST
Last Updated 12 ಅಕ್ಟೋಬರ್ 2018, 18:51 IST
.
.   

ತುಮಕೂರು: ‘ಹೇಮಾವತಿ ನಾಲೆಗೆ ಡೈನಮೈಟ್ (ಸ್ಫೋಟಕ) ಇಡ್ತೀನಿ. ತಾಕತ್ತಿದ್ದರೆ ತಡೆಯಿರಿ’ ಎಂದು ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ಹೇಮಾವತಿ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಮಾತನಾಡಿದರು.

ಅರಸೀಕೆರೆ ತಾಲ್ಲೂಕಿನಲ್ಲಿ ಒಂದಿಂಚೂ ಮಳೆಯಾಗಿಲ್ಲ. ನಮ್ಮ ತಾಲ್ಲೂಕಿನ ಕೆರೆಗಳು ಬರಿದಾಗಿವೆ ಎಂದು ಸಮಸ್ಯೆ ವಿವರಿಸಿದರು.

ADVERTISEMENT

‘ಹೇಮಾವತಿ ಜಲಾಶಯದಿಂದ ಪೈಪ್‌ಲೈನ್‌ ಮೂಲಕ ಅರಸಿಕೆರೆಗೆ ನೀರು ಹರಿಸಲಾಗುತ್ತಿದೆ. ಈ ನೀರು ಬರುವ ಮೊದಲೇ ತಿಪಟೂರು ತಾಲ್ಲೂಕು ಗಡಿ ಭಾಗದಲ್ಲಿ ಪೈಪ್ ಒಡೆದು, ಪಂಪ್ ಅಳವಡಿಸಿ ನೀರು ತೆಗೆದುಕೊಳ್ಳುತ್ತಿದ್ದಾರೆ. ಇದೇ ಸ್ಥಿತಿ ಮುಂದುವರಿದರೆ ನಾಲೆಗೆ ಡೈನಮೈಟ್ ಇಡ್ತಿನಿ. ಅದೇನ್ ಮಾಡ್ಕೊಳ್ತಿರೋ ಮಾಡ್ಕಳಿ’ ಎಂದು ತಿಪಟೂರು ಶಾಸಕ ಬಿ.ಸಿ.ನಾಗೇಶ್ ಮೇಲೆ ಸಿಡಿಮಿಡಿಗೊಂಡರು.

‘ಅದೇನಾಗೊತ್ತೊ ನೋಡಿಯೇ ಬಿಡೋಣ. ಕೇಸ್ ಆಗುತ್ತಾ. ಆಗಲಿ. ನನಗೂ ನಮ್ಮ ಜನರನ್ನು ಸುಮ್ಮನಿರಿಸಿ ಸಾಕಾಗಿದೆ. ಡೈನಮೈಟ್ ಇಡ್ತಿನಿ’ ಎಂದು ಪುನರುಚ್ಚರಿಸಿದರು.

ತಿಪಟೂರು ಶಾಸಕ ನಾಗೇಶ್ ಮಾತನಾಡಿ, ‘ಆ ರೀತಿ ಕಳೆದ ಎರಡು ತಿಂಗಳಿಂದ ಪೈಪ್‌ ಗಳಿಂದ ನೀರು ತೆಗೆದುಕೊಳ್ಳುವ ಪ್ರಯತ್ನ ನಮ್ಮ ಕ್ಷೇತ್ರದಲ್ಲಿ ಆಗಿಲ್ಲ. ಪೈಪ್‌ಗಳನ್ನೂ ಒಡೆದಿಲ್ಲ. ಈ ಹಿಂದೆ ನಡೆದಿರಬಹುದು’ ಎಂದು ಸಮಾಧಾನ ಪಡಿಸಲು ಯತ್ನಿಸಿದರು.

ಸುಮ್ನೆ ಹೆದರಿಸೋಕೆ ಹೆಳ್ದೇರಿ: ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶಿವಲಿಂಗೇಗೌಡ, ‘ಅಯ್ಯೊ ಅದೇನ್ ಬಿಡಿ. ಸುಮ್ನೆ ಇವರನ್ನ ಹೆದರಿಸೋಕೆ ಹೇಳಿದೆ ಅಷ್ಟೇ’ ಎಂದು ಶಿವಲಿಂಗೇಗೌಡ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.