
ತುಮಕೂರಿನಲ್ಲಿ ಭಾನುವಾರ ವೂಡೇ ಪ್ರತಿಷ್ಠಾನ, ಶುದ್ಧಿ ಚಾರಿಟಬಲ್ ಮತ್ತು ಎಜುಕೇಷನ್ ಟ್ರಸ್ಟ್ ವತಿಯಿಂದ ವಿದ್ಯಾರ್ಥಿ ವೇತನ ವಿತರಿಸಲಾಯಿತು.
ತುಮಕೂರು: ಕಷ್ಟದಲ್ಲಿರುವ ಮಕ್ಕಳನ್ನು ಗುರುತಿಸಿ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶುದ್ಧಿ ಚಾರಿಟಬಲ್ ಮತ್ತು ಎಜುಕೇಷನ್ ಟ್ರಸ್ಟ್ ಸಿಇಒ, ಕಾರ್ಯದರ್ಶಿ ಪ್ರೊ.ಕೆ.ಚಂದ್ರಣ್ಣ ಹೇಳಿದರು.
ನಗರದ ಕೃಷಿಕ್ ಫೌಂಡೇಷನ್ ಸಭಾಂಗಣದಲ್ಲಿ ಭಾನುವಾರ ವೂಡೇ ಪ್ರತಿಷ್ಠಾನ, ಶುದ್ಧಿ ಚಾರಿಟಬಲ್ ಮತ್ತು ಎಜುಕೇಷನ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗ್ರಾಮೀಣ ಭಾಗದ 35 ಹೆಣ್ಣು ಮಕ್ಕಳಿಗೆ ತಲಾ ₹10 ಸಾವಿರ ನೀಡಲಾಗುತ್ತಿದೆ. 61 ಅರ್ಜಿಗಳು ಸಲ್ಲಿಕೆಯಾಗಿದ್ದವು. ತೀರ ಹಣಕಾಸಿನ ನೆರವು ಅಗತ್ಯ ಇರುವ ಮಕ್ಕಳನ್ನು ಗುರುತಿಸಲಾಗಿದೆ. ಉತ್ತಮ ಫಲಿತಾಂಶ ಪಡೆಯುವ ಮಕ್ಕಳಿಗೆ ಮುಂದಿನ ವರ್ಷವೂ ವಿದ್ಯಾರ್ಥಿ ವೇತನ ನೀಡಲಾಗುವುದು ಎಂದರು.
ವೂಡೇ ಪ್ರತಿಷ್ಠಾನದ ಅನುಪಮಾ, ‘ಪ್ರತಿಷ್ಠಾನದಿಂದ ಬಡ, ನಿರ್ಗತಿಕ, ಏಕ ಪೋಷಕ ಹಾಗೂ ಅಂಗವಿಕಲ ಹೆಣ್ಣು ಮಕ್ಕಳಿಗೆ ಸಹಾಯಧನ ವಿತರಿಸಲಾಗುತ್ತಿದೆ. ಮಕ್ಕಳು ಒಳ್ಳೆಯ ಶಿಕ್ಷಣ ಪಡೆದು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು. ಸಾರ್ಥಕ ಜೀವನ ನಡೆಸಬೇಕು’ ಎಂದು ಸಲಹೆ ಮಾಡಿದರು.
ಕೆಪಿಸಿಸಿ ಉಪಾಧ್ಯಕ್ಷ ಮುರಳೀಧರ್ ಹಾಲಪ್ಪ, ‘ಮಕ್ಕಳು ವ್ಯವಸ್ಥೆಯ ವಿರುದ್ಧ ಈಜುವುದು ಕಲಿಯಬೇಕು. ಮೊಬೈಲ್‌ನಿಂದ ದೂರವಿದ್ದು ಬದುಕು ಕಟ್ಟಿಕೊಳ್ಳುವತ್ತ ಗಮನ ಹರಿಸಬೇಕು. ಗುಣಮಟ್ಟದ ಶಿಕ್ಷಣ ಪಡೆದು ಉನ್ನತ ಹುದ್ದೆ ಅಲಂಕರಿಸಬೇಕು’ ಎಂದು ತಿಳಿಸಿದರು.
ಹೇರಿಟೇಜ್ ಫೌಂಡೇಷನ್ ಸಿಇಒ ಕಲ್ಪನಾ ಮುರಳೀಧರ್ ಹಾಲಪ್ಪ, ವೂಡೇ ಪ್ರತಿಷ್ಠಾನದ ನಾಗರತ್ನಮ್ಮ, ಶೀಲಾ ರಾಜು, ಶುದ್ಧಿ ಚಾರಿಟಬಲ್ ಟ್ರಸ್ಟ್‌ನ ಸೌಮ್ಯಾ ಪ್ರದೀಪ್, ಎಚ್.ವಿ.ಸುಗುಣಾ, ಉಮಾದೇವಿ ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.